Tata Motors: ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್

|

Updated on: Nov 08, 2022 | 1:11 PM

ಟಾಟಾ ಮೋಟಾರ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇದೀಗ ಉತ್ಪಾದನೆಯಲ್ಲಿ ಕಂಪನಿಯು ಹೊಸ ಮೈಲಿಗಲ್ಲು ಸಾಧಿಸಿದೆ.

Tata Motors: ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್
ಎಲೆಕ್ಟ್ರಿಕ್ ಕಾರು ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಟಾಟಾ ಮೋಟಾರ್ಸ್
Follow us on

ಎಲೆಕ್ಟ್ರಿಕ್ ಕಾರು(Electric Car) ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಕಂಪನಿಯು ಇದೀಗ ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 50 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡಿ ಹೊಸ ಮೈಲಿಗಲ್ಲು ಸಾಧಿಸಿದೆ. 2019ರಲ್ಲಿ ಮೊದಲ ಬಾರಿಗೆ ಇವಿ ಕಾರು ಉತ್ಪಾದನೆ ಆರಂಭಿಸಿದ ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ, ನೆಕ್ಸಾನ್ ಇವಿ ಮ್ಯಾಕ್ಸ್, ಟಿಗೋರ್ ಇವಿ, ಟಿಯಾಗೋ ಇವಿ ಮತ್ತು ಎಕ್ಸ್ ಪ್ರೆಸ್ಸ್-ಟಿ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಕಾರು ಉತ್ಪಾದನೆಯಲ್ಲಿ ನಂ.1

2019ರಲ್ಲಿ ಮೊದಲ ಬಾರಿಗೆ ಟಿಗೋರ್ ಇವಿ ಬಿಡುಗಡೆ ಮೂಲಕ ಎಲೆಕ್ಟ್ರಿಕ್ ಕಾರು ಉತ್ಪಾದನಾ ಮಾರುಕಟ್ಟೆ ಪ್ರವೇಶಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಆರಂಭದಲ್ಲಿ ಫ್ಲಿಟ್ ಕಂಪನಿಗಳಿಗೆ ಮಾತ್ರ ಇವಿ ಕಾರು ವಿತರಣೆ ಆರಂಭಿಸಿತ್ತು. ತದನಂತರ 2020ರಲ್ಲಿ ಬಿಡುಗಡೆ ಮಾಡಲಾದ ನೆಕ್ಸಾನ್ ಇವಿ ಬಿಡುಗಡೆಯ ಮೂಲಕ ಹೊಸ ಸಂಚಲನ ಮೂಡಿಸಿತು. ಆರಂಭದಲ್ಲಿ ಇವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗಿತ್ತಾದರೂ ಕೋವಿಡ್ ಹೊಡೆತದಿಂದ ಮಾರಾಟವು ಸಾಕಷ್ಟು ಇಳಿಕೆ ಕಂಡಿತ್ತು.

2020ರಲ್ಲಿ ಸಾಧರಣ ಬೇಡಿಕೆ ಹೊಂದಿದ್ದ ಟಾಟಾ ಇವಿ ಕಾರುಗಳ ಮಾರಾಟವು 2021ರಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲು ಆರಂಭಿಸಿತು. ಕಳೆದ ಒಂದೂವರೆ ವರ್ಷದಲ್ಲಿ ಟಾಟಾ ಇವಿ ಕಾರುಗಳ ಮಾರಾಟ ಪ್ರಮಾಣವು ತಿಂಗಳಿನಿಂದ ತಿಂಗಳಕ್ಕೆ ಸಾಕಷ್ಟು ಏರಿಕೆಯಾಗಿದೆ. ಆರಂಭದಲ್ಲಿ ಪ್ರತಿ ತಿಂಗಳು 200 ರಿಂದ 300 ಯುನಿಟ್ ಇವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಟಾಟಾ ಕಂಪನಿಯು ಇದೀಗ ತಿಂಗಳಿಗೆ ಸರಾಸರಿಯಾಗಿ 3 ಸಾವಿರ ಯುನಿಟ್ ಮಾರಾಟ ಮಾಡುತ್ತಿದೆ.

ಹೆಚ್ಚುತ್ತಿರುವ ಇಂಧನಗಳ ದರ ಮತ್ತು ನಿರ್ವಹಣಾ ವೆಚ್ಚದ ಪರಿಣಾಮ ಹೊಸ ವಾಹನ ಖರೀದಿದಾರರೂ ಇವಿ ವಾಹನಗಳತ್ತ ಗಮನಹರಿಸುತ್ತಿದ್ದು, ಬಜೆಟ್ ಬೆಲೆ, ಹೆಚ್ಚಿನ ಮಟ್ಟದ ಮೈಲೇಜ್ ಮತ್ತು ಗರಿಷ್ಠ ವಾರಂಟಿ ಹೊಂದಿರುವ ಕಾರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಶೇ. 88 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದು, ಟಾಟಾ ಇವಿ ಕಾರುಗಳ ಮಾರಾಟದಲ್ಲಿ ನೆಕ್ಸಾನ್ ಇವಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದುವರೆಗೆ ಉತ್ಪಾದನೆಯಾದ ಟಾಟಾ ಇವಿ ಕಾರುಗಳಲ್ಲಿ ಶೇ. 75ಕ್ಕಿಂತಲೂ ಹೆಚ್ಚು ನೆಕ್ಸಾನ್ ಕಾರುಗಳಿದ್ದು, ಇದು ಗ್ರಾಹಕರ ಬೇಡಿಕೆಯೆಂತೆ ನೆಕ್ಸಾನ್ ಇವಿ ಮತ್ತು ನೆಕ್ಸಾನ್ ಇವಿ ಮ್ಯಾಕ್ಸ್ ವೆರಿಯೆಂಟ್ ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತಲೂ ಅತ್ಯಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಹಿನ್ನಲೆ ನೆಕ್ಸಾನ್ ಇವಿ ಮ್ಯಾಕ್ಸ್ ಕಾರು ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಮ್ಯಾಕ್ಸ್ ಮಾದರಿಯಲ್ಲಿ 3.3 kW ಮತ್ತು 7.2 kW AC ಫಾಸ್ಟ್ ಚಾರ್ಜಿಂಗ್ ಆಯ್ಕೆ ನೀಡಲಾಗಿದ್ದು, ಇದು ಆರಂಭಿಕವಾಗಿ ರೂ. 18.34 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 20.04 ಲಕ್ಷ ಬೆಲೆ ಹೊಂದಿದೆ.

ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಈ ಹಿಂದಿನ 30kWh ಬ್ಯಾಟರಿ ಪ್ಯಾಕ್ ಸ್ಥಾನಕ್ಕೆ ಹೊಸದಾಗಿ 40.5kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 437 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ. ಇದರೊಂದಿಗೆ ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ಹೊಸ ಕಾರು 95kW ಎಲೆಕ್ಟ್ರಿಕ್ ಮೋಟಾರ್ ಮೂಲಕ 143 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

ಭರ್ಜರಿ ಬೇಡಿಕೆ ನೀರಿಕ್ಷೆಯಲ್ಲಿ ಟಿಯಾಗೋ ಇವಿ

ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮತ್ತೊಂದು ಹಂತದ ಬೆಳವಣೆಯ ನೀರಿಕ್ಷೆಯಲ್ಲಿದ್ದು, ಬಜೆಟ್ ಬೆಲೆಯೊಂದಿಗೆ ಹೊಸ ಟಿಯಾಗೋ ಇವಿ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಇವಿ ಕಾರು ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಜನವರಿಯಲ್ಲಿ ವಿತರಣೆ ಆರಂಭಿಸಲಿದ್ದು, ಇದುವರೆಗೆ ಸುಮಾರು 15 ಸಾವಿರಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.

ಟಿಯಾಗೋ ಇವಿ ಕಾರು ವಿವಿಧ ತಾಂತ್ರಿಕ ಸೌಲಭ್ಯಗಳನ್ನು ಆಧರಿಸಿ ಎಕ್ಸ್ಇ, ಎಕ್ಸ್ ಟಿ, ಎಕ್ಸ್ ಜೆಡ್ ಪ್ಲಸ್, ಎಕ್ಸ್ ಜೆಡ್ ಪ್ಲಸ್ ಟೆಕ್ ಲಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 11.79 ಲಕ್ಷ ಬೆಲೆ ಹೊಂದಿದ್ದು, ಇದು 19.2kWh ಮತ್ತು 24kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 250 ರಿಂದ 315 ಕಿ.ಮೀ ಮೈಲೇಜ್ ನೀಡುತ್ತದೆ.

Published On - 12:37 pm, Tue, 8 November 22