ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಹೊಸ ನೆಕ್ಸಾನ್ ಕಂಪ್ಯಾಕ್ಟ್ ಎಸ್ ಯುವಿ ಮೇಲೆ ಮೊದಲ ಬಾರಿಗೆ ಆಕರ್ಷಕ ಆಫರ್ ಗಳನ್ನು ಘೋಷಣೆ ಮಾಡಿದೆ. ನೆಕ್ಸಾನ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಗಳ ಮೇಲೂ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳು ಈ ತಿಂಗಳು ಕೊನೆಯ ತನಕವೂ ಲಭ್ಯವಿರಲಿವೆ.
ಟಾಟಾ ಮೋಟಾರ್ಸ್ ಹೊಸ ಆಫರ್ ಗಳಲ್ಲಿ ನೆಕ್ಸಾನ್ ಖರೀದಿಸುವ ಗ್ರಾಹಕರಿಗೆ ವಿವಿಧ ವೆರಿಯೆಂಟ್ ಗಳನ್ನು ಆಧರಿಸಿ ರೂ. 16 ಸಾವಿರದಿಂದ ರೂ. 1 ಲಕ್ಷದ ತನಕ ಆಫರ್ ಸಿಗಲಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ಸ್ಮಾರ್ಟ್ ಆಪ್ಷನ್ ವೆರಿಯೆಂಟ್ ಹೊರತುಪಡಿಸಿ ಇನ್ನುಳಿದ ಎಲ್ಲಾ ವೆರಿಯೆಂಟ್ ಗಳಲ್ಲಿ ಆಫರ್ ಗಳು ಲಭ್ಯವಿವೆ.
ನೆಕ್ಸಾನ್ ಕಾರಿನ ಸ್ಮಾರ್ಟ್ ವೆರಿಯೆಂಟ್ ಗಳ ಮೇಲೆ ರೂ. 16 ಸಾವಿರದಿಂದ ರೂ.40 ಸಾವಿರ ಆಫರ್ ಲಭ್ಯವಿದ್ದರೆ, ಪ್ಯೂರ್ ವೆರಿಯೆಂಟ್ ಗಳ ಮೇಲೆ ರೂ. 20 ಸಾವಿರದಿಂದ ರೂ. 40 ಸಾವಿರ ತನಕ ಆಫರ್ ಪಡೆಯಬಹುದಾಗಿದೆ. ಹಾಗೆಯೇ ಕ್ರಿಯೆಟಿವ್ ವೆರಿಯೆಂಟ್ ಗಳ ಮೇಲೆ ರೂ. 60 ಸಾವಿರದಿಂದ ರೂ. 1 ಲಕ್ಷದ ತನಕ ಮತ್ತು ಫಿಯರ್ಲೆಸ್ ವೆರಿಯೆಂಟ್ ಗಳ ಮೇಲೆ ರೂ. 60 ಸಾವಿರ ತನಕ ಆಫರ್ ನೀಡಲಾಗುತ್ತಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ 6 ಏರ್‌ಬ್ಯಾಗ್ ಗಳ ಸುರಕ್ಷತೆ ಹೊಂದಿರುವ ಕಾರುಗಳು!
ಇನ್ನು ಹೊಸ ವೆರಿಯೆಂಟ್ ಗಳೊಂದಿಗೆ ನೆಕ್ಸಾನ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ಸಬ್ ವೆರಿಯೆಂಟ್ ಗಳಲ್ಲಿ ಮಾರಾಟವಾಗುತ್ತಿದ್ದು, ಇವು ವಿವಿಧ ಎಂಜಿನ್ ಆಯ್ಕೆ, ಫೀಚರ್ಸ್ ಗಳಿಗೆ ಅನುಗುಣವಾಗಿ ಎಕ್ಸ್ ಶೋರೂಂ ಪ್ರಕಾರ ರೂ. 7.99 ಲಕ್ಷದಿಂದ ರೂ.15.60 ಲಕ್ಷ ಬೆಲೆ ಹೊಂದಿದ್ದು, ಈ ಮೂಲಕ ಸುಧಾರಿತ ತಂತ್ರಜ್ಞಾನ ಪ್ರೇರಿತ ವೈಶಿಷ್ಟ್ಯತೆಗಳೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.
ನೆಕ್ಸಾನ್ ಫೇಸ್ ಲಿಫ್ಟ್ ಕಾರು ಸದ್ಯ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇದರಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಹೊಸ ಕಾರಿನಲ್ಲಿ ಟರ್ಬೊ ಪೆಟ್ರೋಲ್ ಆವೃತ್ತಿಯು ಸಹ ಪ್ರಮುಖ ಆಕರ್ಷಣೆಯಾಗಿದೆ. 1.2 ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಯು ಫೈವ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇದರೊಂದಿಗೆ ಹೊಸ ನೆಕ್ಸಾನ್ ಫೇಸ್ ಲಿಫ್ಟ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದೆ. ಇದು ಈ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಸಂಖ್ಯೆಯ ಏರ್ ಬ್ಯಾಗ್ ಗಳನ್ನು ಪಡೆದುಕೊಂಡಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಈಗಾಗಲೇ ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ನೆಕ್ಸಾನ್ ಕಾರು ಇದೀಗ ಮತ್ತಷ್ಟು ಬಲಿಷ್ಠವಾಗಿದ್ದು, ಇದರಲ್ಲಿ 6 ಏರ್ ಬ್ಯಾಗ್ ಗಳು , ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್ ಗಳಿರಲಿವೆ.