ಹೊಸ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ಪಂಚ್ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಹೊಸ ಎಸ್‌ಯುವಿಗಳ ಮೂಲಕ ಜನಮನ್ನಣೆ ಗಳಿಸುವಲ್ಲಿಯೂ ಯಶಸ್ವಿಯಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಮೈಕ್ರೊ ಎಸ್ ಯುವಿ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಇದು ಕೇವಲ 34 ತಿಂಗಳ ಅವಧಿಯಲ್ಲಿ ಬರೋಬ್ಬರಿ 4 ಲಕ್ಷ ಯುನಿಟ್ ಮಾರಾಟಗೊಂಡಿದೆ.
ಭಾರತದಲ್ಲಿ 2021ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಟಾಟಾ ಪಂಚ್ ಮೈಕ್ರೊ ಎಸ್‌ಯುವಿಯು ಬಿಡುಗಡೆಯಾದ ಅವಧಿಯಿಂದಲೂ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕೇವಲ 34 ತಿಂಗಳಲ್ಲಿ ಬರೋಬ್ಬರಿ 4 ಲಕ್ಷ ಯುನಿಟ್ ಮಾರಾಟಗೊಳಿಸಲಾಗಿದೆ. ಈ ಮೂಲಕ ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಶೇ. 68 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು, ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯತೆಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.
ಹ್ಯುಂಡೈ ಎಕ್ಸ್ ಟರ್ ಗೆ ಪೈಪೋಟಿಯಾಗಿ ಮಾರಾಟವಾಗುತ್ತಿರುವ ಪಂಚ್ ನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ವಾಯ್ಸ್ ಕಮಾಂಡ್ ನೊಂದಿಗೆ ಎಲೆಕ್ಟ್ರಿಕ್ ಸನ್ ರೂಫ್ ಸೌಲಭ್ಯ ಸೇರಿದಂತೆ ಹತ್ತಾರು ಪ್ರೀಮಿಯಂ ಫೀಚರ್ಸ್ ಹೊಂದಿದೆ. ಈ ಮೂಲಕ ಇದು ಪ್ರತಿ ತಿಂಗಳು ಸರಾಸರಿ 16 ಸಾವಿರ ಯುನಿಟ್ ಮಾರಾಟಗೊಳ್ಳುತ್ತಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 6.13 ಲಕ್ಷದಿಂದ ರೂ. 10.20 ಲಕ್ಷ ಬೆಲೆ ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಪಂಚ್ ಕಾರಿನಲ್ಲಿ 1.2 ಲೀಟರ್, ತ್ರಿ ಸಿಲಿಂಡರ್, ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಲಭ್ಯವಿದೆ. ಇದು 85 ಹಾರ್ಸ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 20.09 ಕಿ.ಮೀ ಮೈಲೇಜ್ ನೀಡಲಿದ್ದು, ಪೆಟ್ರೋಲ್ ಪ್ರೇರಿತ ಸಿಎನ್ ಜಿ ಮಾದರಿಯು ಕೂಡಾ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದು ಪ್ರತಿ ಕೆಜಿಗೆ ಸಿಎನ್ ಜಿಗೆ 26.49 ಕಿ.ಮೀ ಮೈಲೇಜ್ ನೀಡುತ್ತಿದ್ದು, ಇದರಲ್ಲೂ ಕೂಡಾ ಎಲೆಕ್ಟ್ರಿಕ್ ಸನ್ ರೂಫ್ ಸೌಲಭ್ಯಗಳಿವೆ.