ಸಿಎನ್‌ಜಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಎನ್ಆರ್ ಜಿ ಆವೃತ್ತಿಯಲ್ಲಿ ಹೊಸದಾಗಿ ಐಸಿಎನ್‌ಜಿ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 7.40 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಕಾರಿನಲ್ಲಿ ಕಂಪನಿಯು ತಾಂತ್ರಿಕ ಅಂಶಗಳಗಳಿಗೆ ಅನುಗುಣವಾಗಿ ಎಕ್ಸ್ ಟಿ ಮತ್ತು ಎಕ್ಸ್ ಜೆಡ್ ವೆರಿಯೆಂಟ್ ಗಳನ್ನು ಮಾರಾಟ ಮಾಡುತ್ತಿದ್ದು, ಆರಂಭಿಕ ಮಾದರಿಯು ರೂ. 7.40 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 7.80 ಲಕ್ಷ ಬೆಲೆ ಹೊಂದಿದೆ. ಹೊಸ ಕಾರು ಮಾದರಿಯು ಸಾಮಾನ್ಯ ಕಾರು ಮಾದರಿಗಿಂತ ರೂ. 90 ಸಾವಿರದಷ್ಟು ದುಬಾರಿಯಾಗಿದ್ದು, ಇದು ಉತ್ತಮ ಮೈಲೇಜ್ ನೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.
ಎಂಜಿನ್ ಮತ್ತು ಮೈಲೇಜ್
ಹೊಸ ಟಿಯಾಗೋ ಎನ್ಆರ್ ಜಿ ಐಸಿಎನ್‌ಜಿ ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಸಾಮಾನ್ಯ ಟಿಯಾಗೋ ಮಾದರಿಯಲ್ಲಿನ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐಸಿಎನ್‌ಜಿ ಕಿಟ್ ಹೊಂದಿದೆ. ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇದು 72 ಹಾರ್ಸ್ ಪವರ್ ಮತ್ತು 95 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 26.4 ಕಿ.ಮೀ ಮೈಲೇಜ್ ನೀಡಲಿದೆ.
ಡಿಸೈನ್ ಮತ್ತು ಫೀಚರ್ಸ್
ಹೊಸ ಕಾರಿನಲ್ಲಿ ಕಂಪನಿಯು ಐಸಿಎನ್‌ಜಿ ಕಿಟ್ ಜೋಡಣೆ ಹೊರತಾಗಿ ಯಾವುದೇ ಹೊಸ ಬದಲಾವಣೆ ನೀಡಿಲ್ಲವಾದರೂ ಹೊಸ ಕಾರು ಸಾಮಾನ್ಯ ಟಿಯಾಗೋ ಕಾರಿಗಿಂತಲೂ ಹೆಚ್ಚಿನ ಮಟ್ಟದ ಸ್ಪೋಟಿ ಸ್ಟೈಲ್ ಡಿಸೈನ್ ಹೊಂದಿದೆ. ಹೊಸ ಕಾರಿನ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್ ಹೆಚ್ಚಿನ ಆಕರ್ಷಣೆಯಾಗಿದ್ದು, ಫ್ಲಕ್ಸ್ ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಸೌಲಭ್ಯಗಳಿದ್ದು, ಜೊತೆಗೆ ಸಿಎನ್ ಜಿ ಮಾದರಿಯಾಗಿಯೇ ವಿಶೇಷವಾಗಿ ಕ್ಲೌಡಿ ಗ್ರೇ, ಪೋಲಾರ್ ವೈಟ್, ಫೈರ್ ರೆಡ್ ಮತ್ತು ಫೊರೆಸ್ಟಾ ಗ್ರೀನ್ ಬಣ್ಣಗಳ ಆಯ್ಕೆಯಿವೆ.
ಇದರೊಂದಿಗೆ ಹೊಸ ಕಾರಿನ ಒಳಭಾಗದಲ್ಲೂ ಸಾಮಾನ್ಯ ಮಾದರಿಯಲ್ಲಿರುವಂತೆ ಹಲವಾರು ಹೊಸ ಸೌಲಭ್ಯಗಳಿದ್ದು, ಸ್ಪೋರ್ಟಿ ಲುಕ್ ಹೆಚ್ಚಿಸುವುದಕ್ಕಾಗಿ ಚಾರ್ಕೊಲ್ ಥೀಮ್ ಹೊಂದಿರುವ ಕ್ಯಾಬಿನ್ ನೀಡಲಾಗಿದೆ. 7 ಇಂಚಿನ ಹರ್ಮನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 8 ಸ್ಪೀಕರ್ಸ್ ಸರೌಂಡ್ ಆಡಿಯೋ ಸಿಸ್ಟಂ, ಕಂಟ್ರೋಲ್ ಸೌಲಭ್ಯ ಹೊಂದಿರುವ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಕೂಲ್ಡ್ ಗ್ಲೋ ಬಾಕ್ಸ್ ಮತ್ತು ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕನ ಆಸನ ಸೌಲಭ್ಯವಿದೆ.
ಸುರಕ್ಷಾ ಸೌಲಭ್ಯಗಳು
ಹೊಸ ಕಾರುಗಳ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಎಂಟ್ರಿ ಲೆವಲ್ ಕಾರುಗಳಲ್ಲೂ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಟಿಯಾಗೋ ಎನ್ಆರ್ ಜಿ ಐಸಿಎನ್‌ಜಿ ಮಾದರಿಯಲ್ಲೂ ಗುಣಮಟ್ಟದ ಸ್ಟೀಲ್ ಬಳಕೆಯೊಂದಿಗೆ ಡ್ಯುಯಲ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯಗಳಿವೆ.
Published On - 12:30 pm, Tue, 22 November 22