ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಟೊಯೊಟಾ(Toyota) ತನ್ನ ಬಹುನೀರಿಕ್ಷಿತ ಇನೋವಾ ಹೈಕ್ರಾಸ್(Innova Hycross) ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು ಮಾದರಿಯನ್ನು ಕಂಪನಿಯು ಇದೇ ತಿಂಗಳು 25ರಂದು ಅನಾವರಣಗೊಳಿಸುವ ಮೂಲಕ 2023ರ ಜನವರಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಕಂಪನಿಯ ಟಿಎನ್ ಜಿಎ ಪ್ಲ್ಯಾಟ್ ಫಾರ್ಮ್ ಆಧರಿಸಿ ಬಿಡುಗಡೆಯಾಗಲಿದೆ.
ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಎಂಪಿವಿ ಕಾರು ಟೀಸರ್ ಚಿತ್ರದಲ್ಲಿರುವಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿಗೆ ಹೆಚ್ಚಿನ ಮಟ್ಟದ ಸ್ಪೋರ್ಟಿ ಲುಕ್ ನೀಡಲಾಗಿದೆ. ಹೊಸ ಇನೋವಾ ಹೈಕ್ರಾಸ್ ಎಂಪಿವಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಕರೊಲ್ಲಾ ಕ್ರಾಸ್ ವಿನ್ಯಾಸ ಆಧರಿಸಿದ್ದು, ಹೊಸ ಕಾರಿನ ವೈಲ್ಡ್ ಹೆಡ್ ಲ್ಯಾಂಪ್ ಜೊತೆ ಎಲ್ ಆಕಾರದ ಇನ್ ರ್ಸಟ್ ಜೋಡಿಸಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಗ್ಲಾಸ್ ಬ್ಲ್ಯಾಕ್ ಹೊಂದಿರುವ ಹೆಕ್ಸಾಗೊನಲ್, ಸ್ಪೋರ್ಟಿ ಫಾಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೇರಿದಂತೆ ಸ್ಪೋಕ್ ಅಲಾಯ್ ವ್ಹೀಲ್ ಸೇರಿದಂತೆ ಹಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ.
ಎಂಜಿನ್ ಮತ್ತು ಮೈಲೇಜ್
ಪ್ರಸ್ತತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿಯು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ತಲೆಮಾರಿನ ಇನೋವಾ ಹೈಕ್ರಾಸ್ ಕಾರು ಮಾದರಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ 2.7 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಹೊಸದಾಗಿ 2.0 ಲೀಟರ್ ಆಟ್ಕಿನ್ಸ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಪರಿಚಯಿಸಬಹುದಾಗಿದೆ. ಇದು ಸ್ಟ್ರಾಂಗ್ ಹೈಬ್ರಿಡ್ ವೈಶಿಷ್ಟ್ಯತೆಯೊಂದಿಗೆ ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 17 ರಿಂದ 19 ಕಿ.ಮೀ ಮೈಲೇಜ್ ಖಾತ್ರಿಪಡಿಸಲಿದೆ.
ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಟಾಪ್ 5 ಸಿಎನ್ಜಿ ಕಾರುಗಳಿವು!
ನೀರಿಕ್ಷಿತ ಹೊಸ ಫೀಚರ್ಸ್
ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗುತ್ತಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಸನ್ ರೂಫ್, ಸುಧಾರಿತ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಹಲವು ಕಾರ್ ಕನೆಕ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಗರಿಷ್ಠ ಸೇಫ್ಟಿ ಫೀಚರ್ಸ್ ಹೊಂದಿರುವ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಜೋಡಣೆ ಮಾಡಲಾಗುತ್ತಿದೆ.
ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವುದರಿಂದ ಹೊಸ ಕಾರು ಇನೋವಾ ಕ್ರಿಸ್ಟಾ ಕಾರಿಗಿಂತಲೂ ತುಸು ಹೆಚ್ಚುವರಿ ಉದ್ದಳತೆ ಪಡೆದುಕೊಳ್ಳಲಿದ್ದು, ಉದ್ದಳತೆ ಹೆಚ್ಚಿದ್ದಲ್ಲಿ ಬೂಟ್ ಸ್ಪೇಸ್ ಹೆಚ್ಚಳದ ಜೊತೆಗೆ ಮೂರನೇ ಸಾಲಿನ ಆಸನದಲ್ಲಿ ಕೂರುವ ಪ್ರಯಾಣಿಕರಿಗೆ ದೂರದ ಪ್ರಯಾಣಕ್ಕೂ ಅನುಕೂಲಕರವಾದ ಸ್ಥಳವಾಕಾಶ ದೊರೆಯಲಿದೆ.
ನೀರಿಕ್ಷಿತ ಬೆಲೆ
ಹೊಸ ರಿಯಲ್ ಡ್ರೈವಿಂಗ್ ಎಮಿಷನ್ ನಿಯಮ ಜಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ ಡೀಸೆಲ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿ ಹೈಬ್ರಿಡ್ ಮಾದರಿಯತ್ತ ಗಮನಹರಿಸಿರುವ ಟೊಯೊಟಾ ಕಂಪನಿಯು ಡೀಸೆಲ್ ಮಾದರಿಯ ಸ್ಥಾನಕ್ಕಾಗಿ ಸರಿಸಮನಾಗಿ ಹೊಸ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಜೊತೆಗೆ ಹೈಬ್ರಿಡ್ ಮಾದರಿಯು ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದ್ದು, ಹೊಸ ಕಾರು ಹೊಸ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 28 ಲಕ್ಷ ಬೆಲೆ ಅಂತದಲ್ಲಿ ಮಾರಾಟಗೊಳ್ಳಬಹುದಾಗಿದೆ.
Published On - 4:07 pm, Tue, 8 November 22