ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ(Toyota) ಕಂಪನಿ ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಟೊಯೊಟಾ ಹೊಸ ಕಾರುಗಳಲ್ಲಿ ರೀಬ್ಯಾಡ್ಜ್ ಆವೃತ್ತಿಗಳು ಕೂಡಾ ಪ್ರಮುಖವಾಗಿದ್ದು, ಮಾರುತಿ ಸುಜುಕಿ ಜೊತೆಗೂಡಿ ಹೊಸ ರೀಬ್ಯಾಡ್ಜ್ ಕಾರುಗಳನ್ನು ಪರಿಚಯಿಸಲಾಗಿತ್ತಿದೆ. ಮಾರುತಿ ಸುಜುಕಿಯೊಂದಿಗೆ ಈಗಾಗಲೇ ಹಲವಾರು ಕಾರು ಮಾದರಿಗಳನ್ನು ರೀಬ್ಯಾಡ್ಜ್ ಆವೃತ್ತಿಯಾಗಿ ಪರಿಚಯಿಸಿದ್ದು, ಇದೀಗ ಮತ್ತೊಂದು ಬಹುನೀರಿಕ್ಷಿತ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ರೀಬ್ಯಾಡ್ಜ್ ಆವೃತ್ತಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಟೊಯೊಟಾ ಕಂಪನಿ ಗ್ಲಾಂಝಾ, ಅರ್ಬನ್ ಕ್ರೂಸರ್, ಅರ್ಬನ್ ಕ್ರೂಸರ್ ಹೈರೈಡರ್ ಮಾರಾಟ ಮಾಡುತ್ತಿದೆ. ಇದೀಗ ಮಾರುತಿ ಸುಜುಕಿ ಜೊತೆಗಿನ ಪಾಲುದಾರಿಕೆ ಯೋಜನೆ ಅಡಿ ಮತ್ತೊಂದು ಮಹತ್ವದ ರೀಬ್ಯಾಡ್ಜ್ ಕಾರು ಮಾದರಿಯನ್ನು ಸಿದ್ದಪಡಿಸಲಾಗುತ್ತಿದ್ದು, ಎರ್ಟಿಗಾ ಕಾರು ಮಾದರಿ ಆಧರಿಸಿ ಹೊಸ ರೂಮಿಯಾನ್(Rumion) ಬಿಡುಗಡೆಯಾಗುತ್ತಿದೆ. ಹೊಸ ರೂಮಿಯಾನ್ ಎಂಪಿವಿಯನ್ನು ಈಗಾಗಲೇ ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಾಗಿದ್ದು, ಹೊಸ ಕಾರು ಮುಂದಿನ ಕೆಲವೇ ತಿಂಗಳಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುವ ಬಹುತೇಕ ಖಚಿತವಾಗಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ನಾಲ್ಕು ಹೊಸ ಇವಿ ಕಾರುಗಳ ಬಿಡುಗಡೆಗೆ ಸಿದ್ದವಾದ ಟಾಟಾ ಮೋಟಾರ್ಸ್
ಹೊಸ ರೂಮಿಯಾನ್ ಕಾರು ತಾಂತ್ರಿಕವಾಗಿ ಮಾರುತಿ ಸುಜುಕಿ ಎರ್ಟಿಗಾ ಆವೃತ್ತಿಯನ್ನೇ ಆಧರಿಸಿ ನಿರ್ಮಾಣಗೊಂಡಿದ್ದು, ಇದು ಎಸ್, ಜಿ, ವಿ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಹೊಸ ಕಾರು ತಾಂತ್ರಿಕವಾಗಿ ಎರ್ಟಿಗಾ ಆಧರಿಸಿದ್ದರೂ ಕೂಡಾ ಟೊಯೊಟಾ ಕಂಪನಿಯ ಸುಧಾರಿತ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸಲಿದ್ದು, ಇನೋವಾದಿಂದ ಸ್ಪೂರ್ತಿ ಪಡೆದಿರುವ ಫ್ರಂಟ್ ಗ್ರಿಲ್, ಫ್ರಂಟ್ ಬಂಪರ್, ಕ್ರೋಮ್ ಸರೌಂಡ್ ಏರ್ ಡ್ಯಾಮ್, ಮಷಿನ್ ಫಿನಿಶ್ಡ್ ಹೊಂದಿರುವ ಅಲಾಯ್ ವ್ಹೀಲ್ ಸೇರಿ ಹಲವು ಆಕರ್ಷಕ ಫೀಚರ್ಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಹೊಸ ಕಾರಿನ ಒಳಭಾಗದಲ್ಲೂ ಹಲವಾರು ಆಕರ್ಷಕ ಫೀಚರ್ಸ್ ಗಳಿದ್ದು, ಇದು 7 ಸೀಟರ್ ಸೌಲಭ್ಯದೊಂದಿಗೆ ಬ್ಲ್ಯಾಕ್ ಔಟ್ ಡ್ಯಾಶ್ ಬೋರ್ಡ್, ವುಡ್ ಇನ್ಸರ್ಟ್ ಜೋಡಣೆ ಹೊಂದಿದೆ.
ರೂಮಿಯಾನ್ ಕಾರು ಮಾದರಿಯು ಮಾರುತಿ ಸುಜುಕಿ ಎರ್ಟಿಗಾದಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ 1.5 ಲೀಟರ್ ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳನ್ನು ಖರೀದಿ ಮಾಡಬಹುದಾಗಿದೆ. ಇದರಲ್ಲಿ 1.5 ಲೀಟರ್ ಪೆಟ್ರೋಲ್ ಆವೃತ್ತಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಇದು 103 ಹಾರ್ಸ್ ಪವರ್ ಮತ್ತು 137 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 20.51 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಸಿಎನ್ ಜಿ ಮಾದರಿಯು ಕೂಡಾ ಮಧ್ಯಮ ಕ್ರಮಾಂಕದ ವೆರಿಯೆಂಟ್ ಆಧರಿಸಿದ್ದು, ಇದು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡುತ್ತದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಸಿಎನ್‌ಜಿ ಬಿಡುಗಡೆ
ಹೊಸ ರೂಮಿಯಾನ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಇದು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಪಡೆದುಕೊಂಡಿರಲಿದೆ. ಎರ್ಟಿಗಾದಲ್ಲಿರುವಂತೆ ನಾಲ್ಕು ಏರ್ ಬ್ಯಾಗ್, ಸೀಟ್ ಬೆಲ್ಟ್ ವಾರ್ನಿಂಗ್, ಚೈಲ್ಡ್ ಲಾಕ್, ಓವರ್ ಸ್ಪೀಡ್ ವಾರ್ನಿಂಗ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಆ್ಯಂಟಿ ಥೆಫ್ಟ್ ಇಮ್ ಮೊಬಿಲೈಜರ್, ಹಿಂಬದಿಯ ಆಸನದಲ್ಲಿ ತ್ರಿ ಪಾಯಿಂಟ್ ಸೀಟ್ ಬೆಲ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ಸೌಲಭ್ಯ ಒಳಗೊಂಡಿರಲಿದೆ. ಇದರೊಂದಿಗೆ ಹೊಸ ಕಾರು ಶೀಘ್ರದಲ್ಲಿಯೇ ಜಾರಿಗೆ ಬರಲಿರುವ ಭಾರತ್ ಕ್ರ್ಯಾಶ್ ಟೆಸ್ಟಿಂಗ್ ಮಾನದಂಡಗಳನ್ನು ಪೂರೈಸಲು ಸಹಕಾರಿಯಾಗಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡಲಿದೆ.
ಇನ್ನು ಹೊಸ ರೂಮಿಯಾನ್ ಕಾರು ಮಾದರಿಯನ್ನು ಟೊಯೊಟಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದು ಮೂಲ ಕಾರು ಮಾದರಿಯಾದ ಎರ್ಟಿಗಾ ಕಾರಿಗಿಂತಲೂ ತುಸು ದುಬಾರಿಯಾಗಲಿದೆ. ಹೊಸ ಕಾರು ಆಕರ್ಷಕ ವಿನ್ಯಾಸದೊಂದಿಗೆ ಕೆಲವು ಹೆಚ್ಚುವರಿ ಫೀಚರ್ಸ್ ಗಳೊಂದಿಗೆ ಎರ್ಟಿಗಾಗಿಂತಲೂ ರೂ. 50 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ. ಆದರೆ ಹೊಸ ರೀಬ್ಯಾಡ್ಜ್ ಕಾರು ಖರೀದಿಸುವ ಗ್ರಾಹಕರಿಗೆ ಟೊಯೊಟಾ ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ನೀಡಲಿದೆ. ಜೊತೆಗೆ ಗ್ರಾಹಕರು ಹೆಚ್ಚುವರಿ ಮೊತ್ತ ಪಾವತಿ 5 ವರ್ಷಗಳ ತನಕ ವಾರಂಟಿ ವಿಸ್ತರಿಸಿಕೊಳ್ಳಬಹುದಾಗಿದ್ದು, ಇದು ಕಿಯಾ ಕಾರೆನ್ಸ್ ಕಾರಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಿದೆ.