TVS iQube: ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಖರೀದಿ ಇದೀಗ ಮತ್ತಷ್ಟು ದುಬಾರಿ

|

Updated on: Jun 02, 2023 | 9:24 PM

ಎಲೆಕ್ಟ್ರಿಕ್ ವಾಹನಗಳ ಮೇಲಿನ ಪ್ರಮಾಣ ಇಳಿಕೆ ಮಾಡಲಾಗಿದ್ದು, ಸಬ್ಸಿಡಿ ಕಡಿತವಾಗಿರುವ ಹಿನ್ನಲೆಯಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ದುಬಾರಿ ಬೆಲೆ ಪಡೆದುಕೊಂಡಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನ(Electric Vehicles) ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಬ್ಸಿಡಿ ನೀಡುತ್ತಿದ್ದ ಕೇಂದ್ರ ಸರ್ಕಾರವು ಇದೀಗ ಸಬ್ಸಿಡಿ ಪ್ರಮಾಣವನ್ನು ಇಳಿಕೆ ಮಾಡಿದೆ. ಸಬ್ಸಿಡಿ ಇಳಿಕೆ ಮಾಡಿರುವ ಹಿನ್ನಲೆಯಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿಗಳು ಇವಿ ವಾಹನ ಬೆಲೆಯನ್ನು ಪರಿಷ್ಕೃತ ನಿಯಮಗಳಿಗೆ ಅನುಗುಣವಾಗಿ ನಿಗದಿಪಡಿಸಿವೆ. ಹೊಸ ದರ ಪಟ್ಟಿಯಲ್ಲಿ ಟಿವಿಎಸ್ ಐಕ್ಯೂಬ್(TVS iQube) ಬೆಲೆ ಕೂಡಾ ಹೆಚ್ಚಳವಾಗಿದ್ದು, ಇವಿ ಸ್ಕೂಟರ್ ಖರೀದಿ ಇದೀಗ ಮತ್ತಷ್ಟು ಹೊರೆಯಾಗಲಿದೆ.

ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಫೇಮ್ 2 ಸಬ್ಸಿಡಿ ಯೋಜನೆ ಪರಿಚಯಿಸಿದ್ದ ಕೇಂದ್ರ ಸರ್ಕಾರವು ಇದೀಗ ಸಬ್ಸಿಡಿ ಪ್ರಮಾಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಸಬ್ಸಿಡಿ ಪ್ರಮಾಣವನ್ನು ವಿವಿಧ ಇವಿ ವಾಹನಗಳ ಆವೃತ್ತಿಗಳಿಗೆ ಅನುಗುಣವಾಗಿ ಪ್ರತಿ ಕಿಲೋವ್ಯಾಟ್‌ಗೆ ರೂ. 10 ಸಾವಿರದಿಂದ ರೂ. 15 ಸಾವಿರ ತನಕ ಇಳಿಕೆ ಮಾಡಿದೆ.

ಇದನ್ನೂ ಓದಿ: ಅತ್ಯುತ್ತಮ ಮೈಲೇಜ್ ಪ್ರೇರಿತ ಹೋಂಡಾ ಎಸ್ ಪಿ125 ಬಿಡುಗಡೆ

ಫೇಮ್ 2 ಯೋಜನೆಯಡಿಯಲ್ಲಿ ಈ ಹಿಂದೆ ಎಕ್ಸ್ ಶೋರೂಂ ಬೆಲೆಯ ಮೇಲೆ ಗರಿಷ್ಠ ಶೇ. 40ರಷ್ಟು ಸಬ್ಸಿಡಿ ನಿಗದಿಪಡಿಸಿದ್ದ ಕೇಂದ್ರ ಸರ್ಕಾರವು ಇದೀಗ ಶೇ. 15ಕ್ಕೆ ಇಳಿಕೆ ಮಾಡಿದ್ದು, ಕೇಂದ್ರ ಸರ್ಕಾರದ ಕಠಿಣ ನಿರ್ಧಾರದಿಂದ ಇವಿ ವಾಹನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ. ಹೊಸ ಬದಲಾವಣೆ ಪರಿಣಾಮ ಜೂನ್ 1ರಿಂದ ಅನ್ವಯಿಸುವಂತೆ ಟಿವಿಎಸ್ ಕಂಪನಿಯು ಐಕ್ಯೂಬ್ ಇವಿ ಸ್ಕೂಟರ್ ಬೆಲೆ ಹೆಚ್ಚಿಸಿದ್ದು, ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 17 ಸಾವಿರದಿಂದ ರೂ. 22 ಸಾವಿರದಷ್ಟು ದುಬಾರಿಯಾಗಿದೆ.

ಹೊಸ ಸಬ್ಸಿಡಿ ನಿಯಮ ಬದಲಾವಣೆಗೂ ಮುನ್ನ ಐಕ್ಯೂಬ್ ಇವಿ ಸ್ಕೂಟರ್ ಖರೀದಿ ಮೇಲೆ ಒಟ್ಟು ರೂ. 51 ಸಾವಿರ ಸಬ್ಸಿಡಿ ಲಭ್ಯವಾಗುತ್ತಿತ್ತು. ಇದೀಗ ಹೊಸ ಬದಲಾವಣೆ ನಂತರ ರೂ. 22,500 ಮಾತ್ರ ಸಬ್ಸಿಡಿ ನೀಡಲಾಗುತ್ತಿದ್ದು, ಬೆಲೆ ಹೆಚ್ಚಳ ನಂತರ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.23 ಲಕ್ಷ ಬೆಲೆ ಪಡೆದುಕೊಂಡಿದೆ.

ಹೀಗಾಗಿ ಮೇ 20 ಒಳಗಾಗಿ ಬುಕಿಂಗ್ ದಾಖಲಿಸಿರುವ ಗ್ರಾಹಕರಿಗೆ ಮಾತ್ರ ಹಳೆಯ ಬೆಲೆ ಅನ್ವಯಿಸಲಿದ್ದು, ತದನಂತರದಲ್ಲಿ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಹೊಸ ದರ ಅನ್ವಯಿಸಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಯ ಎಥರ್ 450ಎಸ್ ಇವಿ ಸ್ಕೂಟರ್ ಬಿಡುಗಡೆ

ಇನ್ನು ಟಿವಿಎಸ್ ಸ್ಕೂಟರ್ ಮಾದರಿಯು ಸದ್ಯ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ಮೂಲಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸ್ಟ್ಯಾಂಡರ್ಡ್ ಮತ್ತು ಎಸ್ ವೆರಿಯೆಂಟ್ ಗಳೊಂದಿಗೆ 3.04 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿದೆ. ಈ ಮೂಲಕ ಪ್ರತಿ ಚಾರ್ಜ್ ಗೆ 100 ಕಿ.ಮೀ ಮೈಲೇಜ್ ನೀಡಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಐಕ್ಯೂಬ್ ಸ್ಕೂಟರ್ ನಲ್ಲಿ ಸ್ಟ್ಯಾಂಡರ್ಡ್ ಮತ್ತು ಎಸ್ ವೆರಿಯೆಂಟ್ ಗಳಲ್ಲದೇ ಟಿವಿಎಸ್ ಕಂಪನಿಯು ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್ ಟಿ ರೂಪಾಂತರವು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹೊಂದಿರಲಿದೆ.

Published On - 7:27 pm, Fri, 2 June 23