ಸ್ನೇಹಿತರು ಜೊತೆ ಇದ್ದಾಗ ಮನಸ್ಸಿಗೆ ಎಲ್ಲಿಲ್ಲದ ಉತ್ಸಾಹ, ಉಲ್ಲಾಸ. ಜೇನು ಗೂಡಿನಂತಿರುವ ಸ್ನೇಹ ಬಳಗದಲ್ಲಿ ಸಾವಿರ ನೆನಪುಗಳಿರುತ್ತವೆ. ಸ್ನೇಹದ ಕೊಂಡಿ ಶಾಲೆಗಳಲ್ಲಿ ಆರಂಭವಾಗಿ ಕಾಲೇಜು ಮಟ್ಟಕ್ಕೆ ಬೆಳೆದಾಗ ಗಟ್ಟಿಯಾಗುತ್ತದೆ. ಕಾಲೇಜು ಜೀವನದಲ್ಲಿ ಸ್ನೇಹಿತರೊಂದಿಗಿನ ಮೋಜು, ಬೇಕುಬೇಕಂತಲೇ ಶಿಕ್ಷಕರ ಬಾಯಿಯಿಂದ ಬೈಗುಳ ತಿನ್ನಿಸುವಂತೆ ಮಾಡುವುದು, ಒಬ್ಬನನ್ನು ತರಗತಿಯಿಂದ ಹೊರಗೆ ಕಳುಹಿಸಿದಾಗ ಇತರ ಸ್ನೇಹಿತರು ಕೂಡ ನಾನು ಕೂಡ ನೋಟ್ಸ್ ಬರೆದಿಲ್ಲ ಎಂದು ಕುಂಟು ನೆಪ ಹೇಳಿ ಶಿಕ್ಷಕರ ಬಾಯಿಯಿಂದ ಗೆಟ್ ಔಟ್ ಎಂದು ಹೇಳಿಸಿಕೊಳ್ಳದೆ ಸಮಾಧಾನವೇ ಇಲ್ಲ. ಇಂತಹ ಘಟನೆಗಳು ಸ್ನೇಹ ಬಳಗದಲ್ಲಿ ನಡೆಯುತ್ತಿರುತ್ತದೆ.
ತರಗತಿಯಲ್ಲಿ ಒಂದೇ ಬೆಂಚ್ನಲ್ಲಿ ಕುಳಿತಿದ್ದಾಗ ತಮಾಷೆಯ ಮಾತುಗಳನ್ನು ಆಡುವುದು ಸಾಮಾನ್ಯ. ಅದರಲ್ಲೂ ಶಿಕ್ಷಕರು ಪಾಠ ಮಾಡುತ್ತಿರುವಾಗ ಹೀಗೆ ತಮಾಷೆಯ ಮಾತುಗಳನ್ನಾಡುತ್ತಾ, ನಗಾಡುತ್ತಾ ಶಿಕ್ಷಕರ ಕೈಯಿಂದ ಪೆಟ್ಟು, ಬೈಗುಳ ತಿಂದದ್ದೇ ಹೆಚ್ಚು. ರಜೆ ಇದ್ದಾಗ ಹೇಳುವುದು ಬೇಡ, ಬ್ಯಾಟ್ ಬಾಲ್ ಹಿಡಿದುಕೊಂಡು ಮೈದಾನಕ್ಕೆ ಹಾಜರು. ತರಗತಿಗೆ ಸರಿಯಾಗಿ ಹೋಗದಿದ್ದರೂ ಮೈದಾನಕ್ಕೆ ಮಾತ್ರ ಚಾಚುತಪ್ಪದೇ ಹೋಗುತ್ತಿದ್ದೆವು. ಮೈದಾನದಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಆಟವಾಡುತ್ತಿದ್ದಾಗ ಸಮಯ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ. ನಂತರ ಮನೆಗೆ ಹೋದಾಗ ಕೈ ಕಾಲು ನೋವು ಸಹಜ. ಮರುದಿನ ಕಾಲೇಜಿಗೆ ಚಕ್ಕರ್ ಹಾಕಲು ಇದು ಕೂಡ ಒಂದು ಕಾರಣ.
ಒಂದು ಬಾರಿ ಹೊಸ ವರ್ಷವನ್ನು ಮನೆಯಲ್ಲಿ ಆಚರಿಸೋಣ ಎಂದು ಎಲ್ಲರೂ ಒಟ್ಟಿಗೆ ಸೇರಿದೆವು. ಅದು ಮಧ್ಯರಾತ್ರಿಯಾಗಿತ್ತು. ಕೇಕ್, ಗೋಬಿ ಮಂಚೂರಿ ತಿಂದು ಹೊಸ ವರ್ಷವನ್ನು ಸಂಭ್ರಮಿಸಿದೆವು. ಇದು ಸಾವಿರ ನೆನಪುಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಮ್ಮ ಸ್ನೇಹಿತ ವೃಂದದಲ್ಲಿ ಯಾರದ್ದಾದರೂ ಹುಟ್ಟುಹಬ್ಬ ಇದ್ದರೆ, ಬ್ಯಾಚುಲರ್ ಲೈಫ್ಗೆ ಗುಡ್ಬೈ ಹೇಳಿದರೆ ಆಗ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸಿ ಪಾರ್ಟಿ ಮಾಡುವ ಮಜಾನೇ ಬೇರೆ.
ಇನ್ನೂ ಪರೀಕ್ಷೆ ಸಮಯದಲ್ಲಿ ಫೋನ್ನಲ್ಲಿ ಅಥವಾ ಒಟ್ಟಿಗೆ ಸೇರಿ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದೆವು. ಹಾಗಾಗಿ ಎಲ್ಲರಿಗೂ ಉತ್ತಮ ಫಲಿತಾಂಶ ಬರುತ್ತಿತ್ತು. ಕಾಲೇಜ್ ಮುಗಿದಾಗ ಸ್ನೇಹ ಬಳಗದಲ್ಲಿದ್ದವರು ಒಬ್ಬೊಬ್ಬರು ಒಂದೊಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡರು. ಪರಿಣಾಮವಾಗಿ ಬೇರೆಬೇರೆ ಕಡೆಗಳಿಗೆ ಹೋಗುವಂತಾಯಿತು.
ಅದಾಗ್ಯೂ, ನಮ್ಮ ಸ್ನೇಹಜೀವನಕ್ಕೇನು ಅಡಚಣೆಯಾಗಿಲ್ಲ. ಅದೇ ಮೊದಲಿನ ಬಾಂಧವ್ಯ, ಅದೇ ತಮಾಷೆಯ ಮಾತುಗಳು ಇಂದಿಗೂ ಮುಂದುವರೆದಿದೆ. ನಾನೊಂದು ತೀರ ನೀನೊಂದು ತೀರ ಎಂಬಂತೆ ನಾವೆಲ್ಲರೂ ಬೇರೆಬೇರೆ ಕಡೆಗಳಲ್ಲಿ ಇದ್ದರೂ ಬಿಡುವಿನ ಸಮಯದಲ್ಲಿ ಎಲ್ಲರೂ ಕಾನ್ಫರೆನ್ಸ್ ಕಾಲ್ ಮಾಡಿ ಗಂಟೆಗಟ್ಟಲೆ ಮಾತಿನ ಹರಟೆ ಹೊಡೆಯುತ್ತೇವೆ.
ಮುಖವಾಡದ ಪ್ರಪಂಚದಲ್ಲಿ ಒಳ್ಳೆಯ ಸ್ನೇಹಿತರು ಸಿಗುವುದು ಕಡಿಮೆ, ಆದರೆ ನನ್ನ ಶಾಲೆ, ಕಾಲೇಜಿನ ಸ್ನೇಹಿತರ ಬಳಗ ಚಿಕ್ಕದಾದರೂ, ಅವರೊಡನೆ ಕಳೆದ ಸಮಯ, ಈಗ ಕಳೆಯುತ್ತಿರುವ ಸಮಯ ಎಲ್ಲವೂ ಸವಿಸವಿಯಾಗಿದೆ. ನನ್ನೀ ಸ್ನೇಹ ಬಳಗಕ್ಕೆ ಸ್ನೇಹಿತರ ದಿನದ ಶುಭಾಶಯಗಳು.
ಲೇಖನ: ಆನಂದ ಜೇವೂರ್, ಕಲಬುರಗಿ
Published On - 11:01 am, Sun, 7 August 22