ಸುತ್ತಲೂ ನೋಡಿದಾಗ ಉದ್ಯಾನವನದಂತೆ ಕಾಣುವ ಹೂವಿನ ಗಿಡಗಳು, ತರಕಾರಿ ಗಿಡಗಳು, ಹಸಿರ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು. ಇವಿಷ್ಟು ಕಂಡುಬಂದಿದ್ದು ಕಾರ್ಕಳ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಲ್ಲೂರಿನಲ್ಲಿ. ಸುಮಾರು ನೂರು ವರ್ಷಗಳ ಇತಿಹಾಸವಿರುವ ಈ ಸರಕಾರಿ ಶಾಲೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳೇ ತಮ್ಮ ಮನೆಯಿಂದ ಹೂಗಳನ್ನು ತಂದು ಶಾಲೆಯಲ್ಲಿರುವ ತಾಯಿ ಶಾರದೆಗೆ ಅರ್ಪಿಸುವುದು ವಾಡಿಕೆ. ವಿದ್ಯಾ ಸ್ವರೂಪಿಣಿಯಾದ ಶಾರದೆಯ ಪೂಜೆಯ ನಂತರವೇ ತರಗತಿಗಳನ್ನು ಆರಂಭಿಸುವುದರಿಂದ ಇಂದಿಗೂ ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಈ ಶಾಲೆ ಬೆಳೆಸುತ್ತಾ ಬಂದಿದೆ.
ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಭಾಗವಾಗಿರುವ ಸಮಾಜ ವಿಜ್ಞಾನ ಪರಿಸರ ವಿಜ್ಞಾನ ಹೀಗೆ ಕಲಿಕೆಗೆ ಪೂರಕವಾದ ಪ್ರಯೋಗಾತ್ಮಕ ಶಿಕ್ಷಣವನ್ನು ಈ ಆರೋಗ್ಯ ವನದಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಪ್ರತಿಯೊಂದು ವಿದ್ಯಾರ್ಥಿ ಸರಾಗವಾಗಿ ಹಲವು ಆಯುರ್ವೇದ ಗಿಡಮೂಲಿಕೆಗಳನ್ನು ವಿವರಿಸುವಷ್ಟು ಜ್ಞಾನವನ್ನು ಸರ್ಕಾರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ನೀಡಿರುವುದು ವಿಶೇಷ ಸಂಗತಿ. ಶಿಕ್ಷಕರ ವೃಂದ, ವಿದ್ಯಾರ್ಥಿಗಳು ,ಹಳೆ ವಿದ್ಯಾರ್ಥಿಗಳು ಹಾಗೂ ಕೆಲವು ಪರಿಸರಸ್ನೇಹಿ ಸಂಘಟನೆಗಳು ಈ ಸರ್ಕಾರಿ ಶಾಲೆಯಲ್ಲಿ ಇಂದು ಸುಮಾರು 130 ಜಾತಿಯ ಆಯುರ್ವೇದ ಗಿಡಗಳು ಬೆಳೆಸಿದ್ದಾರೆ. ಔಷಧೀಯ ಗಿಡಮೂಲಿಕೆಯ ಪ್ರಯೋಜನವನ್ನು ಬಾಲ್ಯದಲ್ಲಿಯೇ ಅರಿಯಲು ಇಲ್ಲಿನ ಮುಖ್ಯೋಪಾಧ್ಯಾಯರಾದ ನಾಗೇಶ್ ಧನ್ವಂತರಿ ಆರೋಗ್ಯವನವನ್ನು ನಿರ್ಮಿಸಿದ್ದಾರೆ.
ಕಲಿಕೆಯ ಜೊತೆ ಆರೋಗ್ಯವನ್ನು ವೃದ್ಧಿಸುವ ಉದ್ದೇಶದಿಂದ ಶಾಲಾ ಅಂಗಳದಲ್ಲಿ ಬೆಳೆಸಿದ ಬಸಳೆ, ಪಪ್ಪಾಯ ಮೊದಲಾದ ತರಕಾರಿಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಇದರಿಂದ ಯಾವುದೇ ಕಲಬೆರೆಕೆ ಇಲ್ಲದೆ ಶುದ್ಧ ತರಕಾರಿಗಳಿಂದ ಆಹಾರಗಳನ್ನು ತಯಾರಿಸಲಾಗುತ್ತದೆ. ಇದು ಕಲಿಕೆಯ ಜೊತೆಗೆ ತಮ್ಮ ಆರೋಗ್ಯವನ್ನು ವೃದ್ಧಿಸುವ ಮಹತ್ವದ ಶಿಕ್ಷಣವನ್ನು ಈ ಸರ್ಕಾರಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತದೆ.
ಧನ್ವಂತರಿ ಆರೋಗ್ಯವನದಲ್ಲಿ ಜಾಯಿಕಾಯಿ, ಕದಿರೆ, ರಕ್ತಚಂದನ, ಮೈಸೂರು ನೇರಳೆ, ವಿಶೇಷ ತುಳಸಿ, ಲಕ್ಷ್ಮಣ ಫಲ, ಕದಂಬ, ಪುತ್ರಂಜಿವ, ಹೀಗೆ 130ಕ್ಕೂ ಹೆಚ್ಚು ಗಿಡಗಳನ್ನು ಸಂರಕ್ಷಿಸಲಾಗುತ್ತಿದೆ. ಪ್ರತಿ ಮಗು ಬೆಳಗ್ಗೆ ಶಾಲೆಗೆ ಬಂದ ತಕ್ಷಣ ಗಿಡದ ಸುತ್ತ ಹೋಗಿ ಗಿಡಕ್ಕೆ ಶುಭಾಶಯ ಹೇಳಬೇಕು. ಇದು ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವ ವಿಧಾನ ಎನ್ನುತ್ತಾರೆ ಶಾಲೆಯ ಮುಖ್ಯೋಪಾದ್ಯರಾದ ನಾಗೇಶ್ ಅವರು.
ಕಾರ್ಕಳ ತಾಲೂಕಿನಾದ್ಯಂತ ಈ ಪುಟ್ಟ ನಲ್ಲೂರಿನ ಸರ್ಕಾರಿ ಶಾಲೆ ಆರೋಗ್ಯ ವನ ಕಲ್ಪನೆಯಡಿಯಲ್ಲಿ ಮನೆಮಾತಾಗಿದ್ದು, ಬಾಲ್ಯದಲ್ಲಿಯೇ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಿ ಇತರ ಶಾಲೆಗಳಿಗೆ ಮಾದರಿಯಾಗಿ ನಿಂತಿದೆ. ಇಂದು ಹಲವಾರು ಸಾರ್ವಜನಿಕರು ಪರಿಸರಸ್ನೇಹಿ ಚಟುವಟಿಕೆಯಲ್ಲಿ ಸ್ಪಂದಿಸುತ್ತಿರುವುದು ವಿಶೇಷ. ಇಂತಹ ಹಲವಾರು ಪ್ರೋತ್ಸಾಹಕ ಕೈಗಳು ಜೊತೆಯಾಗಿ ನಿಂತರೆ ಈ ಶಾಲೆ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಹಾಯಕ ಎಂಬ ಆಶಯ. ಬರೀ ಪುಸ್ತಕದ ಶಿಕ್ಷಣದಲ್ಲೇ ವಿದ್ಯಾರ್ಥಿಗಳನ್ನು ಸೀಮಿತವಾಗಿಟ್ಟುಕೊಳ್ಳುವ ಬದಲಾಗಿ ಇಂತಹ ಪ್ರಾಕೃತಿಕ ಶಿಕ್ಷಣ ಮಕ್ಕಳಲ್ಲಿ ಹೊಸ ಜ್ಞಾನವನ್ನು ಹೆಚ್ಚಿಸಲು ಪೂರಕವಾಗಿದೆ.
ಅಕ್ಷತಾ .ಕೆ ವರ್ಕಾಡಿ
ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.
Published On - 11:43 am, Thu, 10 February 22