ಕರ್ನಾಟಕ ಹಲವಾರು ಜಾನಪದ ಕಲೆಗಳಿಗೆ, ಹಬ್ಬಗಳಿಗೆ ಹೆಸರುವಾಸಿ ದಕ್ಷಿಣ ಕನ್ನಡ ಇಲ್ಲಿ ಹಲವಾರು ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂತಹ ಹಬ್ಬಗಳಲ್ಲಿ ಬಹಳ ಜನಪ್ರಿಯತೆ ಹೊಂದಿರುವ ಹಬ್ಬ ದಸರಾ. ನಾಡ ಹಬ್ಬ ಎಂದು ಕರೆಯಲ್ಪಡುವ ದಸರಾ ಸಾಂಸ್ಕೃತಿಕ ನಗರಿಯಾಗಿರುವ ಮೈಸೂರಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಸರಾವನ್ನು ತುಳುವಿನಲ್ಲಿ ಮಾರ್ನೆಮಿ, ಹಾಗೂ ಇದಕ್ಕೆ ಇನ್ನೊಂದು ಹೆಸರು ನವರಾತ್ರಿ ಎಂದು ಕರೆಯುತ್ತಾರೆ. ದಸರಾ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಮೈಸೂರು. ಇನ್ನೊಂದು ಕಡೆ ಮಂಗಳೂರು ದಸರಾ.
ದಸರಾ ಬಂತೆಂದರೆ ಸಾಕು ಇನ್ನೂ ಪಿಲಿ ನಲಿಕೆ ಶುರು ಅಂದರೆ ಹುಲಿ ವೇಷ ಮನೆಗೆ ಮನೆಗೆ ಬರುವುದು ಪ್ರಾರಂಭ ಎಂದು. ಮಂಗಳೂರಿನ ಎಲ್ಲಿ ನೋಡಿದರು ಹುಲಿ ವೇಷದ ಅಬ್ಬರ. ಹೌದು ಹುಲಿ ವೇಷ ಇದು ಕರ್ನಾಟಕದ ಕೆಲವೊಂದು ಕಡೆಗಳಲ್ಲಿ ನವರಾತ್ರಿ ಸಮಯದಲ್ಲಿ ಕಾಣಬಹುದು. ಇದು ಕರ್ನಾಟಕದ ಜಾನಪದ ಕಲೆಗಳಲ್ಲಿ ಒಂದು.
ದಸರಾ ಸಮಯದಲ್ಲಿ ಈ ಹುಲಿವೇಷವನ್ನು ಹಾಕಿ ಯುವಕರು ಊರಿನಲ್ಲಿ ಪಟ್ಟಣಗಳಲ್ಲಿ ಮನೆ ಮನೆಗೆ ಹೋಗಿ ನೃತ್ಯದ ಮೂಲಕ ತಮ್ಮ ಕುಸ್ತಿ ಪ್ರದರ್ಶನವನ್ನು ಮಾಡುತ್ತಾರೆ. ನವರಾತ್ರಿಗೆ ವೇಷ ಧರಿಸುವವರು ನವರಾತ್ರಿ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು ಗಣಪತಿಯನ್ನು ನೆನೆದು ಸಂಕಲ್ಪ ಮಾಡುತ್ತಾರೆ. ಅ ದಿನ ತಾಸೆಯವರಿಂದ (ಚರ್ಮದ ವಾದ್ಯ) ಕುಣಿತದ ಅಭ್ಯಾಸ, ಮಕ್ಕಳಾದರೆ ನುರಿತ ಹುಲಿ ವೇಷಧಾರಿಗಳ ಬಳಿ ಒಂದೆರಡು ವಾರ ಕುಣಿತ ಕಲಿಯುತ್ತಾರೆ. ವೇಷ ಹಾಕುವವರು ಮಾಂಸಹಾರ ಸೇವಿಸುವಂತಿಲ್ಲ.
ವೇಷ ಹಾಕಿದ ನಂತರ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆ ನಡೆಸಲಾಗುತ್ತದೆ. ಹುಲಿ ವೇಷದ ವೇಷ -ಭೂಷಣ ನೋಡಲು ಒಂದು ರೀತಿಯೇ ಹುಲಿಯಂತೆ ಇರುತ್ತದೆ. ಹಳದಿ, ಬಿಳಿ, ಕಪ್ಪು ಬಣ್ಣದ ಆಯಿಲ್ ಪೈಂಟ್ ಪೂರ್ತಿ ದೇಹಕ್ಕೆ ಹಚ್ಚಿ ತಲೆಗೆ ಹುಲಿಯ ಹಾಗೆ ಇರುವ ಮುಖವಾಡ, ಸೊಂಟದಿಂದ ಮೊಣಕಾಲಿನವರೆಗೆ ಇರುವ ಉಡುಪು ಹಾಗೂ ಬಾಲವನ್ನು ಕಟ್ಟಿ ಒಂದು ಸ್ಟಪ್ ಹಾಕಿದರೆ ಮೈ ಎಲ್ಲ ರೋಮಾಂಚನವಾಗುತ್ತದೆ. ಒಂದೊಂದು ತಂಡವಾಗಿ ವೇಷ ಹಾಕಿ ಹುಲಿ ಪ್ರದರ್ಶನ ನೀಡುತ್ತಾರೆ. ಪ್ರದರ್ಶನ ಮುಗಿಯುವರೆಗೂ ಬಣ್ಣವನ್ನು ತೆಗೆಯಲಾಗುವುದಿಲ್ಲ, ಎಷ್ಟು ದಿನಗಳ ಕಾಲ ಪ್ರದರ್ಶನ ನೀಡುತ್ತಾರೋ ಅಷ್ಟು ದಿನವು ಮೈ ಮೇಲೆ ಬಣ್ಣ ಹಾಗೆ ಇರುತ್ತದೆ.
ಬ್ಯಾಂಡ್ (ತುಳು ಪದ- ತಾಸೆ ) ಗಳನ್ನು ಬಾರಿಸುತ್ತ ಹುಲಿ ಕುಣಿತ ಪ್ರಾರಂಭವಾಗುತ್ತದೆ. ಹುಲಿ ವೇಷದಾರಿಗಳು ಹಲವಾರು ರೀತಿಯಲ್ಲಿ ತಮ್ಮ ಪ್ರದರ್ಶನವನ್ನು ನೀಡುತ್ತಾರೆ, ಹಲ್ಲಿನಿಂದ ಕಚ್ಚಿ ಅಕ್ಕಿ ಮುಡಿಯನ್ನು ಎತ್ತಿ ಹಿಂದಕ್ಕೆ ಎಸೆಯುದು, ಕೈಯಿಂದ ನಡೆಯುವುದು, ಹಿಂದಕ್ಕೆ ಬಾಗಿ ಹಣವನ್ನು ನಾಲಿಗೆಯಿಂದ ತೆಗೆಯುದು, ಬೆಂಕಿಗೆ ಬಾಯಿಂದ ಸೀಮೆಎಣ್ಣೆಯನ್ನು ಹಾಕಿ ಹಾರಿಸುವುದು, ತೆಂಗಿನಕಾಯಿಯ ಸಿಪ್ಪೆಯನ್ನು ಹಲ್ಲಿಂದ ಕಚ್ಚಿ ತೆಗೆಯುವುದು, ಹೀಗೆ ಅನೇಕ ರೀತಿಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಹಣ ಸಂಪಾದಿಸುತ್ತಾರೆ.
ಕೆಲವರು ಮನೋರಂಜನೆಗಾಗಿ ವೇಷ ಹಾಕಿದರೆ ಇನ್ನೂ ಕೆಲವರು ಹರಕೆ ಹೇಳಿ ಹುಲಿ ವೇಷ ಹಾಕುತ್ತಾರೆ. ದಸರಾದಂದು ದುರ್ಗಾ ದೇವಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹುಲಿ ವೇಷವನ್ನು ಹಾಕುತ್ತಾರೆ, ಕಾರಣ ದುರ್ಗೆಯ ವಾಹನ ಹುಲಿ. ವ್ಯಾಘ್ರತೆಗೆ ಇನ್ನೊಂದು ಹೆಸರೇ ಹುಲಿ ಹಾಗೆಯೇ ದುರ್ಗೆ ದುಷ್ಟರನ್ನು ಸಂಹರಿಸಲು ವ್ಯಾಘ್ರ ಸ್ವರೂಪಿಯಾಗಿ ದುಷ್ಟರನ್ನು ಸಂಹಾರ ಮಾಡುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ, ದುರ್ಗೆಗೆ ಹತ್ತಿರವಾಗಿರುವ ಹುಲಿ ದಸರಾದಂದು ಹುಲಿ ವೇಷ ಹಾಕಿ ದುರ್ಗೆಗೆ ಭಕ್ತಿಯ ಸೂಚಕವಾಗಿದೆ.
9 ದಿನಗಳ ಕಾಲ ದಸರಾ ಹಬ್ಬ ನಡೆಯುತ್ತದೆ, ಕೊನೆಯ ಹಬ್ಬದಂದು ಬಹಳ ಅದ್ದೂರಿಯಾಗಿ ನಡೆಯುತ್ತದೆ, ಹುಲಿ ವೇಷದ ಕುಣಿತವು ನೋಡುಗರನ್ನು ರೋಮಾಂಚನ ಗೊಳಿಸುತ್ತದೆ. ಹೀಗೆ ಹುಲಿ ವೇಷವು ದಸರಾ ಹಬ್ಬದಂದು ತನ್ನ ವಿಭಿನ್ನ ವೇಷದಿಂದ ಜನ ಮಾನ್ಯತೆ ಹೊಂದಿದೆ.
ಕವಿತಾ, ವಿಟ್ಲ