ವೀರವನಿತೆ ರಾಣಿ ಕೆಳದಿ ಚೆನ್ನಮ್ಮ ಕೆಳದಿಯ ಸಂಸ್ಥಾನದ ಅಧಿಕಾರ ವಹಿಸಿಕೊಂಡಿದ್ದು 1672ರಲ್ಲಿ. ಅಂದಿನ ರಾಜಧಾನಿಯಾಗಿದ್ದ ಕವಲೇದುರ್ಗದಲ್ಲಿ ಚೆನ್ನಮಾಜಿಯು ಪಟ್ಟಾಭಿಷಿಕ್ತಳಾಗುತ್ತಾಳೆ. ಕೆಳದಿ ಸಂಸ್ಥಾನದ ಬಗ್ಗೆ ಸಂಶೋಧನೆ ಮತ್ತು ಅಪರೂಪದ ಮಾಹಿತಿಗಳನ್ನು ಕಲೆಹಾಕುತ್ತಿರುವ ಶ್ರೀ ಅಜೇಯ ಶರ್ಮಾರವರು ಹೇಳುವಂತೆ. ಲಿಂಗಣ್ಣ ಕವಿ ವಿರಚಿತ “ಕೆಳದಿನೃಪ ವಿಜಯಂ”. ಇದರಲ್ಲಿ ಬರುವ “ಅಷ್ಟಮಾಶ್ವಾಸಂ” ರಲ್ಲಿ ನಮ್ಮ ಹೆಮ್ಮೆಯ ರಾಣಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ತೀರ್ಥಹಳ್ಳಿ ತಾಲ್ಲೂಕಿನ ಪ್ರಸಿದ್ಧ ಭುವನಗಿರಿದುರ್ಗ (ಇಂದಿನ ಕವಲೆದುರ್ಗ) ಕೋಟೆಯಲ್ಲಿ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ 1593ನೆಯ ವಿರೋಧಿಕೃತ್ ಸಂವತ್ಸರದ ಫಾಲ್ಗುಣ ಬಹುಳ 10ರಂದು (ಪಾಪಮೋಚಿನೀ ಏಕಾದಶಿಯ ಒಂದು ದಿನ ಮುಂಚೆ) ಭುವನಗಿರಿದುರ್ಗದ ಅರಮನೆಯಲ್ಲಿ ಪಟ್ಟಾಭಿಷೇಕ ವಾಯಿತು ಎಂದು ದಾಖಲಿಸಲಾಗಿದೆ. ರಾಣಿಯ ಪಟ್ಟಾಭಿಷೇಕ ಮತ್ತು 11 ಆಗಸ್ಟ್ 2022ರಂದು ಪುಣ್ಯತಿಥಿಯನ್ನು ಆಚರಿಸ ಬೇಕು. ಇನ್ನೂ ಈ ಶಕವರ್ಷ, ಸಂವತ್ಸರ ಮತ್ತು ತಿಥಿಯನ್ನು ಆಂಗ್ಲ ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಬದಲಾವಣೆ ಮಾಡಿದರೆ ರಾಣಿಯ ಪಟ್ಟಾಭಿಷೇಕಗೊಂಡ ದಿನ 24 ಮಾರ್ಚ 1672 (ಗುರುವಾರ) ಎಂದಾಗುತ್ತದೆ.
ರಾಣಿ ಚೆನ್ನಮ್ಮ ತನ್ನ ಮೇಲೆ ದಂಡೆತ್ತಿ ಬಂದ ರಾಜರನ್ನು ಕೆಚ್ಛೆದೆಯಿಂದ ಎದುರಿಸಿ ಗೆದ್ದು ಗಡಿಗಳನ್ನು ಭದ್ರಗೊಳಿಸಿದಳು. ಜಂಗಮ ಮಠಗಳನ್ನು ಅಗ್ರಹಾರಗಳನ್ನು ನಿರ್ಮಿಸಿದಳು. ಶೃಂಗೇರಿ ಮಠಕ್ಕೆ ರಾಜಾಶ್ರಯ ನೀಡಿದಳು. 1,96,000 ಜಂಗಮರಿಗೆ ದಾಸೋಹ, ಕೊಲ್ಲೂರು ಮೂಕಾಂಬಿಕ ದೇವಿಗೆ ಪಚ್ಚೆಯ ಪದಕ ನೀಡಿಕೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದಳು. ಕೃಷಿಗೆ ಆದ್ಯತೆ, ಕೆರೆಕಟ್ಟೆಗಳ ನಿರ್ಮಾಣ ನಿರ್ವಹಣೆ, ಸಾಹಿತ್ಯ ರಚನೆಗೆ ಪ್ರೋತ್ಸಾಹ ಹೀಗೆ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ನೆರವೇರಿಸಿದಳು. 1672 ರಿಂದ 1697ರವರೆಗೆ 25 ವರ್ಷ ಆರು ತಿಂಗಳುಗಳ ಕಾಲ ಸಂಸ್ಥಾನದ ರಾಣಿಯಾಗಿ ಯಶಸ್ವಿಯಾಗಿ ಅಧಿಕಾರ ನಡೆಸುತ್ತಾಳೆ .
ಚಿತ್ರ ಪರಿಚಯ:
ಕೆಳಗಿರುವ ಚಿತ್ರದಲ್ಲಿ ರಾಣಿ ಚೆನ್ನಮಾಜಿಯು ಶಿವಾಜಿಯ ಮಗ ರಾಜಾರಾಮ ಮತ್ತು ತನ್ನ ಮಂತ್ರಿ ಮಂಡಲ ದೊಂದಿಗೆ ಕವಲೇದುರ್ಗದ ಕೋಟೆಯಮೇಲೆ ನಿಂತು, ಕೆಳಗಿರುವ ಮೊಘಲ್ ಸೈನ್ಯವನ್ನು ಎದುರಿಸುವ ತಂತ್ರ ಹೆಣೆಯುತ್ತಿರುವ ದೃಶ್ಯ. ಈ ಅಪರೂಪದ ಚಿತ್ರವನ್ನು ಶ್ರೀಮತಿ ಸುನಂದಾ ಶಶಿಕುಮಾರ್, ಸಾಗರ ಇವರ ಸಂಗ್ರಹದಲ್ಲಿದೆ. ಇದನ್ನು ಅವರಿಗೆ ಕವಲೇದುರ್ಗದಲ್ಲಿರುವ ಮತ್ತಿನ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ನೀಡಿದ್ದು ಎಂದು ಚಿತ್ರದ ಪರಿಚಯ ಮಾಡಿಸಿದರು.
ಮೊಘಲ ಸಾಮ್ರಾಜ್ಯದ ಔರಂಗಜೇಬನನ್ನು ಸೋಲಿಸಿದ ವೀರ ಮಹಿಳೆ:
ಛತ್ರಪತಿ ಶಿವಾಜಿಯ ಮೊದಲ ಮಗ ಸಾಂಬಾಜಿಯನ್ನು ಕೊಂದ ಔರಂಗಜೇಬ ಎರಡನೇ ಮಗ ರಾಜಾರಾಮನನ್ನು ಕೊಂದು ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ರಾಜಾರಾಮನು ಸನ್ಯಾಸಿಯ ವೇಷತೊಟ್ಟು ಚೆನ್ನಮ್ಮಾಜಿಯ ಬಳಿ ರಕ್ಷಣೆ ಕೋರಿ ಬರುತ್ತಾನೆ. ಅವನಿಗೆ ರಕ್ಷಣೆಯ ಅಭಯವನ್ನು ನೀಡುವ ಚೆನ್ನಮ್ಮ ಮೊಘಲ್ ಸೇನೆಯ ನಾಯಕತ್ವವನ್ನು ವಹಿಸಿಕೊಂಡು ಬಂದಿದ್ದ ಔರಂಗಜೇಬನ ಮಗ ಅಜಂ ಷಾ ಮತ್ತು ಸೇನಾಧಿಪತಿ ಜಾ ನಿಸಾರ್ ಖಾನ್ ನನ್ನ ಸೋಲಿಸಿ ಸೆರೆಹಿಡಿದಳು. ನಂತರ ಕ್ಷಮೆಯಾಚಿಸಿ ಪ್ರಾಣ ಭಿಕ್ಷೆಯಾಚಿದ ಕಾರಣ ಬಿಟ್ಟು ಕಳುಹಿಸಿ ಕನ್ನಡಿಗರ ಹಿರಿಮೆ ಹೆಚ್ಚಾಗುವಂತೆ ಮಾಡಿದ ಕೀರ್ತಿ ತನ್ನದಾಗಿಸಿಕೊಳ್ಳುತ್ತಾಳೆ.
ಬರಹ: ಅಂಜನ್ ಕಾಯ್ಕಿಣಿ, ಸಾಗರ
Published On - 3:08 pm, Thu, 31 March 22