ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಸಮಿತಿ ಸಭೆಯು ಡಿಸೆಂಬರ್ 31ನೇ ತಾರೀಕಿನ ಶುಕ್ರವಾರ ದೆಹಲಿಯಲ್ಲಿ ನಿಗದಿ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದರಗಳ ಬಗ್ಗೆ ರಾಜ್ಯ ಸಚಿವರ ಸಮಿತಿಯು ಮಾಡಿದ ಶಿಫಾರಸುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂದ ಹಾಗೆ ಇದು ಭೌತಿಕವಾದ ಸಭೆ ಆಗಿದ್ದು, ಕೆಲವು ಸರಕುಗಳ ಮೇಲಿನ ಸುಂಕದ ರಚನೆಯ ಬಗ್ಗೆ ಕೂಡ ಮಾತುಕತೆ ನಡೆಯಲಿದೆ. ಸಚಿವರ ಗುಂಪು (GoM) ತೆರಿಗೆ ದರಕ್ಕೆ ಸಂಬಂಧಿಸಿದಂತೆ ಸಮಿತಿಗೆ ವರದಿಯನ್ನು ಸಲ್ಲಿಸಲಿದೆ. ಇನ್ವರ್ಟೆಡ್ ಸುಂಕ ರಚನೆಯಲ್ಲಿ ಸಮಿತಿಯು ವಸ್ತುಗಳ ಪರಿಶೀಲನೆ ಮಾಡಿ, ರೀಫಂಡ್ ಪಾವತಿಯನ್ನು ಕನಿಷ್ಠಗೊಳಿಸುವುದಕ್ಕೆ ಸಹಾಯ ಮಾಡಲಿದೆ.
ಜಿಎಸ್ಟಿ ಸಮಿತಿ ಸಭೆಯ ಕಾರ್ಯಸೂಚಿ ಏನು?
ಇತರ ವಿಚಾರಗಳನ್ನು ಚರ್ಚಿಸುವುದರ ಜತೆಗೆ ಪಾದರಕ್ಷೆ ಮತ್ತು ಜವಳಿ ಮೇಲೆ ತೆರಿಗೆ ಏರಿಕೆ ಮಾಡುವ ಬಗ್ಗೆ ಮಾತುಕತೆ ನಡೆಸಲಿದೆ. ಸರ್ಕಾರದ ಅಧಿಸೂಚನೆ ಪ್ರಕಾರ, 1000 ರೂಪಾಯಿ ಒಳಗಿನ ಪಾದರಕ್ಷೆಗಳಿಗೆ ಶೇ 12ರಷ್ಟು ಜಿಎಸ್ಟಿ ಆಗಲಿದೆ. ಮತ್ತೊಂದು ಕಡೆ, ಎಲ್ಲ ಸಿದ್ಧ ಜವಳಿಗೆ (ಹತ್ತಿಯಿಂದ ಸಿದ್ಧವಾದದ್ದನ್ನು ಹೊರತುಪಡಿಸಿ) ಕೂಡ ಶೇ 12ರಷ್ಟು ಜಿಎಸ್ಟಿ ಆಗಲಿದೆ. ಈ ಹಿಂದೆ, ಇವೆಲ್ಲವುಗಳನ್ನು ಶೇ 5ರ ಜಿಎಸ್ಟಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಏರಿಕೆ ನಿರ್ಧಾರವನ್ನು ಮುಂದೂಡುವಂತೆ ರಾಜ್ಯ ಸರ್ಕಾರಗಳು, ವರ್ತಕರು ಒಕ್ಕೂಟಗಳು ಒತ್ತಾಯಿಸಿವೆ. ಇದರಿಂದ ಹಲವು ಸಣ್ಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು ಎಂಬ ಆತಂಕದಲ್ಲಿ ಈ ಬೇಡಿಕೆ ಇಟ್ಟಿವೆ. ಇನ್ನು ಹೀಗೆ ಮಾಡಿದರೆ ಬಡವರಿಗೆ ಹೊರೆ ಆಗಲಿದೆ. ಜೀವನಾವಶ್ಯಕ ಆದ ಬಟ್ಟೆ ಖರೀದಿ ಕಷ್ಟ ಆಗಲಿದೆ ಎಂದಿದ್ದಾರೆ.
ಸಚಿವರ ಗುಂಪಿಗೆ ಸ್ಲ್ಯಾಬ್ಗಳು ಮತ್ತು ದರ ಬದಲಾವಣೆಗಳು ಹಾಗೂ ವಿನಾಯಿತಿ ಪಟ್ಟಿಯಿಂದ ಹೊರಗಿಡುವ ಪಟ್ಟಿಯ ಬಗ್ಗೆ ಶಿಫಾರಸುಗಳನ್ನು ಮಾಡಲಾಗಿದೆ. ಸದ್ಯಕ್ಕೆ ಶೇ 5, ಶೇ 12, ಶೇ 18 ಮತ್ತು ಶೇ 28 ಜಿಎಸ್ಟಿ ದರ ನಾಲ್ಕು ಹಂತದ ಸ್ಲ್ಯಾಬ್ ರಚನೆ ಹೊಂದಿದೆ. ಅಗತ್ಯ ವಸ್ತುಗಳು ಒಂದೋ ವಿನಾಯಿತಿ ಪಡೆದಿರುವುದೋ ಅಥವಾ ತೆರಿಗೆ ಹಾಕುವುದು ಆಗಿರುತ್ತದೆ. ವಿಲಾಸಿ ಹಾಗೂ ಕೆಲವು ನಿರ್ದಿಷ್ಟ ವಸ್ತುಗಳ ಮೇಲೆ ಹೆಚ್ಚಿನ ಸ್ಲ್ಯಾಬ್ ಇದೆ. ಇದಕ್ಕಿಂತ ಹೆಚ್ಚಾಗಿ ಇವುಗಳ ಮೇಲೆ ಸೆಸ್ ಕೂಡ ಇರುತ್ತದೆ.
ರಾಜ್ಯಗಳು ಬಯಸುವುದು ಏನು?
ಪಶ್ಚಿಮ ಬಂಗಾಲದ ಮಾಜಿ ಹಣಕಾಸು ಸಚಿವರಾದ ಅಮಿತ್ ಮಿಶ್ರಾ ಅವರು, ಜವಳಿ ಮೇಲಿನ ಜಿಎಸ್ಟಿಯನ್ನು ಶೇ 5ರಿಂದ ಶೇ 12ಕ್ಕೆ ಏರಿಕೆ ಮಾಡದಂತೆ, ಹಾಗೆ ಮಾಡಿದರೆ ಒಂದು ಲಕ್ಷ ಜವಳಿ ಘಟಕ ಮುಚ್ಚಬೇಕಾಗುತ್ತದೆ ಮತ್ತು 15 ಲಕ್ಷ ಉದ್ಯೋಗ ನಷ್ಟವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರನ್ನು ಆಗ್ರಹಿಸಿದ್ದಾರೆ. ಜವಳಿ ಮೇಲಿನ ಜಿಎಸ್ಟಿ ದರ ಹಿಂಪಡೆಯುವಂತೆ ತೆಲಂಗಾಣ ಕೈಗಾರಿಕೆ ಸಚಿವರಾದ ಕೆ.ಟಿ.ರಾಮರಾವ್ ಆಗ್ರಹಿಸಿದ್ದಾರೆ.
ಇವುಗಳನ್ನು ಹೊರತುಪಡಿಸಿ, ಜಿಎಸ್ಟಿ ಪರಿಹಾರ ಸೆಸ್ ಅನ್ನು ಮತ್ತೆ ಐದು ವರ್ಷ ವಿಸ್ತರಿಸುವಂತೆ ಹಲವು ರಾಜ್ಯಗಳು ಮನವಿ ಮಾಡಿವೆ. ಜಿಎಸ್ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಆಗುವ ತೆರಿಗೆ ಆದಾಯದ ನಷ್ಟವನ್ನು ತುಂಬಿಕೊಡುವುದಾಗಿ ಕೇಂದ್ರ ಹೇಳಿತ್ತು. ಹಾಗೂ ಅದು 2022ರ ಜೂನ್ಗೆ ಕೊನೆ ಆಗಲಿದೆ. ಇದೀಗ ಕೊವಿಡ್ 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಿಎಸ್ಟಿ ಪರಿಹಾರ ಸೆಸ್ ಅನ್ನು ಮತ್ತಷ್ಟು ಸಮಯ ವಿಸ್ತರಿಸುವಂತೆ ಕೇಳಲಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ದೆಹಲಿ, ಪಶ್ಚಿಮ ಬಂಗಾಲ, ತಮಿಳುನಾಡು, ಕೇರಳ, ಛತ್ತೀಸ್ಗಢ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳು ಈ ಬೇಡಿಕೆಯನ್ನು ಇಟ್ಟಿವೆ.
ಇದನ್ನೂ ಓದಿ: GST rate hike on textiles: ಜವಳಿ ಮೇಲಿನ ಜಿಎಸ್ಟಿ ದರ ಏರಿಕೆಗೆ ಹಲವು ರಾಜ್ಯಗಳ ವಿರೋಧ