GST Council Meet: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆ ನಿರ್ಧಾರ ಸರ್ವಾನುಮತದಿಂದ ಮುಂದೂಡಿಕೆ

| Updated By: Srinivas Mata

Updated on: Dec 31, 2021 | 1:28 PM

ಡಿಸೆಂಬರ್ 31ರ ಶುಕ್ರವಾರ ನಡೆಯುತ್ತಿರುವ ಜಿಎಸ್​ಟಿ ಸಮಿತಿ ಸಭೆಯಲ್ಲಿ ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆ ಮುಂದೂಡುವುದಕ್ಕೆ ಸರ್ವಾನುಮತದಿಂದ ನಿರ್ಧಾರ ಮಾಡಲಾಗಿದೆ.

GST Council Meet: ಜವಳಿ ಮೇಲಿನ ಜಿಎಸ್​ಟಿ ದರ ಏರಿಕೆ ನಿರ್ಧಾರ ಸರ್ವಾನುಮತದಿಂದ ಮುಂದೂಡಿಕೆ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

ಜಿಎಸ್​ಟಿ ಸಮಿತಿಯು ಶುಕ್ರವಾರ (ಡಿಸೆಂಬರ್ 31, 2021) ನಡೆದ ಸಭೆಯಲ್ಲಿ ಜವಳಿ ಮೇಲಿನ ಜಿಎಸ್​ಟಿ ದರ ಶೇ 5ರಿಂದ 12ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಮುಂದೂಡುವುದಕ್ಕೆ ಸರ್ವಾನುಮತದಿಂದ ಒಪ್ಪಿದೆ. ಮುಂದಿನ ಜಿಎಸ್​ಟಿ ಸಮಿತಿ ಸಭೆಯಲ್ಲಿ ಭವಿಷ್ಯದ ನಕಾಶೆ ಬಗ್ಗೆ ಚರ್ಚಿಸಲಾಗುವುದು. ಜವಳಿ ಮೇಲಿನ ಜಿಎಸ್​ಟಿ ಶೇ 5ರಿಂದ ಶೇ 12ಕ್ಕೆ ಜನವರಿ 1ರಿಂದ ಜಾರಿಗೆ ಬರಬೇಕಿತ್ತು. ಡಿಸೆಂಬರ್ 30ರಂದು ಹಲವು ರಾಜ್ಯಗಳು ಜನವರಿ 1ರಿಂದ ಜವಳಿ ಉತ್ಪನ್ನಗಳ ಮೇಲಿನ ಹೆಚ್ಚಿನ ತೆರಿಗೆ ದರವನ್ನು ವಿರೋಧಿಸಿ, ದರ ಏರಿಕೆಯನ್ನು ತಡೆಹಿಡಿಯುವಂತೆ ಒತ್ತಾಯಿಸಿದವು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವ ಸಭೆಯಲ್ಲಿ ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಜನವರಿ 1, 2022ರಿಂದ ಜಾರಿಗೆ ಬರುವಂತೆ ಪ್ರಸ್ತುತ ಇರುವ ಶೇಕಡಾ 5ರಿಂದ ಶೇ 12ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಪರವಾಗಿಲ್ಲ ಎಂದು ಹೇಳಿವೆ.

ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್‌ಟಿ ಸಮಿತಿ 46ನೇ ಸಭೆಯು ಡಿಸೆಂಬರ್ 31ರಂದು ನಡೆಯುತ್ತಿದೆ. ದರ ಏರಿಕೆ “ನಿರ್ಧಾರವನ್ನು ತಡೆಹಿಡಿಯುವ” ಗುಜರಾತ್‌ನ ಬೇಡಿಕೆಯನ್ನು, ವರ್ತಕರ ಒಕ್ಕೂಟದ ಮನವಿಯನ್ನು ಪರಿಗಣಿಸಲು ಒಂದೇ ಕಾರ್ಯಸೂಚಿಯೊಂದಿಗೆ ಈ ಸಭೆ ನಡೆದಿದೆ. ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ ಹೆಚ್ಚಳದ ವಿರುದ್ಧ ವರ್ತಕರ ಪ್ರತಿಭಟನೆಯನ್ನು ದೆಹಲಿ ಸರ್ಕಾರ ಬೆಂಬಲಿಸಿದೆ. ಮತ್ತು ಜಿಎಸ್‌ಟಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಡಿಸೆಂಬರ್ 30ರಂದು ಹೇಳಿದ್ದರು.

ಜಿಎಸ್‌ಟಿ ಶೇ 5ರಿಂದ ಶೇ 12ಕ್ಕೆ ಏರಿಕೆ ವಿರೋಧಿಸಿ ಜವಳಿ ವ್ಯಾಪಾರಿಗಳು ನಡೆಸುತ್ತಿರುವ ಪ್ರತಿಭಟನೆ ಸಮರ್ಥನೀಯ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಮತ್ತು ದೆಹಲಿ ಸರ್ಕಾರವು ತೆರಿಗೆ ದರಗಳನ್ನು ಕಡಿಮೆ ಮಾಡಲು ಮುಂದಾಗಿದೆ. ನಾನು ಜವಳಿ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ನಾಳೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸುತ್ತೇನೆ, ಎಂದು ದೆಹಲಿ ಸರ್ಕಾರದ ಹಣಕಾಸು ಇಲಾಖೆಯ ಉಸ್ತುವಾರಿ ಸಚಿವರೂ ಆಗಿರುವ ಸಿಸೋಡಿಯಾ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: GST Council Meet: ಡಿಸೆಂಬರ್ 31ರ ಜಿಎಸ್​ಟಿ ಸಮಿತಿ ಸಭೆಯಲ್ಲಿನ ಪ್ರಮುಖ ನಿರೀಕ್ಷೆ, ಬೇಡಿಕೆಗಳೇನು

Published On - 1:13 pm, Fri, 31 December 21