ನವದೆಹಲಿ, ಆಗಸ್ಟ್ 31: ಹಿಂಡನ್ಬರ್ಗ್ ರಿಸರ್ಚ್ ತನಿಖಾ ವರದಿ (Hindenburg Research) ಬಿಡುಗಡೆಯಾಗಿ ಆರೇಳು ತಿಂಗಳ ಬಳಿಕ ಪತ್ರಕರ್ತರ ಸಮೂಹದ ವೆಬ್ಸೈಟ್ವೊಂದು ತನಿಖಾ ವರದಿಯೊಂದನ್ನು ಪ್ರಕಟಿಸಿದೆ. ಮಾರಿಷಸ್ ದೇಶದ ಅಪಾರದರ್ಶಕ ಫಂಡ್ಗಳ (Opaque Funds) ಮೂಲಕ ಅದಾನಿ ಗ್ರೂಪ್ನ ಬಿಸಿನೆಸ್ ಪಾರ್ಟ್ನರ್ಗಳು ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ ವೆಬ್ಸೈಟ್ನಲ್ಲಿ (OCCRP- Organised Crime and Corruption Reporting Project) ಆರೋಪಿಸಲಾಗಿದೆ. ಅನಾಮಧೇಯ ಪತ್ರಕರ್ತರು ತನಿಖೆ ನಡೆಸಿ ಈ ವರದಿ ರೂಪಿಸಿದ್ದಾರೆನ್ನಲಾಗಿದೆ. ಆದರೆ, ಈ ವರದಿಯನ್ನು ಅದಾನಿ ಗ್ರೂಪ್ ಸಾರಾಸಗಟಾಗಿ ತಳ್ಳಿಹಾಕಿದೆ. ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಪ್ರಸ್ತಾಪವಾಗಿರುವ ಕೆಲ ಅಂಶವನ್ನೇ ಮತ್ತೆ ಬಳಸಿ ಹೊಸ ಆರೋಪ ಮಾಡಲಾಗಿದೆ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ.
ಅದಾನಿ ಗ್ರೂಪ್ನ ಪ್ರಮುಖ ಸಾರ್ವಜನಿಕ ಹೂಡಿಕೆದಾರರು (Public Investors) ಅದಾನಿಯ ಆಪ್ತರೇ ಆಗಿದ್ದಾರೆ. ಇದು ಭಾರತದ ಷೇರುಮಾರುಕಟ್ಟೆ ಕಾನೂನಿನ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ತನಿಖಾ ವರದಿ ಹೇಳುತ್ತದೆ. ಟ್ಯಾಕ್ಸ್ ಹೇವನ್ ಎನಿಸಿರುವ ಮಾರಿಷಸ್ನ ಫಂಡ್ಗಳ ಮೂಲಕ ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳನ್ನು ಖರೀದಿಸಿದ ಮತ್ತು ಮಾರಿದ ಪ್ರಕರಣಗಳು ಕನಿಷ್ಠ ಎರಡಾದರೂ ಇದೆ ಎಂದು ಹೇಳಲಾಗಿದೆ.
ಮಾರಿಷಸ್ ಫಂಡ್ಗಳ ಮೂಲಕ ವರ್ಷಗಳಿಂದ ಅದಾನಿ ಷೇರುಗಳನ್ನು ಖರೀದಿಸುವುದು ಮತ್ತು ಮಾರುವುದು ಮಾಡುತ್ತಾ ಸಾಕಷ್ಟು ಲಾಭ ಮಾಡಲಾಗಿದೆ. ಈ ಹೂಡಿಕೆಗಳನ್ನು ನಿರ್ವಹಿಸುವ ಮ್ಯಾನೇಜ್ಮೆಂಟ್ ಸಂಸ್ಥೆ ವಿನೋದ್ ಅದಾನಿ ಕಂಪನಿಗೆ ಹಣ ಪಾವತಿಸಿದೆ ಎಂದೂ ಒಸಿಸಿಆರ್ಪಿಯ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ ಯಾರೇ ಕೊಟ್ಟರೂ ತೈಲ ಖರೀದಿಸುತ್ತೇವೆ: ಕೇಂದ್ರ ಸಚಿವ ಹರದಿಪ್ ಸಿಂಗ್ ಪುರಿ
ಮಾರಿಷಸ್ ದೇಶದ ಒಪೇಕ್ ಫಂಡ್ ಅಥವಾ ಅಪಾರದರ್ಶಕ ಫಂಡ್ಗಳ ಮೂಲಕ ಈ ಕೆಲಸ ಆಗಿರುವುದು ತಿಳಿದುಬಂದಿದೆ. ಒಪೇಕ್ ಫಂಡ್ ಎನ್ನುವುದು ತನ್ನ ಪೋರ್ಟ್ಫೋಲಿಯೋಗಳ ಮಾಹಿತಿಯನ್ನು ಹೂಡಿಕೆದಾರರಿಗೆ ತಿಳಿಸುವುದಿಲ್ಲ. ಈ ಫಂಡ್ಗಳು ಯಾವ್ಯಾವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿವೆ ಎನ್ನುವ ಮಾಹಿತಿ ಅದರ ಹೂಡಿಕೆದಾರರಿಗೆ ಗೊತ್ತಿರುವುದಿಲ್ಲ. ಹೆಡ್ಜ್ ಫಂಡ್ಗಳು ಇಂಥವಕ್ಕೆ ಉದಾಹರಣೆ.
ಒಸಿಸಿಆರ್ಪಿಯಿಂದ ಪ್ರಕಟವಾಗಿರುವ ವರದಿಯನ್ನು ಅದಾನಿ ಗ್ರೂಪ್ ಅಲ್ಲಗಳೆದಿದೆ. ಹಿಂಡನ್ಬರ್ಗ್ ರಿಸರ್ಚ್ ಈ ಹಿಂದೆ ಬಿಡುಗಡೆ ಮಾಡಿದ ತನಿಖಾ ವರದಿಯಲ್ಲಿ ಈ ಅಂಶಗಳು ಇವೆ. ಇದೆಲ್ಲವೂ ಜಾರ್ಜ್ ಸೋರೋಸ್ ಪಿತೂರಿಯಾಗಿದೆ. ಹಿಂಡನ್ಬರ್ಗ್ ರಿಪೋರ್ಟ್ ವರದಿಯೇ ಆಧಾರರಹಿತವಾಗಿದೆ. ಸೋರೋಸ್ ಬೆಂಬಲಿತ ವರ್ಗಗಳು ಹಾಗೂ ವಿದೇಶೀ ಮೀಡಿಯಾದ ಒಂದು ಗುಂಪು ಈ ಸುಳ್ಳು ವಿಚಾರವನ್ನು ಜಗ್ಗಿಜಗ್ಗಿ ಎಳೆಯುತ್ತಿವೆ ಎಂದು ಅದಾನಿ ಗ್ರೂಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್ನಲ್ಲಿದೆ ಹೊಸ ಫೀಚರ್
ಒಸಿಸಿಆರ್ಪಿ ವರದಿಯಲ್ಲಿ ಮಾಡಿರುವ ಆರೋಪಗಳು ಹಿಂಡನ್ಬರ್ಗ್ ವರದಿಯಲ್ಲಿ ಪ್ರಸ್ತಾಪವಾಗಿವೆ. ಸೆಬಿಯಿಂದ ಇದರ ತನಿಖೆ ನಡೆಯುತ್ತಿದೆ. ತನ್ನ ಕಡೆಯಿಂದ ಯಾವ ತಪ್ಪೂ ಆಗಿಲ್ಲ ಎಂದು ಅದಾನಿ ಗ್ರೂಪ್ ಸ್ಪಷ್ಟಪಡಿಸಿದೆ.
ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್ ಎಂಬುದು ಸ್ವತಂತ್ರ ಪತ್ರಕರ್ತರಿಂದ ನಿರ್ವಹಿಸುವ ಸಂಸ್ಥೆಯಾಗಿದೆ. ಎಡಪಂಥದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಹೂಡಿಕೆದಾರರು ಮತ್ತು ಉದ್ಯಮಿಗಳಾದ ಜಾರ್ಜ್ ಸೋರೋಸ್, ರಾಕ್ಫೆಲರ್ ಬ್ರದರ್ಸ್ ಮೊದಲಾದವರು ಒಸಿಸಿಆರ್ಪಿಗೆ ಫಂಡಿಂಗ್ ಮಾಡುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Thu, 31 August 23