
ನವದೆಹಲಿ, ಆಗಸ್ಟ್ 27: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪರಿಸರಸ್ನೇಹಿ ವಾಣಿಜ್ಯ ವಾಹನಗಳಿಗೆ ಸಂಬಂಧಿಸಿದಂತೆ ಪ್ರಮುಖ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಬ್ಯಾಟರಿ ಚಾಲಿತ (EV), ಹೈಡ್ರೋಜನ್ ಇಂಧನ ಮತ್ತು ನೈಸರ್ಗಿಕ ಅನಿಲ (CNG) ಆಧಾರಿತ ಕಮರ್ಷಿಯಲ್ ವಾಹನಗಳ ಬಳಕೆಯ ವರ್ಷ ಮಿತಿಯನ್ನು 5 ವರ್ಷಗಳಷ್ಟು ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಇದು ಈ ಪರಿಸರಸ್ನೇಹಿ ವಾಹನಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ವಾಹನ್ (Vahan) ಪೋರ್ಟಲ್ ಡಿಜಿಟಲೀಕರಣ: ವಾಹನಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಲೀಕರ ವಿವರಗಳನ್ನು ‘ವಾಹನ್’ ಪೋರ್ಟಲ್ ಮೂಲಕ ಡಿಜಿಟಲೀಕರಣಗೊಳಿಸಲು ಸರ್ಕಾರ ಉದ್ದೇಶಿಸಿದೆ. ಇನ್ನು ಮುಂದೆ ಡೀಲರ್‌ಶಿಪ್ ಪ್ರಮಾಣಪತ್ರ ಅಥವಾ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿದಾಗ ವಿವರಗಳು ಸ್ವಯಂಚಾಲಿತವಾಗಿ ಪೋರ್ಟಲ್‌ನಲ್ಲಿ ಲಭ್ಯವಾಗಲಿವೆ.
ರಾಷ್ಟ್ರೀಯ ಪರವಾನಗಿ (National Permit): ರಾಷ್ಟ್ರೀಯ ಪರವಾನಗಿಗಳನ್ನು ಇನ್ನು ಮುಂದೆ ಎಲೆಕ್ಟ್ರಾನಿಕ್ ರೂಪದಲ್ಲಿ ಪಡೆಯಬಹುದು. ಅರ್ಜಿದಾರರು ಬಯಸಿದಲ್ಲಿ 5 ವರ್ಷಗಳವರೆಗೆ ಈ ಪರವಾನಗಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ತಾತ್ಕಾಲಿಕ ನೋಂದಣಿ: ಚಾಸಿಸ್ (Chassis) ವಾಹನಗಳ ತಾತ್ಕಾಲಿಕ ನೋಂದಣಿಯ ಅವಧಿ ಹಾಗೂ ಇತರ ಬದಲಾವಣೆಗಳ ಕುರಿತಾದ ನಿಯಮಗಳನ್ನು ಪರಿಷ್ಕರಿಸಲಾಗುತ್ತಿದೆ.
ಇದನ್ನೂ ಓದಿ: ಆರ್ಬಿಐ ಹೊಸ ನಿಯಮಗಳ ಪ್ರಸ್ತಾಪ; ಸಾಲಗಳ ಇಎಂಐ ಮೇಲಾಗುವ ಪರಿಣಾಮಗಳೇನು?
ಇವು ಕೇಂದ್ರ ಮೋಟಾರು ವಾಹನ ಕಾಯ್ದೆ, 1989 (Central Motor Vehicles Rules, 1989) ರ ತಿದ್ದುಪಡಿಗಳಾಗಿವೆ. 2026ರ ಆಗಸ್ಟ್ 10 ರಂದು ಈ ಕರಡು ನಿಯಮಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಅಥವಾ ಸಂಬಂಧಪಟ್ಟವರು ತಮ್ಮ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಸರ್ಕಾರವು ಈ ಸಲಹೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಲಿದ್ದು, ಅದರ ಬಳಿಕವೇ ಈ ನಿಯಮಗಳು ಜಾರಿಗೆ ಬರಲಿವೆ. ಈ ಕ್ರಮವು ಭಾರತದಲ್ಲಿ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ವಾಹನ ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಕಾರಿಯಾಗಲಿದೆ.
ಇದನ್ನೂ ಓದಿ: Income Tax Dept: ಸಂಶಯಾಸ್ಪದ ವಿದೇಶಿ ಹಣ ರವಾನೆ: ದೇಶಾದ್ಯಂತ ಪರಿಶೀಲನೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ
ಸದ್ಯ ಇರುವ ವ್ಯವಸ್ಥೆಯಲ್ಲಿ ಕೇಂದ್ರೀಯ ಮೋಟಾರು ವಾಹನ ನಿಯಮಗಳ ಪ್ರಕಾರ, ಸರಕು ಸಾಗಣೆ ಮಾಡುವ ಮಲ್ಟಿ ಆಕ್ಸಲ್ ಟ್ರಕ್ಗಳ ವಯಸ್ಸು 15 ವರ್ಷ ಪೂರ್ಣಗೊಂಡ ಬಳಿಕ ಆ ವಾಹನದ ನ್ಯಾಷನಲ್ ಪರ್ಮಿಟ್ ಅಸಿಂಧುಗೊಳ್ಳುತ್ತದೆ. ಇತರ ಸರಕು ಸಾಗಣೆ ವಾಹನಗಳಿಗೆ 12 ವರ್ಷದ ಮಿತಿ ಇರುತ್ತದೆ. ವಾಹನದ ನೊಂದಣಿ ದಿನಾಂಕದಿಂದ ಅದರ ವಯಸ್ಸನ್ನು ಎಣಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ