
ನವದೆಹಲಿ, ಜೂನ್ 2: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನಾವು ಅಂದುಕೊಂಡಿದ್ದಕ್ಕಿಂತ ಅತ್ಯಂತ ವೇಗವಾಗಿ ಉದ್ಯೋಗ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. 2023ರಲ್ಲಿ ಬಂದಿದ್ದ ವರದಿಯೊಂದು 2032ರ ವೇಳೆಗೆ ಎಐ ತಂತ್ರಜ್ಞಾನವು ಶೇ. 90ರಷ್ಟು ಉದ್ಯೋಗಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಿತ್ತು. ಕೇವಲ 3 ವರ್ಷಗಳಲ್ಲೇ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎಐ ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಉದ್ಯೋಗಗಳನ್ನು ಆವರಿಸಿಕೊಳ್ಳುತ್ತಿದೆ. ಇದೇ ವೇಳೆ ಐಟಿ ರಂಗದ ಪ್ರಮುಖ ಸಂಸ್ಥೆಯಾದ ‘ಕಾಗ್ನಿಜೆಂಟ್’ (Cognizant) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ವಿವರಗಳು ಆಘಾತಕಾರಿ ಎನಿಸುವಂತಿವೆ.
ಕಾಗ್ನಿಜೆಂಟ್ ವರದಿಯ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶೇ. 93ರಷ್ಟು ಉದ್ಯೋಗಗಳು ಈಗ ಎಐ ಬಳಸುವ ಸಾಮರ್ಥ್ಯ ಹೊಂದಿವೆ (AI-capable). ಇದರಲ್ಲಿ ಶೇ. 30ರಷ್ಟು ಉದ್ಯೋಗಗಳು ಅಸ್ತಿತ್ವದ ಬಿಕ್ಕಟ್ಟನ್ನು (existential change) ಎದುರಿಸುತ್ತಿವೆ. ಅಂದರೆ, ಮುಂದಿನ 9 ವರ್ಷಗಳಲ್ಲಿ ಆಗಬಹುದು ಎಂದುಕೊಂಡಿದ್ದ ಬದಲಾವಣೆ ಕೇವಲ 3 ವರ್ಷಗಳಲ್ಲೇ ಸಂಭವಿಸಿದೆ.
ಸಾಮಾನ್ಯವಾಗಿ ಎಐ ತಂತ್ರಜ್ಞಾನವು ಕೇವಲ ಸಾಫ್ಟ್‌ವೇರ್ ಕೋಡಿಂಗ್ ಅಥವಾ ಆಫೀಸ್ ಕೆಲಸಗಳನ್ನು ಮಾತ್ರ ಕಸಿದುಕೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆದರೆ ಕಾಗ್ನಿಜೆಂಟ್ ಸಂಶೋಧನಾ ವಿಭಾಗದ ಮುಖ್ಯಸ್ಥ ಓಲಿ ಓ’ಡೋನೊಘು (Ollie O’Donoghue) ಹೇಳುವ ಪ್ರಕಾರ, “ಇಲ್ಲಿ ಯಾರೂ ಸುರಕ್ಷಿತರಲ್ಲ”. ಪ್ಲಂಬರ್ ಅಥವಾ ಎಲೆಕ್ಟ್ರಿಷಿಯನ್ ಕೆಲಸ ಮಾಡುವವರೂ ಸಹ ಎಐ ಯುಗಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.
ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ
ಪೈಪ್ ರಿಪೇರಿ ಮಾಡಲು ಮನುಷ್ಯನೇ ಬೇಕಾಗಬಹುದು, ಆದರೆ ಅದಕ್ಕೂ ಮುನ್ನ ಮಾಡುವ ತಪಾಸಣೆ ಮತ್ತು ರೋಗನಿರ್ಣಯವನ್ನು (Inspection & Diagnosis) ಎಐ ಮಾಡಬಲ್ಲದು. ಉದಾಹರಣೆಗೆ, ಇಂದಿನ ಮಲ್ಟಿಮೋಡಲ್ ಎಐ ಏಜೆಂಟ್‌ಗಳು ಗೋಡೆಯ ಮೇಲಿನ ತೇವಾಂಶವನ್ನು ಗುರುತಿಸಿ, ಪೈಪ್ ಎಲ್ಲಿ ಸೋರುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ಬೇಕಾಗುವ ಬಿಡಿಭಾಗಗಳ ಪಟ್ಟಿ ಮತ್ತು ಬಿಲ್ (Invoice) ಅನ್ನು ತಾವಾಗಿಯೇ ಸಿದ್ಧಪಡಿಸಬಲ್ಲವು.
ಅಮೆರಿಕ ಒಂದರಲ್ಲೇ ಮಾನವ ಶ್ರಮದಿಂದ ಎಐ ಕಡೆಗೆ ಸುಮಾರು 4.5 ಟ್ರಿಲಿಯನ್ ಡಾಲರ್ (ಅಂದಾಜು 427 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಉದ್ಯೋಗಗಳು ವರ್ಗಾವಣೆಯಾಗಲಿವೆ ಎಂದು ವರದಿ ಎಚ್ಚರಿಸಿದೆ.
ಈ ವರದಿಯು ಜಾಗತಿಕವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ ನಡೆಯುತ್ತಿರುವ ಭಾರಿ ಉದ್ಯೋಗ ಕಡಿತದ (Layoffs) ಮಧ್ಯೆ ಹೊರಬಿದ್ದಿದೆ. Meta, Amazon, Oracle ನಂತಹ ದೈತ್ಯ ಕಂಪನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ವರದಿಗಳ ಪ್ರಕಾರ, 2026ರ ಈ ಮೊದಲ ಐದು ತಿಂಗಳಲ್ಲೇ ಸುಮಾರು 1,15,907 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ
ಈ ವರದಿ ಆತಂಕ ಮೂಡಿಸಿದರೂ, ಕಾಗ್ನಿಜೆಂಟ್‌ನ ಎಐ ವಿಭಾಗದ ಮುಖ್ಯಸ್ಥ ಸುಶಾಂತ್ ವಾರಿಕೂ ಅವರ ಪ್ರಕಾರ, ಎಐ ಹಳೆಯ ಉದ್ಯೋಗಗಳನ್ನು ಕಸಿದುಕೊಂಡರೂ ಮಾರುಕಟ್ಟೆಯಲ್ಲಿ ಹೊಸ ಆರ್ಥಿಕ ಅವಕಾಶಗಳು ಮತ್ತು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆದರೆ ಇದಕ್ಕೆ ಕಂಪನಿಗಳು ಮತ್ತು ಉದ್ಯೋಗಿಗಳು ತಮ್ಮ ಕೆಲಸದ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಮತ್ತೊಂದೆಡೆ, ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರಂತಹ ಕೆಲವು ತಂತ್ರಜ್ಞಾನದ ಮುಖಂಡರು “ಎಐ ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತದೆ ಎನ್ನುವುದು ಮೂರ್ಖತನದ ವಾದ” ಎಂದು ಹೇಳುವ ಮೂಲಕ ಉದ್ಯೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ