AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

Tempo Driver to Airline CEO: ಕಾನ್ಪುರದ ರಸ್ತೆಗಳಲ್ಲಿ ಟೆಂಪೋ ಚಲಾಯಿಸುತ್ತಿದ್ದ ಶ್ರವಣ್ ಕುಮಾರ್ ವಿಶ್ವಕರ್ಮ, 'ಶಂಖ್ ಏರ್' ಮೂಲಕ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬಾಲ್ಯದ ಕಷ್ಟಗಳು, ಸಾರಿಗೆ ಉದ್ಯಮದ ಅನುಭವ, ಮತ್ತು ಅಚಲ ದೃಢ ಸಂಕಲ್ಪದಿಂದ ಅವರು ವಿಮಾನ ಕಂಪನಿ ಸ್ಥಾಪಿಸುವ ಕನಸನ್ನು ನನಸಾಗಿಸಿದ್ದಾರೆ. ಇದು ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಯಶಸ್ಸಿನ ಸ್ಫೂರ್ತಿದಾಯಕ ಕಥೆ, ಸಾಮಾನ್ಯರಿಗೂ ವಿಮಾನಯಾನ ಕೈಗೆಟುಕುವಂತೆ ಮಾಡುವ ಅವರ ದೃಷ್ಟಿಕೋನವನ್ನು ಬಿಂಬಿಸುತ್ತದೆ.

ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ
ಶ್ರವಣ್ ಕುಮಾರ್ ವಿಶ್ವಕರ್ಮImage Credit source: Instagram @Sharvankrvishwakarma
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2026 | 1:45 PM

Share

ಕಾನಪುರದ ರಸ್ತೆಗಳಲ್ಲಿ ಟೆಂಪೋ ಓಡಿಸುತ್ತಿದ್ದ ಸಾಮಾನ್ಯ ವ್ಯಕ್ತಿಯೊಬ್ಬರು, ಇಂದು ದೇಶದ ಅತ್ಯಂತ ಕಠಿಣ ಮತ್ತು ಕೋಟ್ಯಂತರ ರೂಪಾಯಿ ಬಂಡವಾಳ ಬೇಡುವ ವಿಮಾನಯಾನ (Aviation) ಕ್ಷೇತ್ರಕ್ಕೆ ಕಾಲಿಟ್ಟು ಸ್ವಂತ ಏರ್‌ಲೈನ್ಸ್ ಕಂಪನಿ ಆರಂಭಿಸುತ್ತಿದ್ದಾರೆ ಎಂದರೆ ಅದು ಸಿನಿಮಾ ಕಥೆಯಂತೆ ಕೇಳಿಸಬಹುದು. ಆದರೆ ಇದು 35 ವರ್ಷದ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma) ಅವರ ನಿಜ ಜೀವನದ ರೋಮಾಂಚಕ ಯಶೋಗಾಥೆ! ಅವರು ಸ್ಥಾಪಿಸಿರುವ ‘ಶಂಖ್ ಏರ್’ (Shankh Air) ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ಸಚಿವಾಲಯದಿಂದ (Ministry of Civil Aviation) ಅನುಮತಿ (NOC) ಪಡೆದುಕೊಂಡು, ಉತ್ತರ ಪ್ರದೇಶದ ಮೊದಲ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿ ಹಾರಾಟ ನಡೆಸಲು ಸಜ್ಜಾಗಿದೆ.

ಹಳ್ಳ ಹಿಡಿದಿದ್ದ ಬಾಲ್ಯ ಮತ್ತು ಕಠಿಣ ದಿನಗಳು

ಉತ್ತರ ಪ್ರದೇಶದ ಕಾನ್ಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಶ್ರವಣ್ ಅವರಿಗೆ ಶಾಲೆಯಲ್ಲಿ ಓದಿನ ಮೇಲೆ ಅಷ್ಟಾಗಿ ಆಸಕ್ತಿ ಇರಲಿಲ್ಲ. “ನಾನು ಒಳ್ಳೆಯ ವಿದ್ಯಾರ್ಥಿಯೇನೂ ಆಗಿರಲಿಲ್ಲ, ಆದರೆ ಕಾನ್ಪುರದ ರಸ್ತೆಗಳೇ ನನಗೆ ಜಗತ್ತನ್ನು ಕಲಿಸಿದ ಗುರುಗಳು” ಎಂದು ಅವರೇ ನೆನಪಿಸಿಕೊಳ್ಳುತ್ತಾರೆ. ಬದುಕಿನ ಬಂಡಿ ಸಾಗಿಸಲು ಅವರು ಕಾನ್ಪುರದ ರಸ್ತೆಗಳಲ್ಲಿ ಗೂಡ್ಸ್ ಲೋಡರ್ ಆಗಿ, ಆಟೋ ಮತ್ತು ಟೆಂಪೋ ಚಾಲಕನಾಗಿ ಕೆಲಸ ಮಾಡಿದರು. ಗೆಳೆಯರೊಂದಿಗೆ ಸೇರಿ ಸಣ್ಣಪುಟ್ಟ ಬಿಸಿನೆಸ್ ಮಾಡಲು ಕೈಹಾಕಿದಾಗಲೆಲ್ಲಾ ಭಾರಿ ನಷ್ಟ ಅನುಭವಿಸಿ ಸೋಲನ್ನೇ ಕಂಡರು. ಆದರೂ ಅವರು ಧೃತಿಗೆಡಲಿಲ್ಲ.

ಯಶಸ್ಸಿನ ಮೆಟ್ಟಿಲಾದ ಸಾರಿಗೆ ಮತ್ತು ವ್ಯಾಪಾರ

2014 ಶ್ರವಣ್ ಅವರ ಬದುಕಿನ ಮಹತ್ತರ ತಿರುವು. ಅವರು ಸಿಮೆಂಟ್ ವ್ಯಾಪಾರಕ್ಕೆ ಕೈಹಾಕಿದರು. ಅದರಲ್ಲಿ ಸಿಕ್ಕ ಯಶಸ್ಸಿನಿಂದ ಕಬ್ಬಿಣ (TMT Bars) ಮತ್ತು ಗಣಿಗಾರಿಕೆ (Mining) ಕ್ಷೇತ್ರಕ್ಕೂ ಕಾಲಿಟ್ಟರು. ಟೆಂಪೋ ಓಡಿಸುತ್ತಿದ್ದ ಅದೇ ಕೈಗಳು, ಮುಂದೆ ಸರಕು ಸಾಗಣೆಯ ಬೃಹತ್ ಟ್ರಕ್‌ಗಳ ಸಾಮ್ರಾಜ್ಯವನ್ನೇ (Transport Business) ನಿರ್ಮಿಸಿದವು. ಈ ಸಾರಿಗೆ ಉದ್ಯಮವು ಅವರಿಗೆ ದೊಡ್ಡ ಮಟ್ಟದ ಬಂಡವಾಳ ಮತ್ತು ಉದ್ಯಮ ನಡೆಸುವ ಆತ್ಮವಿಶ್ವಾಸವನ್ನು ತಂದುಕೊಟ್ಟಿತು.

ಇದನ್ನೂ ಓದಿ: ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ

ಆಕಾಶದ ಕಡೆಗೆ ದೃಷ್ಟಿ: ‘ಶಂಖ್ ಏರ್’ ಉದಯ

ನಾಲ್ಕು ವರ್ಷಗಳ ಹಿಂದೆ ಶ್ರವಣ್ ಅವರಿಗೆ ಸ್ವಂತ ಏರ್‌ಲೈನ್ಸ್ ಆರಂಭಿಸುವ ಆಲೋಚನೆ ಬಂತು. ವಿಮಾನಯಾನ ಕ್ಷೇತ್ರದ ನಿಯಮಗಳು, ಪರವಾನಗಿ ಪ್ರಕ್ರಿಯೆಗಳು ಅತ್ಯಂತ ಸಂಕೀರ್ಣವಾಗಿದ್ದರೂ, ಅವರು ಬಿಟ್ಟುಕೊಡದೆ ಪ್ರತಿ ಹಂತವನ್ನೂ ಆಳವಾಗಿ ಅಧ್ಯಯನ ಮಾಡಿದರು. ಪರಿಣಾಮವಾಗಿ, ಅವರ ಕನಸಿನ ‘ಶಂಖ್ ಏರ್’ ಜನ್ಮತಾಳಿತು. ಮೂರು ಏರ್‌ಬಸ್ (Airbus A320) ವಿಮಾನಗಳೊಂದಿಗೆ ಲಕ್ನೋ, ದೆಹಲಿ, ಮುಂಬೈ ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸಲು ಈ ಏರ್‌ಲೈನ್ಸ್ ಸಿದ್ಧವಾಗಿದೆ.

“ವಿಮಾನ ಕೂಡ ಬಸ್ ಅಥವಾ ಟೆಂಪೋದಂತೆ ಕೇವಲ ಒಂದು ಸಾರಿಗೆ ಸಂಪರ್ಕ ಸಾಧನವಷ್ಟೇ. ಅದು ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿರಬಾರದು. ಸಾಮಾನ್ಯ ಮಧ್ಯಮ ವರ್ಗದ ಜನರಿಗೂ ವಿಮಾನ ಪ್ರಯಾಣ ಕೈಗೆಟುಕುವಂತಾಗಬೇಕು” ಎನ್ನುವುದು ಶ್ರವಣ್ ಕುಮಾರ್ ವಿಶ್ವಕರ್ಮ ಅವರ ಆಲೋಚನೆ.

ಇದನ್ನೂ ಓದಿ: ಜೂನ್​ನಲ್ಲಿ ಪ್ಯಾನ್ ಕಾರ್ಡ್, ಯುಪಿಐ, ಅಡ್ವಾನ್ಸ್ ಟ್ಯಾಕ್ಸ್ ಇತ್ಯಾದಿ ಪ್ರಮುಖ ಬದಲಾವಣೆಗಳನ್ನು ಗಮನಿಸಿ

ಶ್ರವಣರ ಯಶಸ್ಸಿನಿಂದ ಕಲಿಯಬೇಕಾದ 3 ಪ್ರಮುಖ ಪಾಠಗಳು

  1. ಸೋಲು ಅಂತಿಮವಲ್ಲ: ಆರಂಭದಲ್ಲಿ ಹಲವು ಸಣ್ಣ ಉದ್ಯಮಗಳಲ್ಲಿ ಸೋತರೂ ಶ್ರವಣ್ ಹಿಂಜರಿಯಲಿಲ್ಲ. ಪ್ರತಿ ಸೋಲನ್ನೂ ಮುಂದಿನ ಯಶಸ್ಸಿನ ಪಾಠವಾಗಿ ಬಳಸಿಕೊಂಡರು.
  2. ದೊಡ್ಡದಾಗಿ ಕನಸು ಕಾಣಿ: “ನಾವು ಬೆಳೆದ ಪರಿಸರದಲ್ಲಿ ಕೇವಲ ಹೊಟ್ಟೆಪಾಡಿಗೆ ದುಡಿದರೆ ಸಾಕು ಎನ್ನುವ ಮನಸ್ಥಿತಿ ಇತ್ತು. ಅದರಾಚೆ ಯೋಚಿಸುವುದು ಅಸಾಧ್ಯವಾಗಿತ್ತು” ಎನ್ನುವ ಶ್ರವಣ್, ಪರಿಸ್ಥಿತಿಯನ್ನು ಮೀರಿ ನಿಂತು ವಿಮಾನ ಸಂಸ್ಥೆಯ ಮಾಲೀಕರಾದರು.
  3. ಮನಸ್ಥಿತಿಯಷ್ಟೇ ಮುಖ್ಯ (Mindset Matters): ಅವರೇ ಹೇಳುವಂತೆ, “ಜನರು ಏನು ಅಂದುಕೊಳ್ಳುತ್ತಾರೆ ಎನ್ನುವುದನ್ನು ಯೋಚಿಸುವುದನ್ನು ಮೊದಲು ನಿಲ್ಲಿಸಬೇಕು. ಒಮ್ಮೆ ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್‌ಲೈನ್ಸ್ ನಡೆಸಬಲ್ಲ ಎಂದಾದರೆ, ಜಗತ್ತಿನಲ್ಲಿ ಯಾರಿಗೆ ಬೇಕಾದರೂ ಸಾಧನೆ ಮಾಡಲು ಸಾಧ್ಯವಿದೆ. ವ್ಯತ್ಯಾಸವಿರುವುದು ಕೇವಲ ನಮ್ಮ ಯೋಚನಾ ಶೈಲಿಯಲ್ಲಿ ಮಾತ್ರ.”

ಸಾಮಾನ್ಯ ರಸ್ತೆಯ ಧೂಳಿನಿಂದ ಆಕಾಶದ ಎತ್ತರಕ್ಕೆ ಜಿಗಿದ ಶ್ರವಣ್ ಕುಮಾರ್ ವಿಶ್ವಕರ್ಮ ಅವರ ಕಥೆ, “ಶ್ರದ್ಧೆ ಮತ್ತು ಕಠಿಣ ಪರಿಶ್ರಮವಿದ್ದರೆ ನಮ್ಮ ಹಿನ್ನೆಲೆ ಏನೇ ಇರಲಿ, ನಾವು ಅಂದುಕೊಂಡ ಗುರಿ ತಲುಪಬಹುದು” ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More