ನವದೆಹಲಿ, ಜುಲೈ 14: ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Flipkart Axis Credit Card) ಬಳಕೆದಾರರಿಗೆ ಬ್ಯಾಂಕ್ನಿಂದ ಕಹಿ ಸುದ್ದಿ ಬಂದಿದೆ. ಆಗಸ್ಟ್ನಿಂದ ಈ ಖಾಸಗಿ ವಲಯದ ಬ್ಯಾಂಕ್ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು (Cashback and Reward Points) ಕಡಿಮೆ ಮಾಡುವುದಾಗಿ ಘೋಷಿಸಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ನಿಯಮಗಳು ಮತ್ತು ಷರತ್ತುಗಳಲ್ಲಿನ ಪರಿಷ್ಕರಣೆಯು 2023 ರ ಆಗಸ್ಟ್ 12ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ವರದಿಯಾಗಿದೆ.
2023 ರ ಆಗಸ್ಟ್ 12ರಿಂದ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಮಿಂತ್ರಾ, ಫ್ಲೈಟ್ ಮತ್ತು ಹೋಟೆಲ್ ಪಾವತಿಗಳ ವಹಿವಾಟಿಗೆ ಶೇ 1.5 ರ ಕ್ಯಾಷ್ಬ್ಯಾಕ್ ಮಾತ್ರ ಇರಲಿದೆ. ಆಕ್ಸಿಸ್ ಬ್ಯಾಂಕ್ ಹೇಳಿಕೆಯ ಪ್ರಕಾರ, ಈ ಹಿಂದೆ ಗ್ರಾಹಕರು ಫ್ಲಿಪ್‌ಕಾರ್ಟ್ ಘಟಕಗಳಲ್ಲಿ ಖರ್ಚು ಮಾಡಿದ ಮೊತ್ತದ ಮೇಲೆ ಶೇಕಡಾ 5 ರಷ್ಟು ಕ್ಯಾಷ್ಬ್ಯಾಕ್ ಪಡೆಯುತ್ತಿದ್ದರು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರಿ ಸೇವೆಗಳಿಗೆ (MCCs – 9399) ಮಾಡಿದ ಪಾವತಿಗಳು ಕ್ಯಾಶ್‌ಬ್ಯಾಕ್‌ಗೆ ಅರ್ಹವಾಗಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. ಅದೇ ರೀತಿ ಇಂಧನ ವೆಚ್ಚಗಳು, ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾದಲ್ಲಿ ಉಡುಗೊರೆ ಕಾರ್ಡ್‌ಗಳ ಖರೀದಿ, ಇಎಂಐ ವಹಿವಾಟುಗಳು, ವಸ್ತುಗಳ ಖರೀದಿ ನಂತರ ಮೊತ್ತವನ್ನು ಇಎಂಐಗೆ ಪರಿವರ್ತಿಸುವುದು, ವ್ಯಾಲೆಟ್ ಲೋಡಿಂಗ್ ವಹಿವಾಟುಗಳು, ನಗದು ಮುಂಗಡಗಳು, ಬಾಡಿಗೆ ಪಾವತಿಗಳು, ಆಭರಣಗಳ ಖರೀದಿ, ವಿಮಾ ಸೇವೆಗಳು, ಉಪಯುಕ್ತತೆಗಳು, ಶೈಕ್ಷಣಿಕ ಸೇವೆಗಳ ಮೇಲೆ ಕ್ಯಾಷ್ಬ್ಯಾಕ್ ಮುಂದೆ ಇಲ್ಲವಾಗಲಿದೆ. ಬಾಕಿಗಳ ಪಾವತಿ, ಕಾರ್ಡ್ ಶುಲ್ಕಗಳ ಪಾವತಿ ಮತ್ತು ಇತರ ಕಾರ್ಡ್ ಶುಲ್ಕಗಳು ಕೂಡ ಕ್ಯಾಷ್ಬ್ಯಾಕ್ ಸೌಲಭ್ಯದಿಂದ ವಂಚಿತವಾಗಲಿವೆ.
ಇದನ್ನೂ ಓದಿ: Financial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿcashb ನಿಶ್ಚಿಂತೆಯಿಂದಿರಿ
ಕೆಳಗಿನ ಎಂಸಿಸಿಗಳನ್ನು (Merchant Category Codes) ಕ್ಯಾಷ್ಬ್ಯಾಕ್ ಅರ್ಹತೆಯಿಂದ ಹೊರಗಿಡಲಾಗಿದೆ: 4814, 4816, 4899, 4900, 5541, 5542, 5944, 5960, 5983, 6011, 6012, 6051, 6301, 623, 653, 653, 8241, 8244, 8249, 8299 ಮತ್ತು 9399.
ಗಮನಿಸಿ: ಪ್ರತಿ ವರ್ಗದ ವಹಿವಾಟುಗಳನ್ನು ಆಯಾ ನೆಟ್ವರ್ಕ್ಗಳಿಂದ ವ್ಯಾಖ್ಯಾನಿಸಲ್ಪಟ್ಟ (ಉದಾಹರಣೆಗೆ; ವೀಸಾ, ಮಾಸ್ಟರ್‌ಕಾರ್ಡ್ ಮತ್ತು ರುಪೇ) ಮರ್ಚೆಂಟ್ ಕೆಟಗರಿ ಕೋಡ್‌ಗಳ ಮೂಲಕ ಗುರುತಿಸಲಾಗುತ್ತದೆ.
3,50,000 ರೂ.ಗಿಂತ ಹೆಚ್ಚಿನ ವಾರ್ಷಿಕ ಖರ್ಚಿನ ಮೇಲೆ ಕಾರ್ಡ್‌ನಲ್ಲಿ ವಿಧಿಸಲಾದ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಾಡಿಗೆ ವಹಿವಾಟುಗಳು (MCC 6513) ಮತ್ತು ವಾಲೆಟ್ ಲೋಡ್ ವಹಿವಾಟುಗಳು (MCC 6540) ವಾರ್ಷಿಕ ಶುಲ್ಕ ವಿನಾಯಿತಿಯನ್ನು ಪಡೆಯುವಲ್ಲಿ ಪರಿಗಣಿಸಲಾಗುವ ಖರ್ಚುಗಳಿಗೆ ಅರ್ಹವಾಗಿರುವುದಿಲ್ಲ. ಈ ಹಿಂದೆ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುವ ಮಿತಿ 2 ಲಕ್ಷ ರೂ. ಇತ್ತು.
ಆಕ್ಸಿಸ್ ಬ್ಯಾಂಕ್ ರಿಸರ್ವ್, ಆಕ್ಸಿಸ್ ಬ್ಯಾಂಕ್ ಸೆಲೆಕ್ಟ್, ಆಕ್ಸಿಸ್ ಬ್ಯಾಂಕ್ ಪ್ರಿವಿಲೇಜ್ ಮತ್ತು ಆಕ್ಸಿಸ್ ಬ್ಯಾಂಕ್ ಮೈ ಝೋನ್ ಕಾರ್ಡ್‌ಗಳಂತಹ ಇತರ ಕ್ರೆಡಿಟ್ ಕಾರ್ಡ್‌ಗಳಿಗೆ ಕೂಡ ಕ್ಯಾಷ್ಬ್ಯಾಕ್ ಮತ್ತು ಇತರ ಆಫರ್ಗಳನ್ನು ಕಡಿಮೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Fri, 14 July 23