ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದನಿಸಿರುವ ಬೆಂಗಳೂರಿನಲ್ಲಿ ಆಫೀಸ್ ಸ್ಪೇಸ್ಗೆ (Office Space) ಯಾವಾಗಲೂ ಬೇಡಿಕೆ ಇರುವಂಥದ್ದೇ. ಭಾರೀ ಟ್ರಾಫಿಕ್ ಕಿರಿಕಿರಿ ಇದ್ದರೂ ಬೇರೆ ಹಲವಾರು ಅನುಕೂಲಕರ ಕಾರಣಗಳಿಂದ ಉದ್ಯಾನನಗರಿಯಲ್ಲಿ ವಾಣಿಜ್ಯ ಮತ್ತು ಔದ್ಯಮಿಕ ಚಟುವಟಿಕೆ ಬಹಳ ಜೀವಂತ ಇರುತ್ತದೆ. ಮುಂಬೈ ಬಿಟ್ಟರೆ ಬೆಂಗಳೂರಿನಲ್ಲೇ ಅತಿಹೆಚ್ಚು ಆಫೀಸ್ ಸ್ಪೇಸ್ ಬಾಡಿಗೆ ದರ ಇರುವುದು. ಈಗ ನಗರದ ವೈಟ್ಫೀಲ್ಡ್ ಪ್ರದೇಶದತ್ತ ಬಹಳ ಕಂಪನಿಗಳ ಚಿತ್ತ ನೆಟ್ಟಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ಎನಿಸಿದ ಕಾಲಿಯರ್ಸ್ (Colliers) ಪ್ರಕಾರ ವೈಟ್ಫೀಲ್ಡ್ನಲ್ಲಿ ಮುಂದಿನ ಎರಡು ವರ್ಷದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ಶೇ. 10ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಗಂಟೆಗಟ್ಟಲೆ ಕಾಲ ಸವೆಯುವುಷ್ಟು ಅರಿಭಯಂಕರ ಟ್ರಾಫಿಕ್ ಇರುವ ವೈಟ್ಫೀಲ್ಡ್ನಲ್ಲಿ ಈಪಾಟಿ ಬೇಡಿಕೆಯಾ ಎಂದನಿಸಬಹುದು. ವೈಟ್ಫೀಲ್ಡ್ನಲ್ಲಿ ಟ್ರಾಫಿಕ್ ಕಿರಿಕಿರಿ ತುಸು ಕಡಿಮೆ ಆಗುವಂತೆ ಸೌಕರ್ಯವ್ಯವಸ್ಥೆ ಉತ್ತಮಗೊಳ್ಳಲಿರುವುದು ಇದಕ್ಕೆ ಕಾರಣ.
ಭೈಯಪ್ಪನಹಳ್ಳಿ ವೈಟ್ಫೀಲ್ಡ್ ಮೆಟ್ರೋ ಯೋಜನೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ಐಟಿ ಕಂಪನಿಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಮೆಟ್ರೋ ರೈಲು ಓಡಾಡುವುದರಿಂದ ಐಟಿ ಉದ್ಯೋಗಿಗಳಿಗೆ ಭಾರೀ ಅನುಕೂಲವಾಗಲಿದೆ. ಹೀಗಾಗಿ, ಮುಂದಿನ ಎರಡು ವರ್ಷದಲ್ಲಿ ವೈಟ್ಫೀಲ್ಡ್ನಲ್ಲಿ ಕಚೇರಿ ಸ್ಥಳಗಳಿಗೆ ಒಳ್ಳೆಯ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಕಾಲಿಯರ್ಸ್ ಸಂಸ್ಥೆ ತನ್ನ ‘ಬೆಂಗಳೂರು ಮೆಟ್ರೋ ರೈಲ್: ಕೀ ಆಫೀಸ್ ಮಾರ್ಕೆಟ್ ಇಂಪ್ಯಾಕ್ಟ್’ ಎಂಬ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ ಓದಿ: After IPL: ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಜಿಯೋ ಸಿನಿಮಾ ಒಟಿಟಿಯ ಕಥೆ ಐಪಿಎಲ್ ಮುಗಿದ ಬಳಿಕ ಏನಾಗುತ್ತೆ?
ವೈಟ್ಫೀಲ್ಡ್ ಬೆಂಗಳೂರಿನಲ್ಲೇ ಎರಡನೇ ಅತಿಹೆಚ್ಚು ಕಚೇರಿ ಮಾರುಕಟ್ಟೆ ಎನಿಸಿದೆ. ಅಂದರೆ ಕಚೇರಿ ಸ್ಥಳಗಳು ಅತಿಹೆಚ್ಚು ಇರುವ ಪ್ರದೇಶಗಳಲ್ಲಿ ವೈಟ್ಫೀಲ್ಡ್ ಎರಡನೇ ಸ್ಥಾನಪಡೆಯುತ್ತದೆ. ಇಲ್ಲಿ 40.4 ಮಿಲಿಯನ್ ಚದರ ಅಡಿಯಷ್ಟು ಕಚೇರಿ ಸ್ಥಳಗಳಿವೆ. ಮೆಟ್ರೋ ಯೋಜನೆ ಈ ಮಾರ್ಗಕ್ಕೆ ಬರುತ್ತದೆ ಎಂದಾದ ಬಳಿಕ ಕಚೇರಿ ಸ್ಥಳಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಈಗ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೆಟ್ರೋ ಓಡಾಟ ಶುರುವಾದ ಬಳಿಕ ವೈಟ್ಫೀಲ್ಡ್ನಲ್ಲಿ ಕಚೇರಿ ಸ್ಥಳಗಳಲ್ಲಿ ಇನ್ನಿಲ್ಲದಷ್ಟು ಡಿಮ್ಯಾಂಡ್ ಬರಲಿದೆ.
ಬೆಂಗಳೂರಿನಲ್ಲಿ ಈಗೀಗ ಹೆಚ್ಚೆಚ್ಚು ಟ್ರೆಂಡಿಂಗ್ನಲ್ಲಿರುವುದು ಕೋ ವರ್ಕಿಂಗ್ ಸ್ಪೇಸ್ಗಳು. ಅಂದರೆ, ಯಾರು ಬೇಕಾದರೂ ಬಂದು ನಿರ್ದಿಷ್ಟ ಬಾಡಿಗೆ ಕೊಟ್ಟು ಕೆಲಸ ಮಾಡಬಹುದಾದ ಆಫೀಸ್ ಸ್ಪೇಸ್ಗಳು ಇವು. ಬೆಂಗಳೂರಿನ ಒಟ್ಟು ಆಫೀಸ್ ಲೀಸಿಂಗ್ಲ್ಲಿ ಶೇ. 13ರಷ್ಟು ಸ್ಥಳವು ಕೋವರ್ಕಿಂಗ್ ಸ್ಪೇಸ್ನದ್ದಾಗಿದೆ. ಆದರೆ, ಟ್ರಾಫಿಕ್ ಕಿರಿಕಿರಿ ಹೆಚ್ಚು ಇರುವ ವೈಟ್ಫೀಲ್ಡ್ನಲ್ಲಿ ಇಂಥ ಕಚೇರಿಗಳು ಇರುವುದು ಕಡಿಮೆ. ಆದರೆ, ಮೆಟ್ರೋ ಆರಂಭವಾದ ಬಳಿಕ ಈ ವರ್ಕ್ಸ್ಪೇಸ್ಗಳಿಗೆ ವೈಟ್ಫೀಲ್ಡ್ನಲ್ಲಿ ಬೇಡಿಕೆ ಹೆಚ್ಚಬಹುದು ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿ ಹೇಳಿದೆ.