ನವದೆಹಲಿ, ಸೆಪ್ಟೆಂಬರ್ 10: ಆರನೇ ತಲೆಮಾರಿನ ಮೊಬೈಲ್ ನಿಸ್ತಂತು ತಂತ್ರಜ್ಞಾನ (6G Wireless Technology) ಎಂದು ಕರೆಯಲಾಗುವ 6ಜಿ ಅನ್ನು ಭಾರತ ಮತ್ತು ಅಮೆರಿಕ ಜಂಟಿಯಾಗಿ ಅಭಿವೃದ್ಧಿಪಡಿಸಲು ಮುಂದಾಗಿವೆ. ಜಿ20 ನಾಯಕರ ಶೃಂಗಸಭೆಯ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಿಸ್ತೃತ ಮಾತುಕತೆಗಳಲ್ಲಿ ಈ ವಿಚಾರವೂ ಪ್ರಮುಖವಾಗಿ ಇದೆ. ಇದೇ ವೇಳೆ, ಎರಡೂ ದೇಶಗಳ ನಡುವೆ 6ಜಿ ಅಭಿವೃದ್ಧಿಗೆ ತಾಳಮೇಳ ಬರುವಂತೆ ಭಾರತ್ 6ಜಿ ಕೂಟ ಹಾಗೂ ಅಮೆರಿಕದ ಎಟಿಐಎಸ್ ನೆಕ್ಸ್ಟ್ ಜಿ ಕೂಟ, ಎರಡರ ಮಧ್ಯೆ ಒಪ್ಪಂದ ಆಗಿದೆ. ವೈರ್ಲೆಸ್ 6ಜಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಯೋಗ ಸಾಧಿಸುವ ಸಾಧ್ಯತೆಗಳನ್ನು ಪರಾಮರ್ಶಿಸಲು ಈ ಒಪ್ಪಂದವಾಗಿದೆ. ಇದು ಇನ್ನೂ ಆರಂಭಿಕ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ 6ಜಿ ತಂತ್ರಜ್ಞಾನ ಅಭಿವೃದ್ಧಿಗೆ ಎರಡೂ ದೇಶಗಳ ಮಧ್ಯೆ ನೈಜ ಹೊಂದಾಣಿಕೆ ಶುರುವಾಗುವ ಆಶಯ ಇದೆ.
ಭಾರತ್ 6ಜಿ ಅಲಾಯನ್ಸ್ (Bharat 6G Alliance) ಮತ್ತು ನೆಕ್ಸ್ಟ್ ಜಿ ಅಲಾಯನ್ಸ್ (Next G Alliance) ಎಂಒಯುಗೆ ಸಹಿಹಾಕಿರುವ ವಿಚಾರವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ. ಭಾರತ ಮತ್ತು ಅಮೆರಿಕ ಜಂಟಿಯಾಗಿ 6ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಬದ್ಧವಾಗಿವೆ ಎಂದವರು ಟ್ವೀಟ್ ಮಾಡಿದ್ದಾರೆ.
Bharat and United States committed to co-develop 6G technology.#G20India pic.twitter.com/KPReyusSkO
— Ashwini Vaishnaw (@AshwiniVaishnaw) September 9, 2023
ಎಟಿಐಎಸ್ ಎಂದರೆ ಅಲಾಯನ್ಸ್ ಫಾರ್ ಟೆಲಿಕಮ್ಯೂನಿಕೇಶನ್ಸ್ ಇಂಡಸ್ಟ್ರಿ ಸಲ್ಯೂಶನ್ಸ್. ಇದು ಉತ್ತರ ಅಮೆರಿಕದ ಖಾಸಗಿ ಟೆಲಿಕಾಂ ಕಂಪನಿಗಳು ಸೇರಿ ಮಾಡಿಕೊಂಡಿರುವ ಒಂದು ಗುಂಪು. ಈ ಸಂಘಟನೆಯಿಂದ ಶುರುವಾಗಿರುವ ಯೋಜನೆಯೇ ನೆಕ್ಸ್ಟ್ ಜಿ ಅಲಾಯನ್ಸ್. ಉತ್ತರ ಅಮೆರಿಕದಲ್ಲಿ ವೈರ್ಲೆಸ್ ತಂತ್ರಜ್ಞಾನದ ಅಭಿವೃದ್ಧಿಗೆ ಖಾಸಗಿ ವಲಯದಿಂದ ಇದನ್ನು ಆರಂಭಿಸಲಾಗಿದೆ. 6ಜಿ ತಂತ್ರಜ್ಞಾನ ಅಭಿವೃದ್ಧಿ ಈ ನಿಟ್ಟಿನಲ್ಲಿ ಇದರ ಮೊದಲ ಹೆಜ್ಜೆ. ಇಲ್ಲಿ ಉತ್ತರ ಅಮೆರಿಕ ಎಂದರೆ ಯುಎಸ್ಎ, ಕೆನಡಾ ಇತ್ಯಾದಿ ದೇಶಗಳಿರುವ ಖಂಡ.
ಇದನ್ನೂ ಓದಿ: ದೆಹಲಿಯಲ್ಲಿ G20 ಶೃಂಗಸಭೆ: ರಿಷಿ ಸುನಕ್ ಸೇರಿದಂತೆ ಇತರೆ ರಾಷ್ಟ್ರ ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಇನ್ನು, ಭಾರತ್ 6ಜಿ ಅಲಾಯನ್ಸ್ ಎಂಬುದು ಭಾರತದ ಉದ್ಯಮ ವಲಯ, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿ ರಚಿಸಲಾಗಿರುವ ಒಂದು ಕೂಟ. ಭಾರತೀಯ ನಾಗರಿಕರಿಗೆ ಹಾಗೂ ವಿಶ್ವಾದ್ಯಂತ ಮಂದಿಗೆ ಉನ್ನತ ಗುಣಮಟ್ಟದ ಜೀವನಾನುಭವ ಕಲ್ಪಿಸುವ ತಂತ್ರಜ್ಞಾನದ ಅಭಿವೃದ್ಧಿ ಸಾಧಿಸುವುದು ಇದರ ಉದ್ದೇಶವಾಗಿದೆ.
ಈಗ ಎಟಿಐಎಸ್ನ ನೆಕ್ಸ್ಟ್ ಜಿ ಕೂಟ ಮತ್ತು ಭಾರತ್ 6ಜಿ ಕೂಟದ ಮಧ್ಯೆ ಆಗಿರುವ ತಿಳಿವಳಿಕೆ ಒಪ್ಪಂದವು ಒಂದು ವಿಶ್ವಾಸಾರ್ಹ ದೂರಸಂಪರ್ಕ ವ್ಯವಸ್ಥೆ, ಉತ್ತಮ ಸರಬರಾಜು ಸರಪಳಿ, ಜಾಗತಿಕ ಡಿಜಿಟಲ್ ಒಳಗೊಳ್ಳುವಿಕೆಗೆ ಉತ್ತೇಜನ ಸಾಧಿಸುವ ಆಶಯ ಹೊಂದಿದೆ.
ಎಟಿಐಎಸ್ ಸಂಸ್ಥೆ ಭಾರತೀಯ ಸಂಘಟನೆ ಜೊತೆ ಮಾತ್ರವಲ್ಲ, ವಿಶ್ವದ ವಿವಿಧ ದೇಶಗಳ ಸಂಘಟನೆಗಳ ಜೊತೆ ಸಹಭಾಗಿತ್ವಕ್ಕೆ ಮುಂದಾಗಿದೆ. ಕೊರಿಯಾದ 5ಜಿ ಫೋರಂ, ಜಪಾನ್ ಮತ್ತು ಯೂರೋಪ್ನ ವಿವಿಧ ಸಂಘಟನೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ