ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಷಾ (Kiran Mazumdar Shah) ಅವರು ಇನ್ಫೋಸಿಸ್ನ ನಿರ್ದೇಶಕರ ಮಂಡಳಿಯಿಂದ (Infosys Board) ನಿವೃತ್ತರಾಗಿದ್ದಾರೆ. ಬೆಂಗಳೂರು ಮೂಲದ ಇನ್ಫೋಸಿಸ್ನ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿ (Lead Independent Director) ಕಿರಣ್ ಮಜುಮ್ದಾರ್ ಷಾ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರು ನಿವೃತ್ತರಾಗಿದ್ದಾರೆ. ಈ ವಿಚಾರವನ್ನು ಇನ್ಫೋಸಿಸ್ ಮಾರ್ಚ್ 23, ಗುರುವಾರ ಪ್ರಕಟಿಸಿದೆ. ಇದೇ ವೇಳೆ, ಡಿ ಸುಂದರಮ್ ಅವರನ್ನು ಇನ್ಫೋಸಿಸ್ನ ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿರುವ ವಿಚಾರವನ್ನೂ ಇನ್ಫೋಸಿಸ್ ಪ್ರಕಟಿಸಿದೆ. ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ (Nomination and Remuneration Committee) ಕೊಟ್ಟ ಶಿಫಾರಸಿನ ಆಧಾರದ ಮೇಲೆ ಸುಂದರಂ ಅವರನ್ನು ಆ ಸ್ಥಾನಕ್ಕೆ ಕೂರಿಸಲಾಗಿದೆ. ಸುಂದರಂ ಅವರು ಮಾರ್ಚ್ 23ರಿಂದಲೇ ಹೊಸ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ.
ಡಿ. ಸುಂದರಮ್ ಅವರು 2017ರಿಂದಲೂ ಇನ್ಫೋಸಿಸ್ನ ನಿರ್ದೇಶಕರ ಮಂಡಳಿಯಲ್ಲಿ ಇದ್ದಾರೆ. ಇನ್ನು, ಕಿರಣ್ ಮಜುಮ್ದಾರ್ ಷಾ ಅವರು 2014ರಲ್ಲೇ ಇನ್ಫೋಸಿಸ್ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕಿಯಾಗಿದ್ದರು. 2018ರಲ್ಲಿ ಮುಖ್ಯ ಸ್ವತಂತ್ರ ನಿರ್ದೇಶಕಿಯಾಗಿ ಬಡ್ಡಿ ಪಡೆದಿದ್ದರು. ಅಲ್ಲದೇ ಅವರು ಇನ್ಫೋಸಿಸ್ ಮಂಡಳಿಯ ವಿವಿಧ ಸಮಿತಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿ, ಎಸ್ಜಿ ಕಮಿಟಿ, ಸಿಎಸ್ಆರ್ ಕಮಿಟಿ, ನಾಮಿನೇಶನ್ ಅಂಡ್ ರೆಮ್ಯೂನರೇಶನ್ ಕಮಿಟಿ ಮೊದಲಾದವಕ್ಕೆ ಕಿರಣ್ ಮಜುಂದಾರ್ ಷಾ ಮುಖ್ಯಸ್ಥೆಯಾಗಿ ಕಾರ್ಯ ನಿಭಾಯಿಸಿದ್ದರು.
ಇದನ್ನೂ ಓದಿ: Businesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ
ಇನ್ಫೋಸಿಸ್ ನಿರ್ದೆಶಕರ ಮಂಡಳಿಯಿಂದ ನಿವೃತ್ತರಾಗಿರುವ ಕಿರಣ್ ಮಜುಮ್ದಾರ್ ಷಾ ಅವರ ಸೇವೆಯನ್ನು ಛೇರ್ಮನ್ ನಂದನ್ ನಿಲೇಕಣಿ ಶ್ಲಾಘಿಸಿದ್ದಾರೆ. “ಇನ್ಫೋಸಿಸ್ ಕುಟುಂಬದ ಅವಿಭಾಜ್ಯ ಸದಸ್ಯೆಯಾಗಿದ್ದುಕೊಂಡು ವರ್ಷಗಳಿಂದ ಮಂಡಳಿಗೆ ಮಾರ್ಗದರ್ಶನ ಮತ್ತು ನಾಯಕತ್ವ ನೀಡಿದ ಕಿರಣ್ಗೆ ನಾವು ಬಹಳ ಧನ್ಯವಾದ ಹೇಳಲೇಬೇಕು. ವೈಯಕ್ತಿಕವಾಗಿ ನಾವು ಆಕೆಗೆ ಬಹಳ ಕೃತಜ್ಞನಾಗಿದ್ದೇನೆ. 2017ರ ಆಗಸ್ಟ್ನಲ್ಲಿ ನಾನು ಇನ್ಫೋಸಿಸ್ಗೆ ಮರಳಿ ಸೇರಿದಾಗಿನಿಂದಲೂ ಮಂಡಳಿಯಲ್ಲಿ ಅವರೊಬ್ಬರ ಅದ್ಭುತ ಸಹವರ್ತಿಯಾಗಿ ಸೇವೆ ನೀಡಿದ್ದಾರೆ” ಎಂದು ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: M3M Hurun’s Rich List 2023: ವಿಶ್ವ ಶ್ರೀಮಂತರಲ್ಲಿ ಅಂಬಾನಿ 9ನೇ ಸ್ಥಾನ; ಅದಾನಿ ಶ್ರೀಮಂತಿಕೆ ಎಷ್ಟು?
ಕಿರಣ್ ಮಜುಮ್ದಾರ್ ಷಾ ಅವರು ಬಯೋಕಾನ್ ಎಂಬ ಬಯೋಟೆಕ್ ಕಂಪನಿಯ ಸಂಸ್ಥಾಪಕಿ. ಬಹಳ ವರ್ಷಗಳ ಕಾಲ ಭಾರತದ ನಂಬರ್ ಒನ್ ಮಹಿಳಾ ಉದ್ಯಮಿ ಎನಿಸಿದ್ದವರು. ಬಯೋಟೆಕ್ ರಾಣಿ ಎಂದೇ ಖ್ಯಾತರಾಗಿರುವ 69 ವರ್ಷದ ಕಿರಣ್ ಮಜುಮ್ದಾರ್ ಷಾ ಇದೀಗ ಭಾರತದ ನಂಬರ್ ಒನ್ ಮಹಿಳಾ ಉದ್ಯಮಿಯಾಗಿ ಉಳಿದಿಲ್ಲ. ನೈಕಾ ಎಂಬ ಫ್ಯಾಷನ್ ಉದ್ಯಮದ ಕಂಪನಿಯ ಒಡತಿ ಫಾಲ್ಗುಣಿ ನಾಯರ್, ರಾಕೇಶ್ ಝುಂಝನವಾಲ ಅವರ ಪುತ್ರಿ ರೇಖಾ ಝುಂಝನವಾಲ ಅವರು ಶ್ರೀಮಂತ ಭಾರತೀಯ ಮಹಿಳೆಯರ ಪಟ್ಟಿಯಲ್ಲಿ ಕಿರಣ್ ಮಜುಮ್ದಾರ್ ಷಾ ಅವರನ್ನು ಹಿಂದಿಕ್ಕಿದ್ದಾರೆ.
ಕಿರಣ್ ಮಜುಮ್ದಾರ್ ಷಾ ಅವರು ಬೆಂಗಳೂರಿಗೆ ಸಂಬಂಧಿಸಿದ ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಸರ್ಕಾರಕ್ಕೆ ಸಲಹೆಗಳನ್ನು ಕೊಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅವರು ಬಹಳ ಸಕ್ರಿಯರಾಗಿದ್ದು, ಸರ್ಕಾರದ ನೀತಿಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನೂ ಮಾಡುವುದಿದೆ.
Published On - 5:31 pm, Thu, 23 March 23