ನವದೆಹಲಿ, ಡಿಸೆಂಬರ್ 22: ಭಾರತದಲ್ಲಿ ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಈ ಕ್ಷೇತ್ರದಲ್ಲಿ ಸ್ಟಾರ್ಟಪ್ಗಳು ಹುಲುಸಾಗಿ ಬೆಳೆಯುತ್ತಿವೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿದ ಮಾಹಿತಿ ಪ್ರಕಾರ ಹತ್ತು ವರ್ಷಗಳ ಹಿಂದೆ (2014) ಬಯೋಟೆಕ್ ಸ್ಟಾರ್ಟಪ್ಗಳ ಸಂಖ್ಯೆ ಕೇವಲ 50 ಇತ್ತು. ಇವತ್ತು ಅವುಗಳ ಸಂಖ್ಯೆ 9,000 ಸಮೀಪಕ್ಕೆ ಹೋಗಿದೆ. 2014ರಲ್ಲಿ ಭಾರತದ ಜೈವಿಕ ಆರ್ಥಿಕತೆಯ ಗಾತ್ರ 10 ಬಿಲಿಯನ್ ಡಾಲರ್ನಷ್ಟಿತ್ತು. 2024ರಲ್ಲಿ ಅದು 130 ಬಿಲಿಯನ್ ಡಾಲರ್ಗೂ ಹೆಚ್ಚಿನ ಗಾತ್ರಕ್ಕೆ ಬೆಳೆದಿದೆ. 2030ರೊಳಗೆ ಅದು 300 ಬಿಲಿಯನ್ ಡಾಲರ್ ಗಾತ್ರದ್ದಾಗಬಹುದು ಎಂದು ನಿರೀಕ್ಷಿಸಲಾಗಿದೆ.
‘ಮಾಲಿನ್ಯ, ಹವಾಮಾನ ಸಮಸ್ಯೆ ಇತ್ಯಾದಿಗಳ ನಡುವೆ ಈ ಸರ್ಕಾರವು ಸುಸ್ಥಿರ ಬೆಳವಣಿಗೆಯನ್ನು ಪ್ರಮುಖ ಆದ್ಯತೆಯಾಗಿ ಮಾಡಿಕೊಂಡಿದೆ. 10-15 ವರ್ಷಗಳ ಹಿಂದಿನವರೆಗೂ ಇದ್ದ ಪರಿಸ್ಥಿತಿ ತದ್ವಿರುದ್ಧದ್ದಾಗಿತ್ತು. ಹವಾಮಾನ ಅಥವಾ ಹಸಿರು ಸಮಸ್ಯೆಗಳಂತಹ ವಿಚಾರಗಳಲ್ಲಿ ಯಾರೂ ಕೂಡ ಭಾರತವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಈ ವಿಚಾರಗಳು ಭಾರತಕ್ಕೆ ನಿಲುಕದ್ದು ಎನ್ನುವ ಕಾರಣಕ್ಕೋ ಅಥವಾ ನಮಗೆ ಅವುಗಳ ಗಂಭೀರತೆ ಅರ್ಥವಾಗುವುದಿಲ್ಲವೆಂಬುದೋ ಈ ಭಾವನೆಗೆ ಕಾರಣವಾಗಿದ್ದಿರಬಹುದು,’ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಭವಿಷ್ಯದ ಸಮಸ್ಯೆಗಳಿಗೆ ಭಾರತ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವಂತಹ ಭಾವನೆಗಳಿದ್ದವು. ಈಗ ಆ ಮಟ್ಟದಿಂದ ಭಾರತ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಗುರಿಗಳನ್ನು ನಿಗದಿ ಮಾಡಿಕೊಂಡು ಹೆಜ್ಜೆ ಹಾಕುತ್ತಿದೆ ಎಂದು ಹೇಳಿದ ಅವರು 2070ರೊಳಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಸ್ಥಿತಿಯನ್ನು ಸಾಧಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಸಾಫ್ಟ್ಪವರ್ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್
ಕಳೆದ ಕೆಲ ವರ್ಷಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಸಚಿವರು ಪ್ರಸ್ತಾಪಿಸಿದ್ದಾರೆ. ‘ಗ್ರೀನ್ ಹೈಡ್ರೋಜನ್ ಮಿಷನ್ ಹೊಂದಿದ್ದೇವೆ. ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಯೋಜನೆ ಹಾಕಿದ್ದೆವೆ. ಜೈವಿಕ ವೈವಿಧ್ಯತೆಯ ವಿಷಯಕ್ಕೆ ಬಂದರೆ ನಾವು ಸಾಗರದಾಳದ ಮಿಷನ್ ಅನ್ನು ಆರಂಭಿಸಿದ್ದೇವೆ. ಇಂಥದ್ದೊಂದು ಯೋಜನೆಯನ್ನು ಆರಂಭಿಸಿದ ವಿಶ್ವದ ಮೊದಲಿಗರಲ್ಲಿ ನಾವು ಇದ್ದೇವೆ,’ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ