ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ (ಪಿಎಂಸಿ) ಬ್ಯಾಂಕ್ ಸೇರಿದಂತೆ ಒತ್ತಡದಲ್ಲಿದ್ದ ಬ್ಯಾಂಕ್ಗಳ ಠೇವಣಿದಾರರಿಗೆ ನಬೆಂಬರ್ 30ನೇ ತಾರೀಕಿನಿಂದ 5 ಲಕ್ಷ ರೂಪಾಯಿ ತನಕ ದೊರೆಯಲಿದೆ. ಡಿಐಸಿಜಿಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಲಿದೆ. ಈ ತಿಂಗಳ ಆರಂಭದಲ್ಲಿ ಸಂಸತ್ನಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆ, 2021ಕ್ಕೆ ಅನುಮೋದನೆ ನೀಡಲಾಗಿತ್ತು. ಅದರ ಪ್ರಕಾರವಾಗಿ, ಆರ್ಬಿಐನಿಂದ ಯಾವ ಬ್ಯಾಂಕ್ ಮೇಲೆ ನಿರ್ಬಂಧ ಹೇರಲಾಗುತ್ತದೋ ಅದರಲ್ಲಿನ ಠೇವಣಿದಾರರು 5 ಲಕ್ಷ ರೂಪಾಯಿಯೊಳಗಿನ ಮೊತ್ತವನ್ನು 90 ದಿನದೊಳಗೆ ಹಿಂಪಡೆಯುತ್ತಾರೆ. ಆ ಐದು ಲಕ್ಷ ರೂಪಾಯಿ ಮೊತ್ತವನ್ನು ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನೀಡುತ್ತದೆ.
ಕೇಂದ್ರ ಸರ್ಕಾರವು ಸೆಪ್ಟೆಂಬರ್ 1, 2021 ದಿನಾಂಕವನ್ನು ಕಾಯ್ದೆಯ ಜಾರಿಯ ದಿನಾಂಕವಾಗಿ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಆಗಸ್ಟ್ 27, 2021ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದಾದ ಮೇಲೆ ನವೆಂಬರ್ 30, 2021ರ ನಂತರದಲ್ಲಿ 90 ದಿನದೊಳಗಾಗಿ ಠೇವಣಿದಾರರಿಗೆ ತಮ್ಮ ಹಣ ವಾಪಸ್ ದೊರೆಯುತ್ತದೆ. ಮೊದಲ 45 ದಿನಗಳು ಒತ್ತಡದಲ್ಲಿ ಸಿಲುಕಿಕೊಂಡ ಬ್ಯಾಂಕ್ಗಳಿಗೆ ಇರುತ್ತದೆ. ಖಾತೆಗಳ ಎಲ್ಲ ಮಾಹಿತಿಯನ್ನು ಕಲೆಹಾಕಿ, ಎಲ್ಲಿ ಕ್ಲೇಮ್ ಮಾಡಬೇಕು ಎಂಬ ವಿವರವನ್ನು ತಿಳಿಯಲಾಗುತ್ತದೆ. ಆ ನಂತರ ಇದನ್ನು ಇನ್ಷೂರೆನ್ಸ್ ಕಂಪೆನಿಗೆ ಕಳುಹಿಸಲಾಗುತ್ತದೆ. ಎಲ್ಲವನ್ನೂ ಪರಿಶೀಲನೆ ಮಾಡಿ, 90ನೇ ದಿನ ಹತ್ತಿರ ಬರುತ್ತಿದ್ದಂತೆ ಠೇವಣಿದಾರರಿಗೆ ಹಣ ದೊರೆಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಈಗ ಒತ್ತಡದಲ್ಲಿ ಸಿಲುಕಿಕೊಂಡು, ಆರ್ಬಿಐನಿಂದ ನಿರ್ಬಂಧ ಹೇರಲಾದ 23 ಕೋ ಆಪರೇಟಿವ್ ಬ್ಯಾಂಕ್ಗಳ ಠೇವಣಿದಾರರಿಗೆ ಈಗಿನ ನಡೆಯಿಂದ ಅನುಕೂಲ ಆಗಲಿದೆ. ಅಂದಹಾಗೆ ಡಿಐಸಿಜಿಸಿ ಎಂಬುದು ಪೂರ್ತಿಯಾಗಿ ಆರ್ಬಿಐನ ಅಂಗಸಂಸ್ಥೆ. ಬ್ಯಾಂಕ್ ಠೇವಣಿ ಮೇಲೆ ಇನ್ಷೂರೆನ್ಸ್ ಕವರ್ ಒದಗಿಸುತ್ತದೆ. ಸದ್ಯಕ್ಕೆ ಏನು ಪರಿಸ್ಥಿತಿ ಇದೆ ಅಂದರೆ, ಸಂಕಷ್ಟಕ್ಕೆ ಸಿಲುಕಿಕೊಂಡ ಬ್ಯಾಂಕ್ಗಳ ಠೇವಣಿದಾರರು ತಮ್ಮ ಇನ್ಷೂರೆನ್ಸ್ ಹಣ ಹಾಗೂ ಇತರ ಕ್ಲೇಮ್ ಪಡೆಯಲು ಎಂಟರಿಂದ ಹತ್ತು ವರ್ಷ ಸಮಯ ತೆಗೆದುಕೊಳ್ಳುತ್ತಿದೆ. ಏನೇ ಕೇಂದ್ರ ಸರ್ಕಾರ ಹಾಗೂ ಆರ್ಬಿಐ ನಿಗಾ ವಹಿಸುತ್ತಿದ್ದರೂ ಬ್ಯಾಂಕ್ಗಳಲ್ಲಿ, ಅದರಲ್ಲೂ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ವಂಚನೆ ಪ್ರಕರಣ, ನಿಯಮ ಉಲ್ಲಂಘನೆ ಆಗುತ್ತಿದೆ. ಅಂಥ ಸಂದರ್ಭದಲ್ಲಿ ಆರ್ಬಿಐನಿಂದ ವಹಿವಾಟಿಗೆ ನಿರ್ಬಂಧ ಹೇರಿ, ಠೇವಣಿದಾರರಿಗೆ ಸಮಸ್ಯೆ ಆಗುತ್ತಿದೆ.
ಕಳೆದ ವರ್ಷ ಸರ್ಕಾರದಿಂದ ಠೇವಣಿ ಮೇಲಿನ ಇನ್ಷೂರೆನ್ಸ್ ಮೊತ್ತವನ್ನು ಐದು ಪಟ್ಟು, ಅಂದರೆ ಐದು ಲಕ್ಷ ರೂಪಾಯಿಗೆ ಏರಿಸಲಾಯಿತು. ಫೆಬ್ರವರಿ 4, 2020ರಿಂದ ವಿಸ್ತರಣೆಯಾದ 5 ಲಕ್ಷ ರೂಪಾಯಿಯ ಇನ್ಷೂರೆನ್ಸ್ ಕವರ್ ಜಾರಿಗೆ ಬಂದಿದೆ. ಪ್ರತಿ ಬ್ಯಾಂಕ್ ಸಹ ಠೇವಣಿ ಮೊತ್ತದ ತಲಾ 100 ರೂಪಾಯಿಗೆ 10 ಪೈಸೆಯಂತೆ ಪ್ರೀಮಿಯಂ ಪಾವತಿ ಮಾಡಬೇಕು.
ಇದನ್ನೂ ಓದಿ: ಡಿಐಸಿಜಿಸಿ ಕಾಯ್ದೆ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಅಸ್ತು; ಕೋಟ್ಯಂತರ ಬ್ಯಾಂಕ್ ಠೇವಣಿದಾರರ ಹಣಕ್ಕೆ ಸಿಕ್ತು ಗ್ಯಾರಂಟಿ
(Depositors Of Stressed Banks Will Get Money Up to Rs 5 Lakhs Within 90 Days From November 30 2021)
Published On - 11:43 pm, Mon, 30 August 21