Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 19, 2021 | 9:45 PM

ನೀವೂ ಹೊಸ ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಬರಹವನ್ನೊಮ್ಮೆ ಓದಿ.

Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?
Follow us on

ಹತ್ತಾರು ವರ್ಷಗಳಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಓಡುತ್ತಿವೆ. ಆದರೆ ಇತ್ತೀಚೆಗೆ, ಅದರಲ್ಲೂ ಒಲಾ ಮತ್ತು ಟಿವಿಎಸ್ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೊಸ ಆಸಕ್ತಿ ಮೂಡಿದೆ. ಹೊಸದಾಗಿ ವಾಹನಗಳನ್ನು ಖರೀದಿಸಲು ಇಚ್ಛಿಸುವವರು, ಇರುವ ವಾಹನ ಬದಲಿಸಲು ಯೋಚಿಸುವವರು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ನೀವೂ ಹೊಸ ವಾಹನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಈ ಬರಹವನ್ನೊಮ್ಮೆ ಓದಿ.

ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಗಮನ ನೀಡಲು ಮುಖ್ಯ ಕಾರಣ ಏರುತ್ತಿರುವ ಪೆಟ್ರೋಲ್ ದರಗಳು ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ನೀಡುತ್ತಿರುವ ಸಬ್ಸಿಡಿ. ಕಳೆದ ಒಂದು ವರ್ಷದಿಂದೀಚೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರ ಹಲವು ಉತ್ತೇಜಕ ಕ್ರಮಗಳನ್ನು ಘೋಷಿಸಿದೆ. ಒಲಾ ಎಸ್​1 ಮತ್ತು ಎಸ್​1 ಪ್ರೊ ಬುಕಿಂಗ್ ಆರಂಭವಾದ 24 ಗಂಟೆಯ ಒಳಗೆ ಬರೋಬ್ಬರಿ ಒಂದು ಲಕ್ಷ ಮಂದಿ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ. ನಗರ ಪ್ರದೇಶಗಳಲ್ಲಿ ಹೆಚ್ಚು ಒಲವು ವ್ಯಕ್ತವಾಗಿರುವುದು ಗಮನಾರ್ಹ ಸಂಗತಿ.

ಇ-ಸ್ಕೂಟರ್​ಗಳಿಂದ ಜನರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಈ ಬೆಳವಣಿಗೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ಐಸಿಇ ತಂತ್ರಜ್ಞಾನದ ಸ್ಕೂಟರ್ ಹೋಂಡಾ ಆ್ಯಕ್ಟೀವಾ ಟಿವಿಎಸ್ ಎನ್​ಟಾರ್ಕ್ ಜೊತೆಗೆ ಜನಪ್ರಿಯ ಎಲೆಕ್ಟ್ರಿಕ್ ವಾಹನಗಳಾದ ಏಥರ್ 450ಎಕ್ಸ್ ಮತ್ತು ಒಲಾ ಎಸ್​1​ ಮುಖ್ಯ ವೈಶಿಷ್ಟ್ಯಗಳನ್ನು ಮುಖಾಮುಖಿಯಾಗಿಸುತ್ತಿದ್ದೇವೆ. ಆಟೊಕಾರ್ ಪ್ರೊಫೆಷನಲ್ ಜಾಲತಾಣದಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿದ್ದ ಕೆಲ ಅಂಶಗಳನ್ನು ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.

ಬೆಲೆ
2020ರ ಇಡೀ ವರ್ಷ ಮಾರಾಟವಾಗಿರುವ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ 2021ರ ಮೊದಲು ತ್ರೈಮಾಸಿಕದಲ್ಲಿ ಮಾರಾಟವಾಗಿರುವ ಇ-ಸ್ಕೂಟರ್​ಗಳ ಸಂಖ್ಯೆ ಹೆಚ್ಚು. ಹಿರೊ ಎಲೆಕ್ಟ್ರಿಕ್ ಮತ್ತು ಏಥರ್ ಎನರ್ಜಿ ಕಂಪನಿಯ ವಾಹನಗಳು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಓಲಾ ಎಸ್​1 ಬಗ್ಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. ಇದು ಟಿವಿಎಸ್​ ಎನ್​ಟಾರ್ಕ್​ಗಿಂತ ₹ 11 ಸಾವಿರ ಹೆಚ್ಚು ಬೆಲೆ ಹೊಂದಿದೆ. ಕಾರ್ಯಕ್ಷಮತೆಯಲ್ಲಿ ಓಲಾ ಎಸ್​1 ವಾಹನವನ್ನು ಟಿವಿಎಸ್​ ಎನ್​ಟಾರ್ಕ್​ಗೆ ಹೋಲಿಸಬಹುದು.

ತಂತ್ರಜ್ಞಾನ
ತಂತ್ರಜ್ಞಾನದ ವಿಚಾರದಲ್ಲಿ ಎಲೆಕ್ಟ್ರಿಕ್ ವಾಹನಗಳು ಸ್ಪಷ್ಟವಾಗಿ ಮೇಲುಗೈ ಸಾಧಿಸುತ್ತವೆ. ಓಲಾ ಸ್ಕೂಟರ್​ನಲ್ಲಿ ರಿವರ್ಸ್​ ಬಟನ್ ನೀಡಲಾಗಿದೆ. ಈವರೆಗೆ ಇದು ಎಚ್​-ಡಿ ರೋಡ್ ಗ್ಲೈಡ್​, ಹೋಂಡಾ ಗೋಲ್ಡ್​ವಿಂಗ್​ನಂಥ ದುಬಾರಿ ವಾಹನಗಳಲ್ಲಿ ಮಾತ್ರವೇ ಕಾಣಿಸುತ್ತಿತ್ತು. ಭಾರತದಲ್ಲಿ ಮಾರಾಟವಾಗುತ್ತಿರುವ ಯಾವುದೇ ಪೆಟ್ರೋಲ್ ಗಾಡಿಗಳಲ್ಲಿ ಇಲ್ಲದಷ್ಟು ಫೀಚರ್​ಗಳನ್ನು ಎಲೆಕ್ಟ್ರಿಕ್ ವಾಹನಗಳು ಕೊಡುತ್ತಿವೆ. ತಂತ್ರಜ್ಞಾನದ (ಅತ್ಯಾಧುನಿಕ ಫೀಚರ್​ಗಳು) ವಿಷಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಹತ್ತಿರಕ್ಕೂ ಪೆಟ್ರೋಲ್ ವಾಹನಗಳು ಬರುವುದಿಲ್ಲ.

ನಿರ್ವಹಣಾ ವೆಚ್ಚ
ಈ ವಿಷಯದಲ್ಲಿ ಎರಡು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಪೆಟ್ರೋಲ್ ಸ್ಕೂಟರ್​ಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್​ಗಳ ನಿರ್ವಹಣೆ ಸುಲಭ, ನಿರ್ವಹಣಾ ವೆಚ್ಚವೂ ಕಡಿಮೆ. ಇದಕ್ಕೆ ಮುಖ್ಯ ಕಾರಣವೆಂದರೆ ಎಲೆಕ್ಟ್ರಿಕ್ ವಾಹನದಲ್ಲಿ ಚಲಿಸುವ ಬಿಡಿಭಾಗಗಳು ಅತ್ಯಂತ ಕಡಿಮೆ ಇರುವುದು. ಹೀಗಾಗಿ ಎಂಜಿನ್ ಬಿಚ್ಚಿ ರಿಪೇರಿ ಮಾಡುವಂಥದ್ದು, ಬಿಡಿಭಾಗಗಳನ್ನು ಬದಲಿಸುವಂಥ ಕೆಲಸಗಳು ಎಲೆಕ್ಟ್ರಿಕ್ ಸ್ಕೂಟರ್​ಗಳಲ್ಲಿ ಹೆಚ್ಚಾಗಿ ಇರುವುದಿಲ್ಲ. ಎಲೆಕ್ಟ್ರಿಕ್ ವಾಹನಗಳ ಎಂಜಿನ್ ಬೆಲೆ ಸರಾಸರಿ ₹ 25,000 ಇದೆ. ಸಾಮಾನ್ಯವಾಗಿ 2ರಿಂದ 3 ವರ್ಷ ಯಾವುದೇ ತೊಂದರೆ ಕೊಡುವುದಿಲ್ಲ ಎಂದು ಬಳಸಿದವರು ಹೇಳುತ್ತಾರೆ.

ಕಾರ್ಯಕ್ಷಮತೆ
ಕಾರ್ಯಕ್ಷಮತೆಯ ವಿಚಾರದಲ್ಲಿ ಇ-ಸ್ಕೂಟರ್​ಗಳು ನಿಚ್ಚಳ ಮೇಲುಗೈ ಸಾಧಿಸಿವೆ. ಏಥರ್ ಮತ್ತು ಓಲಾ ಕಂಪನಿಗಳ ಸ್ಕೂಟರ್​ಗಳು ತತ್​ಕ್ಷಣದ ಟಾರ್ಕ್​ ಬಲ ಕೊಡುತ್ತವೆ. ಬೆಲ್ಟ್​ನಿಂದ ಎಂಜಿನ್ ಬಲವನ್ನು ಚಕ್ರಕ್ಕೆ ತಲುಪಿಸುವ ಪೆಟ್ರೋಲ್​ ಸ್ಕೂಟರ್​ಗಳಿಂದ ಎಂದಿಗೂ ಇದನ್ನು ನಿರೀಕ್ಷಿಸಲು ಆಗುವುದಿಲ್ಲ. ಏಥರ್ 450ಎಕ್ಸ್​ ಸರಿಸುಮಾರು 7.2 ಬಿಎಚ್​ಪಿ ಮತ್ತು 24 ಎನ್​ಎಂ ಟಾರ್ಕ್​ ಬಲ ಕೊಡುತ್ತದೆ. ಇದಕ್ಕಿಂತಲೂ ಬಲವಾಗಿರುವ ಓಲಾ ಎಸ್​1 ಪ್ರೊ ನಂಬಲಸಾಧ್ಯ ಎನ್ನಿಸುವಂಥ 58 ಎನ್​ಎಂ ಟಾರ್ಕ್​ ಬಲ ಕೊಡುತ್ತದೆ. ಹೆಚ್ಚು ಕಡಿಮೆ ಮಧ್ಯಮ ಹಂತದ ಸ್ಪೋರ್ಟ್ಸ್​ ಬೈಕ್​ಗೆ ಇದು ಸಮ.

ಬಾಳಿಕೆ
ಭಾರತದಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಬಹುತೇಕ ಪೆಟ್ರೋಲ್ ಸ್ಕೂಟರ್​ಗಳು ಇಲ್ಲಿನ ಹವಾಮಾನ ಮತ್ತು ರಸ್ತೆ ಸ್ಥಿತಿಗತಿಯ ಸವಾಲು ಎದುರಿಸಿ ಗೆದ್ದಿವೆ. ಆದರೆ ಎಲೆಕ್ಟ್ರಿಕ್ ಸ್ಕೂಟರ್​ಗಳ ವಿಚಾರದಲ್ಲಿ ಈ ಅಂಶವಿನ್ನೂ ಸಾಬೀತಾಗಬೇಕಿದೆ. ಈವರೆಗಿನ ಎಲೆಕ್ಟ್ರಿಕ್ ಸ್ಕೂಟರ್​ಗಳ ಮಾಲೀಕತ್ವದ ಅಂಕಿಅಂಶಗಳನ್ನು ಗಮನಿಸಿದರೆ ಬಹುತೇಕ ಭಾರತೀಯರು ಗರಿಷ್ಠ 5 ವರ್ಷಗಳ ಒಳಗೆ, ಬ್ಯಾಟರಿ ಬದಲಾವಣೆಗೆ ಬರುವ ಮೊದಲು ಸ್ಕೂಟರ್​ ಮಾರುತ್ತಿದ್ದಾರೆ. ಆದರೆ ಪೆಟ್ರೋಲ್ ವಾಹನಗಳನ್ನು ಹತ್ತಾರು ವರ್ಷ ತಮ್ಮಲ್ಲಿಯೇ ಇರಿಸಿಕೊಳ್ಳುತ್ತಾರೆ.

ಗಮನಿಸಬೇಕಾದ ಸಂಗತಿ
ಎಲೆಕ್ಟ್ರಿಕ್ ಸ್ಕೂಟರ್​ಗೆ ಬಳಸುವ ಬ್ಯಾಟರಿಗಳ ಬೆಲೆಯು ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಈಗ ಬಿಡುಗಡೆ ಮಾಡಿರುವ ಸ್ಕೂಟರ್​ಗಳನ್ನು ಸಾಕಷ್ಟು ಪರೀಕ್ಷೆಗಳ ನಂತರವೇ ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಗ್ರಹವಾಗುವ ದತ್ತಾಂಶದ ವಿಶ್ಲೇಷಣೆಯಿಂದ ವಿನ್ಯಾಸ ಮತ್ತು ತಂತ್ರಜ್ಞಾನ ಮತ್ತಷ್ಟು ಸುಧಾರಿಸಲಿದೆ. ಒಂದೊಮ್ಮೆ ಬ್ಯಾಟರಿ ದರಗಳು ಕಡಿಮೆಯಾದರೆ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಪೆಟ್ರೋಲ್ ಸ್ಕೂಟರ್​ಗಳ ಬೆಲೆಯ ವ್ಯತ್ಯಾಸವೂ ಕಡಿಮೆಯಾಗಲಿದೆ. ಐದು ವರ್ಷಗಳಿಗೊಮ್ಮೆ ಬ್ಯಾಟರಿ ಬದಲಿಸಬೇಕಾದ ಪರಿಸ್ಥಿತಿ ಬಂದರೂ ಎಲೆಕ್ಟ್ರಿಕ್ ಸ್ಕೂಟರ್​ ಖರೀದಿ ಲಾಭದಾಯಕ ಎನಿಸಬಹುದು.

ಇಂಧನ ಮರುಪೂರಣ, ರಿಚಾರ್ಜ್
ಪೆಟ್ರೋಲ್ ದರ ಹೆಚ್ಚಾಗಿದ್ದರೂ ಅದು ಎಲ್ಲೆಡೆ ಸುಲಭವಾಗಿ ಸಿಗುವುದು ಪೆಟ್ರೋಲ್ ವಾಹನಗಳ ಜನಪ್ರಿಯತೆಗೆ ಮುಖ್ಯ ಕಾರಣ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್​ಗಳು ಇನ್ನೂ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸ್ಥಾಪನೆಯಾಗಬೇಕಿದೆ. ಸರಾಸರಿ ಪ್ರಯಾಣದ ಅಂತರ 50 ಕಿಲೋ ಮೀಟರ್​ಗಿಂತಲೂ ಹೆಚ್ಚು ಇರುವವರು ಇದೇ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂಜರಿಯುತ್ತಿದ್ದಾರೆ. ಅಪಾರ್ಟ್​ಮೆಂಟ್​ಗಳಲ್ಲಿ ಚಾರ್ಜಿಂಗ್ ಯೂನಿಟ್​ ಸ್ಥಾಪಿಸುವುದು ಈಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರು ಟ್ರೆಂಡ್. ಈ ಪರಿಕಲ್ಪನೆ ಜನಪ್ರಿಯವಾದರೆ ಎಲೆಕ್ಟ್ರಿಕ್ ವಾಹನಗಳ ಬಳಕೆಯೂ ಹೆಚ್ಚಾಗಲಿದೆ. ಹೊಸದಾಗಿ ಮನೆಗಳನ್ನು ಕಟ್ಟಿಸುವವರು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್​ ಪಾಯಿಂಟ್ ಅಳವಡಿಸುವುದು ಸಾಮಾನ್ಯ ವಿದ್ಯಮಾನ ಎನಿಸುತ್ತಿದೆ.

ಒಟ್ಟಾರೆಯಾಗಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಯ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆಯಂತೂ ನಿಚ್ಚಳವಾಗಿದೆ.

(Electric vs Petrol Scooters which is the Better and smarter choice)

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ 1 ಸಾವಿರ ರೀಚಾರ್ಜಿಂಗ್ ಕೇಂದ್ರ ಆರಂಭ; ಬೆಂಗಳೂರಲ್ಲೇ 500: ಸಚಿವ ಸುನೀಲ್ ಕುಮಾರ್

ಇದನ್ನೂ ಓದಿ: Ola Electric: ಓಲಾ ಎಲೆಕ್ಟ್ರಿಕ್ ಸ್ಕೂಟರ್​ ಮಾರಾಟದಿಂದ ಎರಡು ದಿನದಲ್ಲಿ ರೂ. 1100 ಕೋಟಿ ಸಂಗ್ರಹ