ಕೃಷಿಯತ್ತ ದಾಪುಗಾಲು ಹಾಕುತ್ತಿರುವ ಅಮೆರಿಕದ ಅತಿಶ್ರೀಮಂತ ಉದ್ಯಮಿಗಳು

|

Updated on: Jul 09, 2022 | 6:00 AM

ಆಮೆಜಾನ್ ಕಂಪನಿಯ ಜೆಫ್ ಬೆಜೋಸ್ ಬರೋಬ್ಬರಿ 4,20,00 ಎಕರೆ ಕೃಷಿ ಭೂಮಿಯ ಮಾಲೀಕರಾಗಿದ್ದಾರೆ.

ಕೃಷಿಯತ್ತ ದಾಪುಗಾಲು ಹಾಕುತ್ತಿರುವ ಅಮೆರಿಕದ ಅತಿಶ್ರೀಮಂತ ಉದ್ಯಮಿಗಳು
ಜೆಫ್​ ಬೆಜೋಸ್ (ಸಂಗ್ರಹ ಚಿತ್ರ)
Follow us on

ಭಾರತದ ಅತಿ ಶ್ರೀಮಂತ ಉದ್ಯಮಿಗಳಾಗಿರುವ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಷೇರು ಮಾರುಕಟ್ಟೆಯ ಬುಲ್ ಖ್ಯಾತಿಯ ರಾಕೇಶ್ ಜುಂಜುನ್​ವಾಲಾ ಸೇರಿದಂತೆ ಭಾರತದ ಶ್ರೀಮಂತ ಉದ್ಯಮಿಗಳು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡಿಲ್ಲ. ಆದರೆ ಆಮೆರಿಕಾದಲ್ಲಿ ಪರಿಸ್ಥಿತಿ ಹೀಗಿಲ್ಲ. ಆಮೆರಿಕಾದ ಶ್ರೀಮಂತ ಉದ್ಯಮಿಗಳು ಕೃಷಿ ಭೂಮಿ ಖರೀದಿಸಿದ್ದಾರೆ, ಕೃಷಿ ಕೂಡ ಮಾಡುತ್ತಿದ್ದಾರೆ. ಆಮೆರಿಕಾದ ಯಾವ ಉದ್ಯಮಿ ಎಷ್ಟೆಷ್ಟು ಎಕರೆ ಕೃಷಿ ಭೂಮಿ ಖರೀದಿಸಿದ್ದಾರೆ? ಏನೇನು ಕೃಷಿ ಮಾಡುತ್ತಿದ್ದಾರೆ ಎನ್ನುವ ವಿವರಗಳು ಇಲ್ಲಿದೆ.

ಆಮೆರಿಕದ ಬಿಲ್​ಗೇಟ್ಸ್, ಜೆಫ್ ಬೆಜೋಸ್ ಜಾನ್ ಮಲೋನ್ ಶ್ರೀಮಂತ ಉದ್ಯಮಿಗಳೆಂದು ನಮಗೆ ಗೊತ್ತು. ಇವರು ಕೃಷಿಯಲ್ಲಿಯೂ ದೊಡ್ಡಮಟ್ಟದಲ್ಲಿ ತೊಡಗಿಸಿಕೊಂಡಿದ್ದಾರೆ. ಲಕ್ಷಗಟ್ಟಲೇ ಎಕರೆ ಕೃಷಿಭೂಮಿಯ ಮಾಲೀಕರಾಗಿದ್ದಾರೆ. ಬಿಲ್ ಗೇಟ್ಸ್‌ನಂತಹ ಅತಿ ಶ್ರೀಮಂತರು ಸೇರಿದಂತೆ ಜನರು ತಮ್ಮ ಹೂಡಿಕೆಯನ್ನು ವೃದ್ಧಿಸಿಕೊಳ್ಳಲು ಹೊಸ ಮಾರ್ಗಗಳನ್ನು ಹುಡುಕುತ್ತಿರುವುದರಿಂದ ಕೃಷಿ ಭೂಮಿಯಲ್ಲಿ ಹೂಡಿಕೆಗಳು ಆಮೆರಿಕಾದಾದ್ಯಂತ ಬೆಳೆಯುತ್ತಿವೆ.

2020ರಲ್ಲಿ ಬಿಲ್ ಗೇಟ್ಸ್ ಆಮೆರಿಕಾದಲ್ಲಿ ಅತಿದೊಡ್ಡ ಖಾಸಗಿ ಕೃಷಿಭೂಮಿ ಮಾಲೀಕರಾಗುವುದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಿಲ್ ಗೇಟ್ಸ್ ಒಂದು ದಶಕದೊಳಗೆ 18 ರಾಜ್ಯಗಳಲ್ಲಿ 2,69,000 ಎಕರೆಗಳಿಗಿಂತ ಹೆಚ್ಚು ಕೃಷಿಭೂಮಿಯನ್ನು ಹೊಂದಿದ್ದಾರೆ. ಆಮೆರಿಕಾದ ನ್ಯೂಯಾರ್ಕ್ ನಗರಕ್ಕಿಂತ ಹೆಚ್ಚು ವಿಶಾಲವಾದ ಕೃಷಿ ಭೂಮಿಯನ್ನು ಬಿಲ್ ಗೇಟ್ಸ್ ಹೊಂದಿದ್ದಾರೆ. ಬಿಲ್ ಗೇಟ್ಸ್ ಅವರು ಈ ಕೃಷಿ ಭೂಮಿಯಲ್ಲಿ ಈರುಳ್ಳಿ, ಕ್ಯಾರೆಟ್ ಮತ್ತು ಮೆಕ್‌ಡೊನಾಲ್ಡ್ಸ್ ಫ್ರೆಂಚ್ ಫ್ರೈಗಳನ್ನು ತಯಾರಿಸಲು ಬಳಸುವ ಆಲೂಗಡ್ಡೆಗಳನ್ನು ಬೆಳೆಯುತ್ತಾರೆ.

ಆಮೆಜಾನ್ ಕಂಪನಿಯ ಜೆಫ್ ಬೆಜೋಸ್ ಬರೋಬ್ಬರಿ 4,20,00 ಎಕರೆ ಕೃಷಿ ಭೂಮಿಯ ಮಾಲೀಕರಾಗಿದ್ದಾರೆ. ಜಾನ್ ಮಲೋನ್ ಆಮೆರಿಕಾದಲ್ಲಿ ಬರೋಬ್ಬರಿ 22 ಲಕ್ಷ ಎಕರೆ ಕೃಷಿ ಭೂಮಿಯ ಮಾಲೀಕರಾಗಿದ್ದಾರೆ. ಥಾಮಸ್ ಪೀಟರ್ಫಿ ಅವರು ಬರೋಬ್ಬರಿ 5,81,000 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಥಾಮಸ್ ಪೀಟರ್ಫಿ ಅವರು ಕೃಷಿ ಭೂಮಿಯು ಬ್ಯೂಟಿಫುಲ್ ಮತ್ತು ಪೀಸ್ ಫುಲ್ ಹಾಗೂ ಜೀವನ ನಡೆಸಲು ಉತ್ತಮಾಗಿದೆ, ಹೀಗಾಗಿ ಕೃಷಿ ಭೂಮಿ ಖರೀದಿಸಿದ್ದೇನೆ ಎನ್ನುತ್ತಾರೆ.

ನೂರು ಮಂದಿ ಶ್ರೀಮಂತರು ಆಮೆರಿಕಾದ ಶೇ 1.86ರಷ್ಟು ಭೂಮಿಯ ಮಾಲೀಕರಾಗಿದ್ದಾರೆ. ‘ಕೃಷಿ ಭೂಮಿಯು ಹೆಚ್ಚುತ್ತಿರುವ ಮೌಲ್ಯವನ್ನು ಹೊಂದಿರುವ ಆಸ್ತಿಯಾಗಿದೆ’ ಎಂದು ಅಮೇರಿಕನ್ ಫಾರ್ಮ್ ಲ್ಯಾಂಡ್‌ಟ್ರಸ್ಟ್ ಸಿಇಒ ಜಾನ್ ಪಿಯೊಟ್ಟಿ ಹೇಳುತ್ತಾರೆ. ‘ಇದು ಉತ್ತಮ ಆಂತರಿಕ ಮೌಲ್ಯವನ್ನು ಹೊಂದಿದೆ. ಅದನ್ನು ಮೀರಿ, ಇದು ಸೀಮಿತ ಸಂಪನ್ಮೂಲವಾಗಿದೆ’ ಎಂದು ವಿಶ್ಲೇಷಿಸುತ್ತಾರೆ ಅವರು.

ಆಮೆರಿಕಾದ ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಎಲ್ಲಾ ಕೃಷಿ ಭೂಮಿಯಲ್ಲಿ ಶೇ 30 ರಷ್ಟು ಭೂಮಾಲೀಕರು ಸ್ವತಃ ಕೃಷಿ ಮಾಡುವುದಿಲ್ಲ. ಖರೀದಿದಾರರು ಸಾಮಾನ್ಯವಾಗಿ ದಶಕಗಳಿಂದ ಭೂಮಿಯನ್ನು ಹೊಂದಿರುವ ರೈತರಿಂದ ಖರೀದಿಸುತ್ತಾರೆ. ಅವರಲ್ಲಿ ಅನೇಕರು ಆಸ್ತಿ ಶ್ರೀಮಂತರಾಗಿರಬಹುದು ಆದರೆ ನಗದು ಇಲ್ಲ ಬಡವರಾಗಿರಬಹುದು. ದುಡ್ಡಿಲ್ಲದ ಜನರು ಕೃಷಿಭೂಮಿಯನ್ನು ಮಾರಾಟ ಮಾಡುತ್ತಾರೆ.

ಖಾಸಗಿ ಭೂಮಾಲೀಕರು ಸಹ ಹಲವಾರು ರೀತಿಯಲ್ಲಿ ಭೂಮಿಯನ್ನು ಬಳಸಿಕೊಂಡು ಲಾಭ ಗಳಿಸುತ್ತಿದ್ದಾರೆ. ಆಮೆರಿಕಾದಾದ್ಯಂತ 911 ಮಿಲಿಯನ್ ಎಕರೆ ಕೃಷಿಭೂಮಿಯಲ್ಲಿ ಸರಿಸುಮಾರು ಶೇ 39ರಷ್ಟು ಭೂಮಿಯನ್ನು ರೈತರಿಗೆ ಬಾಡಿಗೆಗೆ ನೀಡಲಾಗಿದೆ. ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಸ್ವತಃ ಕೃಷಿ ಮಾಡದ ಭೂಮಾಲೀಕರ ಮಾಲೀಕತ್ವದಲ್ಲಿ ಶೇ 80 ರಷ್ಟು ಭೂಮಿ ಇದೆ.

‘ಯುವ ರೈತರು ಭೂಮಿಯನ್ನು ಗುತ್ತಿಗೆ ನೀಡಲು ಸಂತೋಷಪಡುತ್ತಾರೆ ಏಕೆಂದರೆ ನೀವು ಚಿಕ್ಕವರಾಗಿರಲಿ ಅಥವಾ ವಯಸ್ಸಾದವರಾಗಿರಲಿ, ಇದು ವ್ಯವಹಾರವೇ, ಸರಿ?’ ಎಂದು ಇಂಟರಾಕ್ಟಿವ್ ಬ್ರೋಕರ್ಸ್ ಅಧ್ಯಕ್ಷ ಥಾಮಸ್ ಪೀಟರ್ಫಿ ಹೇಳಿದರು.

ಆಮೆರಿಕಾದಲ್ಲಿ 1990ರಲ್ಲಿ ಒಂದು ಎಕರೆ ಕೃಷಿ ಭೂಮಿಗೆ 1,500 ಡಾಲರ್ ಮೌಲ್ಯ ಇತ್ತು. ಆದರೆ, 2020ರ ವೇಳೆಗೆ ಎಕರೆ ಕೃಷಿ ಭೂಮಿ ಬೆಲೆಯು 3,160 ಡಾಲರ್​ಗೆ ಏರಿಕೆಯಾಗಿದೆ. ಹಣದುಬ್ಬರ ಏರಿಕೆ, ಜನರ ಸಂಬಳ, ಆದಾಯ ಏರಿಕೆಯಾದಂತೆ ಕೃಷಿ ಭೂಮಿಯ ಬೆಲೆಯು ಎರಡು ಪಟ್ಟು ಹೆಚ್ಚಾಗಿದೆ. ಆಮೆರಿಕಾದಲ್ಲೂ ಈಗ ಕೃಷಿ ಭೂಮಿ ದುಬಾರಿಯಾಗಿದೆ. ಶ್ರೀಮಂತರು, ಹಣವಂತರು ಮಾತ್ರ ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡುವುದು ಆಮೆರಿಕಾದಲ್ಲೂ ಕೂಡ ಉತ್ತಮವಾದ ಹೂಡಿಕೆಯಾಗಿದೆ ಎಂದು ಹೂಡಿಕೆ ತಜ್ಞರು ಹೇಳುತ್ತಿದ್ದಾರೆ.

ಬಿಲ್ ಗೇಟ್ಸ್, ಜೆಫ್ ಬೆಜೋಸ್​ರಂಥ ಉದ್ಯಮಿಗಳು ಲಾಭ, ಹೂಡಿಕೆಯ ವೃದ್ದಿ ಇರುವ ಕ್ಷೇತ್ರಗಳಲ್ಲಿ ಮಾತ್ರ ಹೂಡಿಕೆ ಮಾಡುವವರು. ಅಂಥವರು ಕೂಡ ಕೃಷಿ ಭೂಮಿಯ ಮೇಲೆ ಹೂಡಿಕೆ ಮಾಡಿದರೆ ಅಂದರೇ, ಖಂಡಿತ ಕೃಷಿ ಭೂಮಿಯ ಹೂಡಿಕೆಯಿಂದ ಬಾರಿ ಲಾಭ ಇದೆ ಎಂದರ್ಥ. ಭೂಮಿ ಸೀಮಿತ ಸಂಪನ್ಮೂಲ. ಭೂಮಿ ಇದ್ದಷ್ಟೇ ಇರುತ್ತೆ. ಆದರೇ, ಜನರು, ಉದ್ಯಮಿಗಳ ಸಂಪಾದನೆ ಹೆಚ್ಚಾಗುತ್ತೆ. ಹಾಗಾಗಿ ಕೃಷಿ ಭೂಮಿಗೆ ಬೇಡಿಕೆ ಹೆಚ್ಚಾಗಿ, ಬೆಲೆ ಹೆಚ್ಚಾಗುತ್ತೆ. ಇದು ಭಾರತಕ್ಕೂ ಅನ್ವಯಿಸುತ್ತೆ.
ಆಮೆರಿಕಾದಲ್ಲೂ ದಿನದಿಂದ ದಿನಕ್ಕೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ.

ಆಮೆರಿಕಾದಲ್ಲಿ ದಿನವೊಂದಕ್ಕೆ ಸರಾಸರಿ 2 ಸಾವಿರ ಎಕರೆ ಕೃಷಿ ಭೂಮಿ ಕಡಿಮೆಯಾಗುತ್ತಿರುವ ಅಂದಾಜಿದೆ. ಕೃಷಿ ಭೂಮಿಯು ನಗರೀಕರಣಕ್ಕೆ ಬಲಿಯಾಗುತ್ತಿದೆ. ಕೃಷಿ ಭೂಮಿ ಜಾಗದಲ್ಲಿ ವಸತಿ ಪ್ರದೇಶ, ನಗರಗಳು ತಲೆ ಎತ್ತುತ್ತಿವೆ.

‘ನೀವು ಕೃಷಿ ಭೂಮಿಯನ್ನು ಖರೀದಿಸಲು ಹೋಗಿ ಮತ್ತು ನೀವು ಆ ಹಣವನ್ನೇ ಬಾಡಿಗೆ ಬರುವ ಕಟ್ಟಡದ ಮೇಲೆ ಹೂಡಿಕೆ ಮಾಡಿ. ನಿಮ್ಮ ಬಂಡವಾಳದ ಮೇಲೆ ಸುಮಾರು ಶೇ 2.5ರಷ್ಟು ಲಾಭವನ್ನು ನೀವು ನೋಡಲಿದ್ದೀರಿ’ ಎಂದು ಪೀಪಲ್ಸ್ ಕಂಪನಿ ಅಧ್ಯಕ್ಷ ಸ್ಟೀವ್ ಬ್ರೂರೆ ಹೇಳುತ್ತಾರೆ.

ಆಮೆರಿಕಾದಲ್ಲಿ ನೂರು ಮಂದಿ ಶ್ರೀಮಂತರು ಬರೋಬ್ಬರಿ 42.1 ಮಿಲಿಯನ್ ಎಕರೆ ಕೃಷಿ ಭೂಮಿಯ ಮಾಲೀಕರಾಗಿದ್ದಾರೆ. ಪ್ಲೋರಿಡಾ ಮತ್ತು ಕನೆಕ್ಟಿಕಟ್ ರಾಜ್ಯಗಳ ವಿಸ್ತೀರ್ಣದಷ್ಟು ಭೂಮಿಗೆ ನೂರು ಮಂದಿ ಮಾಲೀಕರಾಗಿದ್ದಾರೆ. ಮಿಸಿಸಿಪ್ಪಿ ನದಿ ದಂಡೆಯಲ್ಲಿ ಹಾಗೂ ಪ್ಲೋರಿಡಾದಲ್ಲಿ ಕೃಷಿ ಭೂಮಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ಫಲವತ್ತಾದ ಕೃಷಿ ಭೂಮಿಗೆ ಬೇಡಿಕೆ ಇದೆ.