ನವದೆಹಲಿ, ಜುಲೈ 14: ಕಳೆದ ಎರಡು ವರ್ಷದಲ್ಲಿ 27 ಸಂಸ್ಥೆಗಳು ತಮ್ಮ ಪಿಎಫ್ ಎಕ್ಸೆಂಪ್ಷನ್ ಅನ್ನು ಬಿಟ್ಟುಕೊಟ್ಟಿವೆ. ಇದರೊಂದಿಗೆ ಆ ಸಂಸ್ಥೆಗಳ ಉದ್ಯೋಗಿಗಳ ಪಿಎಫ್ ಫಂಡ್ ನಿರ್ವಹಣೆ ಹೊಣೆ ಇಪಿಎಫ್ಒಗೆ ವರ್ಗಾವಣೆ ಆದಂತಾಗಿದೆ. ಈ ಕ್ರಮದಿಂದಾಗಿ ಈ 27 ಸಂಸ್ಥೆಗಳಲ್ಲಿನ 30,000 ಉದ್ಯೋಗಿಗಳ ಪಿಎಫ್ ಖಾತೆ ನಿರ್ವಹಣೆ, ಮತ್ತು ಆ ಖಾತೆಗಳಲ್ಲಿನ 1,688 ಕೋಟಿ ರೂ ಹಣವನ್ನು ಇಪಿಎಫ್ಒ ಸಂಸ್ಥೆಯೇ ನಿರ್ವಹಣೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಪಿಎಫ್ಒ ಸಂಸ್ಥೆಯ ಕಾರ್ಯನಿರ್ವಹಣೆಯ ವೈಖರಿ ಬದಲಾಗಿದ್ದು, ಹಣ ಕ್ಲೇಮ್ ಮಾಡುವ ಕ್ರಮ, ಸೆಟಲ್ಮೆಂಟ್ ಮಾಡಲಾಗುವ ಸಮಯ, ವಿವಿಧ ಸೇವೆಗಳಲ್ಲಿ ಸುಧಾರಣೆ ಇವೆಲ್ಲವೂ ಸಕಾರಾತ್ಮಕ ರೀತಿಯಲ್ಲಿ ಬದಲಾವಣೆ ಆಗಿದೆ. ಇದರಿಂದಾಗಿ, ಪಿಎಫ್ ಎಕ್ಸೆಂಪ್ಷನ್ ಇರುವ ಸಂಸ್ಥೆಗಳು ಒಂದೊಂದಾಗಿ ತಮ್ಮ ಜವಾಬ್ದಾರಿಯನ್ನು ಇಪಿಎಫ್ಒಗೆ ವರ್ಗಾಯಿಸುತ್ತಿವೆ.
ಇಪಿಎಫ್ ಯೋಜನೆ ಪ್ರಕಾರ ಒಂದು ಸಂಸ್ಥೆಯ ಉದ್ಯೋಗಿಗೆ ಪಿಎಫ್ ಖಾತೆ ತೆರೆಯಲಾಗುತ್ತದೆ. ಅದಕ್ಕೆ ಉದ್ಯೋಗಿಯ ಸಂಬಳದಿಂದ ಒಂದಷ್ಟು ಹಣವನ್ನು ಸೇರಿಸಲಾಗುತ್ತದೆ. ಕಂಪನಿಯೂ ಸಮಪಾಲು ಹಾಕುತ್ತದೆ. ಈ ಖಾತೆಯಲ್ಲಿ ಜಮೆಯಾಗುವ ಹಣವನ್ನು ಇಪಿಎಫ್ಒ ಸಂಸ್ಥೆ ಬಾಂಡ್ ಮಾರುಕಟ್ಟೆ ಇತ್ಯಾದಿ ಕಡೆ ಹೂಡಿಕೆ ಮಾಡುತ್ತದೆ. ಈ ಖಾತೆಯಲ್ಲಿರುವ ಹಣಕ್ಕೆ ನಿರ್ದಿಷ್ಟ ವಾರ್ಷಿಕ ಬಡ್ಡಿಹಣವನ್ನು ಇಪಿಎಫ್ಒ ಸೇರಿಸುತ್ತದೆ. ಆದರೆ, ಕೆಲ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಇಪಿಎಫ್ ಖಾತೆಯಲ್ಲಿರುವ ಹಣವನ್ನು ತಾವೇ ನಿರ್ವಹಣೆ ಮಾಡುವುದಾಗಿ ಹೇಳಿ ಇಪಿಎಫ್ಒದಿಂದ ಎಕ್ಸೆಂಪ್ಷನ್ಗೆ ಅನುಮತಿ ಪಡೆದಿರುತ್ತವೆ.
ಇದನ್ನೂ ಓದಿ: EPF: 2023-24ರ ಸಾಲಿನಲ್ಲಿ ಇಪಿಎಫ್ ಹಣಕ್ಕೆ ಶೇ. 8.25ರ ಬಡ್ಡಿ; ಹಣಕಾಸು ಸಚಿವಾಲಯದಿಂದ ಅನುಮೋದನೆ
2023ರ ಮಾರ್ಚ್ 31ರವರೆಗೆ ಪಿಎಫ್ ಎಕ್ಸೆಂಪ್ಷನ್ ಪಡೆದ ಸಂಸ್ಥೆಗಳ ಸಂಖ್ಯೆ 1,002 ಇದೆ. ಒಟ್ಟು 31,20,323 ಪಿಎಫ್ ಸದಸ್ಯರು ಇಲ್ಲಿದ್ದಾರೆ. ಒಟ್ಟಾರೆ ಇವರ ಖಾತೆಯಲ್ಲಿರುವ ಮತ್ತ 3.52 ಲಕ್ಷ ಕೋಟಿ ರೂ. ಈ ಒಂದು ಸಾವಿರ ಕಂಪನಿಗಳ ಪೈಕಿ 27 ಕಂಪನಿಗಳು ಕಳೆದ ಎರಡು ವರ್ಷದಲ್ಲಿ ತಮ್ಮ ಇಪಿಎಫ್ ಎಕ್ಸೆಂಪ್ಷನ್ ಸೌಲಭ್ಯವನ್ನು ಮರಳಿಸಿವೆ.
ಇಪಿಎಫ್ಒ ಬಳಿ ಒಟ್ಟಾರೆ ಇರುವ ಫಂಡ್ 2022-23ರ ಹಣಕಾಸು ವರ್ಷದಲ್ಲಿ 21.3 ಲಕ್ಷ ಕೋಟಿ ರೂ. ವರ್ಷದಿಂದ ವರ್ಷಕ್ಕೆ ಈ ಫಂಡ್ ಬೆಳೆಯುತ್ತಲೇ ಇದೆ. 2021-22ರಲ್ಲಿ 18.3 ಲಕ್ಷ ಕೋಟಿ ರೂ ಇತ್ತು. ಒಂದು ವರ್ಷದಲ್ಲಿ ಶೇ. 16.7ರಷ್ಟು ಫಂಡ್ ಗಾತ್ರ ಬೆಳೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ