ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ (EPF- Employee Provident Fund) ಅಥವಾ ಇಪಿಎಫ್ನ ಇ–ಪೋರ್ಟಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹಲವು ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಕೆಲ ದಿನಗಳಿಂದ ಇಪಿಎಫ್ನ ಪೋರ್ಟಲ್ ನಿಧಾನಗೊಂಡಿದೆ. epfindia.gov.in/site_en/For_Employees.php ಗೆ ಲಾಗಿನ್ ಆಗಲು ಕಷ್ಟವಾಗುತ್ತಿದೆ. ಇಪಿಎಫ್ಒ ವೆಬ್ಸೈಟ್ನಿಂದಾಗಲೀ ಉಮಂಗ್ ಆ್ಯಪ್ನಿಂದಾಲೀ ಇ–ಪಾಸ್ಬುಕ್ ಡೌನ್ಲೋಡ್ ಮಾಡಲು ಆಗುತ್ತಿಲ್ಲ ಎಂದು ಆನ್ಲೈನ್ನಲ್ಲಿ ದೂರುಗಳು ಹೆಚ್ಚಾಗಿವೆ. ನಾವು (ಟಿವಿ9 ಕನ್ನಡ) ಕೂಡ ಇಪಿಎಫ್ಒನ ಇ–ಪೋರ್ಟಲ್ಗೆ ಹೋಗಿ ಅಲ್ಲಿ ಮೆಂಬರ್ಸ್ ಪಾಸ್ಬುಕ್ಗೆ ಲಾಗಿನ್ ಆಗಲು ಕ್ಲಿಕ್ ಮಾಡಿದಾಗ ‘404 Not Found’ ಎಂಬ Error ಕಾಣಿಸಿತು. Know Your Claim Status ಲಿಂಕ್ ಕ್ಲಿಕ್ ಮಾಡಿದರೂ ಇದೇ ದೋಷದ ಮೆಸೇಜ್ ಬರುತ್ತದೆ. ಇಪಿಎಫ್ ಪೋರ್ಟಲ್ನ ಒನ್ ಎಂಪ್ಲಾಯೀ ಒನ್ ಇಪಿಎಫ್ ಅಕೌಂಟ್, ಪೆನ್ಷನರ್ಸ್ ಪೋರ್ಟಲ್ ಇತ್ಯಾದಿ ಸರ್ವಿಸ್ಗಳ ಲಿಂಕ್ಗಳು ಕಾರ್ಯನಿರ್ವಹಿಸುತ್ತಿದೆ.
ಬಹಳ ಮಂದಿ ಇಪಿಎಫ್ ಸಬ್ಸ್ಕ್ರೈಬರ್ಗಳು ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಈ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಟ್ವಿಟ್ಟರ್ನಲ್ಲಿ ಇಂಥ ಒಂದು ಪೋಸ್ಟ್ಗೆ ಇಪಿಎಫ್ಒ ಸಂಸ್ಥೆ ಪ್ರತಿಕ್ರಿಯಿಸಿದೆ:
‘ಸದಸ್ಯರೆ, ನಿಮಗಾಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ. ಸಂಬಂಧಿತ ತಂಡವು ಈ ವಿಚಾರವನ್ನು ಗಮನಿಸುತ್ತಿದೆ. ದಯವಿಟ್ಟು ಕೆಲ ಕಾಲ ಕಾಯಿರಿ. ಆದಷ್ಟೂ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಇಪಿಎಫ್ ಭರವಸೆ ಕೂಡ ನೀಡಿತು.
ಹಲವು ವಾರಗಳಿಂದಲೂ ಈ ಸಮಸ್ಯೆ ಇದೆ ಎಂದು ಮತ್ತೊಬ್ಬ ಸದಸ್ಯ ಟ್ವಿಟ್ಟರ್ನಲ್ಲಿ ಪ್ರಸ್ತಾಪಿಸಿ ಇಪಿಎಫ್ಒನ ಬೇಜಾಬ್ದಾರಿತನವನ್ನು ಪ್ರಶ್ನಿಸಿದ್ದಾರೆ.
ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಎಂಬುದು ಕೇಂದ್ರ ಸರ್ಕಾರದಿಂದ 1952ರಲ್ಲಿ ಆರಂಭವಾದ ಯೋಜನೆ. ಕೈಗಾರಿಕಾ ಕಾರ್ಮಿಕರ ಕ್ಷೇಮಾಭಿವೃದ್ಧಿಗೆಂದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಬಳಿಕ ಎಲ್ಲಾ ಉದ್ಯೋಗಿಗಳಿಗೂ ಈ ಸ್ಕೀಮ್ ವಿಸ್ತರಣೆ ಆಗಿದೆ. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ಸಂಸ್ಥೆ ಇಪಿಎಫ್ ಯೋಜನೆ ಅಳವಡಿಸಬೇಕು ಎಂಬ ಕಠಿಣ ನಿಯಮ ಜಾರಿಯಲ್ಲಿದೆ. ಕಡಿಮೆ ಉದ್ಯೋಗಿಗಳಿರುವ ಕಂಪನಿಗಳೂ ಬಯಸಿದರೆ ಈ ಸ್ಕೀಮ್ ಜಾರಿಗೆ ತರಬಹುದು.
ಇದನ್ನೂ ಓದಿ: EPF Withdrawal: ವೈದ್ಯಕೀಯ ತುರ್ತುಸ್ಥಿತಿ ಬಂದಾಗ ಪಿಎಫ್ ಹಣ ಉಪಯೋಗಿಸಬಹುದು: ಹೇಗೆ ಅದರ ವಿಧಾನ, ತಿಳಿಯಿರಿ
ಈ ಯೋಜನೆಯಲ್ಲಿ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಭಾಗವನ್ನು ಕಡಿತ ಮಾಡಿ ಆತನ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಜಮೆ ಮಾಡಲಾಗುತ್ತದೆ. ಈ ಹಣಕ್ಕೆ ಕಂಪನಿಯೂ ನಿರ್ದಿಷ್ಟ ಮೊತ್ತ ತುಂಬುತ್ತದೆ. ಈ ಇಪಿಎಫ್ ಖಾತೆಯ ಮೊತ್ತಕ್ಕೆ ಸರ್ಕಾರ ಪ್ರತೀ ವರ್ಷವೂ ನಿರ್ದಿಷ್ಟ ಬಡ್ಡಿ ತುಂಬುತ್ತದೆ. ಈಗಿರುವ ಸಾಮಾನ್ಯ ನಿಯಮದ ಪ್ರಕಾರ ಉದ್ಯೋಗಿಯ ಬೇಸಿಕ್ ಸ್ಯಾಲರಿಯ ಶೇ. 12ರಷ್ಟು ಭಾಗವನ್ನು ಇಪಿಎಫ್ ಖಾತೆ ಹಾಕಲಾಗುತ್ತದೆ. ಸರ್ಕಾರಿ ಉದ್ಯೋಗಿಯಾದರೆ ಮೂಲ ವೇತನದ ಜೊತೆಗೆ ಭತ್ಯೆಯೂ ಸೇರಿ ಒಟ್ಟೂ ಮೊತ್ತದ ಶೇ. 12 ಭಾಗವನ್ನು ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಈ ಮಧ್ಯೆ ಇತ್ತೀಚಿನ ಕೆಲ ವರ್ಷಗಳ ಹಿಂದೆ ಸರ್ಕಾರ ಎಂಪ್ಲಾಯೀ ಪೆನ್ಷನ್ ಸ್ಕೀಮ್ ಮಾಡಿದೆ. ಇದಕ್ಕೆ ಉದ್ಯೋಗಿ ಕೆಲಸ ಮಾಡುವ ಸಂಸ್ಥೆ ಈ ಇಪಿಎಸ್ ಖಾತೆಗೆ ಹಣ ತುಂಬಿಸಬೇಕು. ಉದ್ಯೋಗಿಯ ಮೂಲವೇತನದ ಶೇ. 12 ಭಾಗದ ಮೊತ್ತಕ್ಕೆ ಸಮನಾದ ಹಣವನ್ನು ಸಂಸ್ಥೆಯು ಇಪಿಎಫ್ ಮತ್ತು ಇಪಿಎಸ್ ಎರಡೂ ಖಾತೆಗೆ ಹಂಚಬೇಕು.
ಇಪಿಎಸ್ ಖಾತೆಯಲ್ಲಿರುವ ನಿಧಿಯು ಕಟ್ಟುನಿಟ್ಟಾಗಿ ಉದ್ಯೋಗಿಯ ಪಿಂಚಣಿಗೆಂದೇ ಇದೆ. ಇದನ್ನು ನಿವೃತ್ತಿಗೆ ಮುಂಚೆ ಯಾವುದೇ ಕಾರಣಕ್ಕೂ ಹಿಂಪಡೆಯಲು ಅಗುವುದಿಲ್ಲ. ಇಪಿಎಫ್ನಲ್ಲಿರುವ ನಿಧಿಯ ಮೂಲ ಉದ್ದೇಶವೂ ನಿವೃತ್ತಿ ನಂತರದ ಪಿಂಚಣಿಗೆಂದೇ ಇರುವುದು. ಆದರೆ, ನಿವೃತ್ತಿಗೆ ಮುಂಚೆ ಕೆಲವಾರು ತುರ್ತು ಕಾರಣ ಮತ್ತು ಸಂದರ್ಭಗಳಿಗೆ ಪಿಎಫ್ ಹಣ ಹಿಂಪಡೆಯುವ ಅವಕಾಶ ಇದೆ.
Published On - 10:46 am, Wed, 26 April 23