ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಕುಸಿದ ಬಳಿಕ ನಿರೀಕ್ಷೆಯಂತೆ ಅಲ್ಲಿ ಬ್ಯಾಂಕ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಜನರು ಬ್ಯಾಂಕುಗಳಿಂದ ತಮ್ಮ ಠೇವಣಿ ಹಣವನ್ನು ಹಿಂಪಡೆಯಲು ಮುಗಿಬೀಳುತ್ತಿದ್ದಾರೆ. ಬ್ಯಾಂಕುಗಳು ದಿವಾಳಿಯಾಗಬಹುದು ಎಂಬ ಭಯದ ಜೊತೆಗೆ ಬೇರೆ ಬೇರೆ ಕಾರಣಗಳಿಗೆ ಜನರು ಬ್ಯಾಂಕುಗಳಿಂದ ತಮ್ಮ ಹಣ ವಿತ್ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಅಮೆರಿಕದ ಬಹುತೇಕ ಎಲ್ಲಾ ಬ್ಯಾಂಕುಗಳೂ ಜರ್ಝರಿತವಾಗಿವೆ. ಇಲ್ಲಿಯ ಪ್ರಮುಖ ಬ್ಯಾಂಕುಗಳಲ್ಲೊಂದಾದ ಫಸ್ಟ್ ರಿಪಬ್ಲಿಕ್ ಬ್ಯಾಂಕಂತೂ (First Republic Bank) ಅಕ್ಷರಶಃ ನಲುಗಿ ಹೋಗಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್ನ ಷೇರುಗಳು ಶೇ. 40ರಷ್ಟು ಕುಸಿತ ಕಂಡಿವೆ. ಈ ಕುಸಿತಕ್ಕೆ ಕಾರಣವಾಗಿದ್ದು ಈ ಬ್ಯಾಂಕ್ನ ಠೇವಣಿ ನಷ್ಟ. ಈ ವರ್ಷದ ಮೊದಲ ಕ್ವಾರ್ಟರ್ನಲ್ಲಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್ನಿಂದ ಬಹಳಷ್ಟು ಜನರು ತಮ್ಮ ಠೇವಣಿಗಳನ್ನು ಹೊರತೆಗೆದಿದ್ದಾರೆ. ಬ್ಯಾಂಕ್ ನೀಡಿದ ಮಾಹಿತಿ ಪ್ರಕಾರ ಈ ಮೂರು ತಿಂಗಳಲ್ಲಿ 100 ಬಿಲಿಯನ್ ಡಾಲರ್ಗೂ (ಸುಮಾರು 8 ಲಕ್ಷ ಕೋಟಿ ರೂ) ಹೆಚ್ಚು ಮೊತ್ತದ ಠೇವಣಿಗಳು ಹೊರಹೋಗಿವೆಯಂತೆ. ಇದರಿಂದ ಬ್ಯಾಂಕಿಗೆ ನಗದು ಹಣದ ಬಿಕ್ಕಟ್ಟು ಉದ್ಭವಿಸಿದೆ.
ಫಸ್ಟ್ ರೀಪಬ್ಲಿಕ್ ಬ್ಯಾಂಕ್ನಿಂದ ಠೇವಣಿ ನಷ್ಟವಾದ ವರದಿ ಬಂದ ಬೆನ್ನಲ್ಲೇ ಷೇರುಪೇಟೆಯಲ್ಲಿ ಈ ಬ್ಯಾಂಕ್ ಮೇಲೆ ಹಣ ಹಾಕಿದ್ದ ಹೂಡಿಕೆದಾರರೂ ಆತಂಕಗೊಂಡಿದ್ದಾರೆ. ಇದರ ಪರಿಣಾಮವಾಗಿ ಷೇರು ಮೌಲ್ಯ ಶೇ. 40ರಷ್ಟು ಕಡಿಮೆ ಆಗಿದೆ. ಫಸ್ಟ್ ರಿಪಬ್ಲಿಕ್ ಬ್ಯಾಂಕ್ ದಿಢೀರ್ ಆಗಿ ಬಿಕ್ಕಟ್ಟು ಕಂಡಿದ್ದಲ್ಲ. ಎಸ್ವಿಬಿ ಸೇರಿದಂತೆ ಎರಡು ಅಮೆರಿಕನ್ ಬ್ಯಾಂಕುಗಳು ದಿವಾಳಿ ಆದ ಬಳಿಕ ಅಮೆರಿಕದ ಎಲ್ಲಾ ಬ್ಯಾಂಕುಗಳು ಬಿಕ್ಕಟ್ಟಿನ ಸ್ಥಿತಿಯಲ್ಲಿವೆ.
ಜನರು ಇರಿಸುವ ಠೇವಣಿ ಹಣವೇ ಬ್ಯಾಂಕುಗಳಿಗೆ ಜೀವಾಳ. ಈ ಹಣವನ್ನು ಇತರೆಡೆ ಹೂಡಿಕೆ ಮಾಡಿ ಅದರಿಂದ ಬ್ಯಾಂಕುಗಳು ಲಾಭ ಮಾಡಿಕೊಳ್ಳುತ್ತವೆ. ಆದರೆ, ಜನರು ದಿಢೀರ್ ಆಗಿ ತಮ್ಮ ಠೇವಣಿ ಹಣ ವಾಪಸ್ ಪಡೆಯಲು ಹೋದರೆ ಬ್ಯಾಂಕುಗಳು ತತ್ಕ್ಷಣಕ್ಕೆ ಎಲ್ಲಿಂದ ಹಣ ತರುತ್ತವೆ? ಆಗಲೇ ಬಿಕ್ಕಟ್ಟು ಉದ್ಭವಿಸುವುದು.
ಫಸ್ಟ್ ರಿಪಬ್ಲಿಕ್ ಬ್ಯಾಂಕ್ನಲ್ಲೂ ಇಂಥದ್ದೇ ಸ್ಥಿತಿ ಕಳೆದ ಮೂರ್ನಾಲ್ಕು ತಿಂಗಳಿಂದ ಇದೆ. ಕಳೆದ ತಿಂಗಳು ಅಮೆರಿಕದ ಹಣಕಾಸು ಸಚಿವೆ ಜನೆಟ್ ಯಲೆನ್, ಅಲ್ಲಿಯ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಜೆರೋಮ್ ಪೋವೆಲ್ ಕಾರ್ಯಪ್ರವೃತ್ತರಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕಿಗೆ 30 ಬಿಲಿಯನ್ ಡಾಲರ್ ನೆರವು ಒದಗಿಸುವ ಒಪ್ಪಂದ ಏರ್ಪಡಿಸಿದರು. ವಿಶ್ವದ ಪ್ರಮುಖ ಕ್ರೆಡಿಟ್ ಕಂಪನಿಗಳಾದ ಜೆಪಿ ಮಾರ್ಗನ್, ಗೋಲ್ಡ್ಮನ್ ಸ್ಯಾಕ್ಸ್, ಮಾರ್ಗನ್ ಸ್ಟಾನ್ಲೀ, ವೆಲ್ಸ್ ಫಾರ್ಗೋ, ಸಿಟಿಗ್ರೂಪ್ ಮೊದಲಾದವುಗಳ ಮುಖ್ಯಸ್ಥರು ಈ ಒಪ್ಪಂದಕ್ಕೆ ಕೈಜೋಡಿಸಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್ಗೆ ನೆರವಾಗಿದ್ದಾರೆ.
ಇದನ್ನೂ ಓದಿ: EPFO E-Passbook Website: ಇಪಿಎಫ್ನ ಪಾಸ್ಬುಕ್ ಸರ್ವಿಸ್ಗೆ ಲಾಗಿನ್ ಅಗಲು ತೊಡಕು, ಸದಸ್ಯರ ಅಳಲು
ಇದೇ ವೇಳೆ, ಫಸ್ಟ್ ರಿಪಬ್ಲಿಕ್ ಬ್ಯಾಂಕ್ ತನ್ನ ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ವಿವಿಧ ಹತಾಶೆಯ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ರೀತಿಯ ಅನಗತ್ಯ ಮತ್ತು ಐಷಾರಾಮಿ ವೆಚ್ಚಗಳನ್ನು ನಿಲ್ಲಿಸುವುದಾಗಿ ಹೇಳಿದೆ. ಅದು ಸರಿ, ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತನ್ನ ಸಂಸ್ಥೆಯ ಸಿಬ್ಬಂದಿವರ್ಗದ ಪೈಕಿ ಶೇ. 25ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವುದಾಗಿ ಹೇಳಿದೆ.