ಫೆಬ್ರುವರಿಯಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ; ಮಾರ್ಚ್​ನಲ್ಲೂ ಸೇಲ್ಸ್ ಹೆಚ್ಚುವ ನಿರೀಕ್ಷೆ

February 2026 vehicles retail sales in India rise by 25pc to 24 lakh: 2026ರ ಫೆಬ್ರುವರಿ ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ವಾಹನಗಳ ಸಂಖ್ಯೆ ಒಟ್ಟು 24 ಲಕ್ಷ ದಾಟಿದೆ. ಕಳೆದ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಶೇ. 25ರಷ್ಟು ಮಾರಾಟ ಹೆಚ್ಚಳ ಆಗಿದೆ. ಈ ವಾಹನಗಳ ಮಾರಾಟದಲ್ಲಿ ಟೂ ವ್ಹೀಲರ್​ಗಳದ್ದೇ ಸಿಂಹಪಾಲು. ಟ್ರ್ಯಾಕ್ಟರ್​ಗಳು, ಕಮರ್ಷಿಯಲ್ ವಾಹನಗಳ ಮಾರಾಟದಲ್ಲೂ ಭರ್ಜರಿ ಏರಿಕೆ ಆಗಿದೆ.

ಫೆಬ್ರುವರಿಯಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ; ಮಾರ್ಚ್​ನಲ್ಲೂ ಸೇಲ್ಸ್ ಹೆಚ್ಚುವ ನಿರೀಕ್ಷೆ
ಕಾರು

Updated on: Mar 05, 2026 | 2:55 PM

ನವದೆಹಲಿ, ಮಾರ್ಚ್ 5: ಫೆಬ್ರುವರಿ ತಿಂಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಪ್ಯಾಸೆಂಜರ್ ವಾಹನಗಳಿಗೆ ಬಹಳ ಬೇಡಿಕೆ ಬಂದಿತ್ತು. ಆಟೊಮೊಬೈಲ್ ಡೀಲರ್ ಅಸೋಷಿಯೇಶನ್​ಗಳ ಒಕ್ಕೂಟವಾದ ಫಾಡಾ (FADA) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಫೆಬ್ರುವರಿ ತಿಂಗಳಲ್ಲಿ ರೀಟೇಲ್ ಮಾರಾಟದಲ್ಲಿ 24.09 ಲಕ್ಷ ವಾಹನಗಳು ಸೇಲ್ ಆಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ರೀಟೇಲ್ ಮಾರಾಟ ಶೇ. 25.62ರಷ್ಟು ಹೆಚ್ಚಿದೆ.

ಫೆಬ್ರುವರಿಯಲ್ಲಿ ಮಾರಾಟವಾದ 24 ಲಕ್ಷ ಒಟ್ಟೂ ವಾಹನಗಳಲ್ಲಿ 17,00,505 ದ್ವಿಚಕ್ರ ವಾಹನಗಳಾಗಿವೆ. ನಗರ ಭಾಗದಲ್ಲಿ ವಾಹನ ಮಾರಾಟದಲ್ಲಿ ಶೇ 28.96ರಷ್ಟು ಹೆಚ್ಚಿದರೆ, ಗ್ರಾಮೀಣ ಭಾಗದಲ್ಲಿ ಅದು ಶೇ. 22.16ರಷ್ಟಿದೆ. ಒಂದು ಲಕ್ಷಕ್ಕೂ ಅಧಿಕ ಕಮರ್ಷಿಯಲ್ ವಾಹನಗಳು ಕಳೆದ ತಿಂಗಳು ಸೇಲ್ ಆಗಿವೆ.

ಫೆಬ್ರುವರಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಒಟ್ಟಾರೆ ಶೇ. 25.02ರಷ್ಟು ಹೆಚ್ಚಳ ಆಗಿದೆ. ತ್ರಿಚಕ್ರ ವಾಹನಗಳು ಶೇ. 24.39, ಪ್ರಯಾಣಿಕ ವಾಹನಗಳು ಶೇ. 26.12, ಕಮರ್ಷಿಯಲ್ ವಾಹನಗಳು ಶೇ. 28.89ರಷ್ಟು ಮಾರಾಟ ಹೆಚ್ಚಳ ಕಂಡಿವೆ. ಎಲ್ಲಾ ವರ್ಗದ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಂಡುಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಆಂಥ್ರೋಪಿಕ್​ನಿಂದ ಉಚಿತ ಎಐ ಕೋರ್ಸ್​ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?

ಟ್ರಾಕ್ಟರ್​ಗಳ ಮಾರಾಟದಲ್ಲಂತೂ ಗಣನೀಯ ಏರಿಕೆ ಆಗಿರುವುದು ಮತ್ತೊಂದು ಗಮನಾರ್ಹ ಅಂಶ. ಫಾಡಾ ರಿಸರ್ಚ್ ಡಾಟಾ ಪ್ರಕಾರ ಟ್ರಾಕ್ಟರ್​ಗಳ ಮಾರಾಟದಲ್ಲಿ ಶೇ. 36.35ರಷ್ಟು ಹೆಚ್ಚಳ ಆಗಿದೆ.

ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗಿನ ಮಾರಾಟ ದಾಖಲೆ

ಒಟ್ಟೂ ವಾಹನಗಳ ಮಾರಾಟ: 2,69,52,913 (ಶೇ. 12.13 ಹೆಚ್ಚಳ)

  • ದ್ವಿಚಕ್ರ ವಾಹನಗಳು: 1.95 ಕೋಟಿ (ಶೇ. 12 ಹೆಚ್ಚಳ)
  • ತ್ರಿಚಕ್ರ ವಾಹನಗಳು: 12.54 ಲಕ್ಷ (ಶೇ. 11.78 ಹೆಚ್ಚಳ)
  • ಕಮರ್ಷಿಯಲ್ ವಾಹನಗಳು: 9.58 ಲಕ್ಷ (ಶೇ. 11.34 ಹೆಚ್ಚಳ)
  • ಕಟ್ಟಡ ನಿರ್ಮಾಣ ವಾಹನಗಳು- ಸಿಇ: 64,176 (ಶೇ. 11 ಇಳಿಕೆ)
  • ಪ್ಯಾಸಂಜರ್ ವಾಹನಗಳು: 52.51 ಲಕ್ಷ (ಶೇ. 11.82 ಹೆಚ್ಚಳ)
  • ಟ್ರ್ಯಾಕ್ಟರ್​ಗಳು: 9.68 ಲಕ್ಷ (ಶೇ. 19.66 ಹೆಚ್ಚಳ)

ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?

ಮಾರ್ಚ್ ತಿಂಗಳಲ್ಲಿ ಮಾರಾಟ ಸುಗ್ಗಿ ನಿರೀಕ್ಷೆ

ದೇಶಾದ್ಯಂತ ಇರುವ ವಾಹನಗಳ ಡೀಲರ್​ಗಳು ಮಾರ್ಚ್ ತಿಂಗಳಲ್ಲಿ ಉತ್ತಮ ಮಾರಾಟದ ನಿರೀಕ್ಷೆಯಲ್ಲಿದ್ದಾರೆ ಎಂದು ಫಾಡಾ ರಿಸರ್ಚ್ ರಿಪೋರ್ಟ್​ನಲ್ಲಿ ಹೇಳಲಾಗಿದೆ. ಶೇ. 4.59ರಷ್ಟು ಡೀಲರ್ಸ್ ಮಾತ್ರ ಮಾರ್ಚ್​ನಲ್ಲಿ ಸೇಲ್ಸ್ ಕಡಿಮೆ ಆಗಬಹುದು ಎಂದು ಗ್ರಹಿಸಿದ್ದಾರೆ. ಉಳಿದವರು ಪಾಸಿಟಿವ್ ಆಗಿದ್ದಾರೆ ಎಂದು ಫಾಡಾ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us