ನವದೆಹಲಿ: ಅಮೆರಿಕ, ಬ್ರಿಟನ್ ಸೇರಿದಂತೆ 21 ದೇಶಗಳಿಂದ ಬರುವ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್ನಿಂದ (Angel Tax) ಭಾರತ ವಿನಾಯಿತಿ ನೀಡಿದೆ. ಈ ಸಂಬಂಧ ಮೇ 24ರಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಅಧಿಸೂಚನೆ ಹೊರಡಿಸಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದ ಭಾರತೀಯ ಕಂಪನಿಗಳಲ್ಲಿ ಬೇರೆ ದೇಶಗಳ ಸಂಸ್ಥೆಗಳು ಮಾಡುವ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಈಗ 21 ದೇಶಗಳ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್ ಅನ್ವಯ ಆಗುವುದಿಲ್ಲ. ಭಾರತಕ್ಕೆ ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಬರುವ ದೇಶಗಳೆನಿಸಿದ ಸಿಂಗಾಪುರ, ಐರ್ಲೆಂಡ್, ಮಾರಿಷಸ್ ಮೊದಲಾದವಕ್ಕೆ ಏಂಜೆಲ್ ಟ್ಯಾಕ್ಸ್ ವಿನಾಯಿತಿ ಪಟ್ಟಿಯಲ್ಲಿ ಸ್ಥಾನ ಇಲ್ಲದಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ.
ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2) (7ಬಿ) ವ್ಯಾಪ್ತಿಗೆ ಬರುತ್ತದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದ, ಅಂದರೆ ಸಂಪೂರ್ಣ ಖಾಸಗಿ ಒಡೆತನದಲ್ಲಿರುವ ಕಂಪನಿಯ ಷೇರುಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ದರಕ್ಕೆ ನೀಡಿದರೆ ಈ ತೆರಿಗೆ ವಿಧಿಸಲಾಗುತ್ತದೆ. ಈ ಹೆಚ್ಚುವರಿ ಮೊತ್ತದ ಮೇಲೆ ಶೇ. 30.9ರಷ್ಟು ಟ್ಯಾಕ್ಸ್ ಹಾಕಲಾಗುತ್ತದೆ. ಸ್ಟಾರ್ಟಪ್ಗಳೇ ಈ ತೆರಿಗೆ ಪಾವತಿಸಬೇಕು.
ಇದನ್ನೂ ಓದಿ: Rs 2,000 Bank Rules: ಎರಡು ಸಾವಿರ ರೂ ನೋಟು ಬದಲಾವಣೆಗೆ ಯಾವ್ಯಾವ ಬ್ಯಾಂಕಲ್ಲಿ ಹೇಗಿದೆ ನಿಯಮ?
ಇದನ್ನೂ ಓದಿ: US Indians: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ಎಷ್ಟು? 2 ತಿಂಗಳೊಳಗೆ ಬೇರೆ ಕೆಲಸ ಗಿಟ್ಟಿಸಿಕೊಳ್ಳದಿದ್ದರೆ ಗತಿ ಏನು?
2012ರಲ್ಲಿ ಭಾರತದಲ್ಲಿ ಏಂಜೆಲ್ ತೆರಿಗೆ ಜಾರಿಗೆ ಬಂದಿತ್ತು. ಈಗ 21 ದೇಶಗಳ ಹೂಡಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದರೆ ಈ ಮೇಲಿನ ದೇಶಗಳಿಂದ ಅನ್ಲಿಸ್ಟೆಡ್ ಸ್ಟಾರ್ಟಪ್ಗಳಿಗೆ ಬರುವ ಹೂಡಿಕೆಗಳಿಗೆ ಏಂಜೆಲ್ ತೆರಿಗೆ ಇರುವುದಿಲ್ಲ.
ಪಟ್ಟಿಯಲ್ಲಿ ಯುಎಇ, ಸಿಂಗಾಪುರ್, ನೆದರ್ಲೆಂಡ್ಸ್, ಮಾರಿಷಸ್ ಇತ್ಯಾದಿ ದೇಶಗಳು ಇಲ್ಲದಿರುವುದು ಅಚ್ಚರಿ ತಂದಿರುವುದು ಹೌದು. ಯಾಕೆಂದರೆ, ಭಾರತಕ್ಕೆ ಬರುವ ಒಟ್ಟು ಎಫ್ಡಿಐನಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಸಿಂಗಾಪುರ, ಮಾರಿಷಸ್ ಮತ್ತು ಯುಎಇಯಿಂದ ಬರುತ್ತದೆ. ಈ ದೇಶಗಳಿಂದ ಹೂಡಿಕೆ ಪಡೆಯುವ ಭಾರತೀಯ ಸ್ಟಾರ್ಟಪ್ಗಳಿಗೆ ಈಗ ಆತಂಕ ಶುರುವಾಗಿದೆ. ಈ ಸಂಬಂಧ ಅಧಿಕೃತ ಸ್ಪಷ್ಟೀಕರಣಕ್ಕಾಗಿ ಉದ್ಯಮ ವಲಯ ಕಾಯುತ್ತಿದೆ.