ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಏಪ್ರಿಲ್ 28ರ ವಾರದಲ್ಲಿ 4.532 ಬಿಲಿಯನ್ ಡಾಲರ್ನಷ್ಟು (ಸುಮಾರು 30,000 ಕೋಟಿ ರೂ) ಏರಿಕೆ ಆಗಿದೆ. ನಿನ್ನೆ ಶನಿವಾರ ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ಒಟ್ಟು ಫಾರೆಕ್ಸ್ ರಿಸರ್ವ್ಸ್ ಮೊತ್ತ 588.780 ಬಿಲಿಯನ್ ಡಾಲರ್ನಷ್ಟಿದೆ. ಅಂದರೆ 48.1 ಲಕ್ಷ ಕೋಟಿ ರುಪಾಯಿಯಷ್ಟು ಮೊತ್ತದ ಮೀಸಲು ನಿಧಿ ಭಾರತದ ಬಳಿ ಇದೆ. ಇದು ಕಳೆದ 10 ತಿಂಗಳಲ್ಲೇ ಗರಿಷ್ಠ ಫಾರೆಕ್ಸ್ ರಿಸರ್ವ್ಸ್ ಮೊತ್ತವಾಗಿದೆ.
ವಿದೇಶೀ ವಿನಿಮಯ ಮೀಸಲು ನಿಧಿಯಲ್ಲಿ ಅತ್ಯಂತ ಪ್ರಮುಖ ಭಾಗವಾಗಿರುವುದು ವಿದೇಶೀ ಕರೆನ್ಸಿ ಆಸ್ತಿ. ಇದು 4.996 ಬಿಲಿಯನ್ ಡಾಲರ್ನಷ್ಟು ಏರಿದೆ. ಈಗ ಈ ಆಸ್ತಿಯ ಮೊತ್ತ ಒಟ್ಟು 519.485 ಡಾಲರ್ ಆಗಿದೆ. ಅಂದರೆ ಸುಮಾರು 42.4 ಲಕ್ಷ ಕೋಟಿ ರೂನಷ್ಟು ವಿದೇಶೀ ಕರೆನ್ಸಿ ಆಸ್ತಿ ಸಂಗ್ರಹ ಇದೆ. ಆದರೆ, ಫಾರೆಕ್ಸ್ ರಿಸರ್ವ್ಸ್ನ ಮತ್ತೊಂದು ಭಾಗವಾಗಿರುವ ಗೋಲ್ಡ್ ರಿಸರ್ವ್ಸ್ ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ 494 ಮಿಲಿಯನ್ ಡಾಲರ್ನಷ್ಟು ಕುಸಿತ ಕಂಡಿರುವುದು ಆರ್ಬಿಐ ದತ್ತಾಂಶದಿಂದ ಗೊತ್ತಾಗುತ್ತದೆ. 494 ಮಿಲಿಯನ್ ಡಾಲರ್ ಎಂದರೆ ಸುಮಾರು 403 ಕೋಟಿ ರೂ. ಈಗ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್ನಲ್ಲಿರುವ ಚಿನ್ನದ ಮೀಸಲು 45.657 ಬಿಲಿಯನ್ ಡಾಲರ್ (ಸುಮಾರು 3.73 ಲಕ್ಷ ಕೋಟಿ ರೂ) ಮೊತ್ತಕ್ಕೆ ಇಳಿದಿದೆ.
ಇದನ್ನೂ ಓದಿ: EPFO: ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ 15,670 ರೂ. ಪಡೆಯುವುದು ಹೇಗೆ?
2021ರ ಅಕ್ಟೋಬರ್ ತಿಂಗಳ ಒಂದು ವಾರದಲ್ಲಿ ಭಾರತದ ವಿದೇಶ ವಿನಿಯಮ ಮೀಸಲು ನಿಧಿ 645 ಬಿಲಿಯನ್ ಡಾಲರ್ (ಸುಮಾರು 52.7 ಲಕ್ಷ ಕೋಟಿ ರೂ) ಮೊತ್ತಕ್ಕೆ ಏರಿತ್ತು. ಅದು ಭಾರತದ ಫಾರೆಕ್ಸ್ ಮಾರುಕಟ್ಟೆಯಲ್ಲಿ ಕಂಡ ಅತಿಹೆಚ್ಚು ಸಂಗ್ರಹ. ಅದಾದ ಬಳಿಕ ಮೀಸಲು ನಿಧಿ ಬಹುತೇಕ ನಿರಂತರವಾಗಿ ಕುಸಿಯುತ್ತಲೇ ಬಂದಿದೆ.
ಇದೇ ಏಪ್ರಿಲ್ 14ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 1.657 ಮಿಲಿಯನ್ ಡಾಲರ್ನಷ್ಟು ಏರಿತ್ತು. ಏಪ್ರಿಲ್ 21ರಂದು ಅಂತ್ಯಗೊಂಡ ವಾರದಲ್ಲಿ 2.16 ಬಿಲಿಯನ್ ಡಾಲರ್ಷ್ಟು ಇಳಿಕೆ ಕಂಡಿತ್ತು. ಅದರ ಮುಂದಿನ ವಾರದ, ಅಂದರೆ ಏಪ್ರಿಲ್ 28ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿದಿ 4.532 ಬಿಲಿಯನ್ ಡಾಲರ್ನಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ: China vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?
2021ರ ಅಕ್ಟೋಬರ್ನಲ್ಲಿ ಸಖತ್ ಫಾರೆಕ್ಸ್ ರಿಸರ್ವ್ಸ್ ಹೊಂದಿದ್ದ ಭಾರತ ಆ ಬಳಿಕ ನಿರಂತರವಾಗಿ ಇಳಿಕೆ ಕಾಣಲು ಕಾರಣವಾಗಿದ್ದು ಬಹುತೇಕ ಡಾಲರ್ ಎಫೆಕ್ಟ್. ಡಾಲರ್ ಎದುರು ರೂಪಾಯಿ ಮೌಲ್ಯ ತೀರಾ ಕುಸಿಯುವುದನ್ನು ನಿಯಂತ್ರಿಸಲು ಆರ್ಬಿಐ ಒಂದಷ್ಟು ಡಾಲರ್ಗಳನ್ನು ಮಾರುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಲ್ಲದಿದ್ದರೆ ಡಾಲರ್ ಎದುರು ರೂಪಾಯಿ ಮೌಲ್ಯ ಇಷ್ಟರಲ್ಲಾಗಲೇ 90 ರೂ ದಾಟಿ ಹೋಗುತ್ತಿತ್ತು. ಈ ಕಾರಣಕ್ಕೆ ಒಂದು ದೇಶಕ್ಕೆ ಫಾರೆಕ್ಸ್ ಮೀಸಲು ನಿಧಿ ಉತ್ತಮ ಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಇದು ಆರ್ಥಿಕ ಆಪತ್ಪಾಲಕ್ಕೆ ಸಹಾಯಕ್ಕೆ ಬರುತ್ತದೆ.