China vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?

Gold Jewellery Sale In India and China: 2023 ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಭಾರತದಲ್ಲಿ 78 ಟನ್​ನಷ್ಟು ಆಭರಣ ಚಿನ್ನ ಮಾರಾಟವಾಗಿದೆ. ಇದೇ ಅವಧಿಯಲ್ಲಿ ಚೀನಾದಲ್ಲಿ ಮಾರಾಟವಾದ ಚಿನ್ನಾಭರಣ ಮೊತ್ತ 198 ಟನ್ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ. ಚೀನಾದಲ್ಲಿ ಯಾಕಿಷ್ಟು ಮಾರಾಟ ಹೆಚ್ಚಾಗಿದೆ?

China vs India: ಇತ್ತ ಭಾರತದಲ್ಲಿ ಚಿನ್ನ ಮಾರಾಟ ಕಡಿಮೆ; ಅತ್ತ ಚೀನಾದಲ್ಲಿ ದಿಢೀರ್ ಗೋಲ್ಡ್ ಸೇಲ್ ಹೆಚ್ಚಿದ್ದು ಯಾಕೆ?
ಚಿನ್ನಾಭರಣ
Follow us
|

Updated on: May 05, 2023 | 7:09 PM

ವಿಶ್ವಾದ್ಯಂತ ಈಗ ಚಿನ್ನದ ಬೆಲೆ (Gold Rates) ಹೆಚ್ಚುತ್ತಿದೆ. ಭಾರತದಲ್ಲೂ ಗಮನಾರ್ಹ ರೀತಿಯಲ್ಲಿ ಬೆಲೆ ಏರಿಕೆ ಅಗುತ್ತಿದೆ. ಸಹಜವಾಗಿ ಚಿನ್ನಕ್ಕೆ ಬೇಡಿಕೆ ಇದ್ದಿರಲೇಬೇಕು. ಏಪ್ರಿಲ್ ತಿಂಗಳಲ್ಲಿ ತುಸು ಬೆಲೆ ಇಳಿಕೆ ಆಗಿದ್ದು ಬಿಟ್ಟರೆ ಭಾರತದಲ್ಲಿ ಚಿನ್ನದ ಬೆಲೆ ಸಾಮಾನ್ಯವಾಗಿ ಏರುಗತಿಯಲ್ಲಿತ್ತು. ಕುತೂಹಲ ಎಂದರೆ, ಈ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (2023 Q1) ಭಾರತದಲ್ಲಿ ಚಿನ್ನದ ಮಾರಾಟ ಬಹಳ ಕಡಿಮೆ ಆಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್​ನ (World Gold Council) ವರದಿಯೊಂದು ಹೇಳಿದೆ. ಮೊದಲ ಕ್ವಾರ್ಟರ್​ನಲ್ಲಿ ಭಾರತದಲ್ಲಿ 78 ಟನ್​ನಷ್ಟು ಮಾತ್ರ ಚಿನ್ನದ ಆಭರಣ ಮಾರಾಟವಾಗಿದೆ. 2020ರಿಂದೀಚೆ ಒಂದು ಕ್ವಾರ್ಟರ್​ನಲ್ಲಿ ಅತೀ ಕಡಿಮೆ ಚಿನ್ನಾಭರಣದ ಮಾರಾಟ ಇದು ಎನ್ನಲಾಗಿದೆ.

ಇದಕ್ಕೆ ಹೋಲಿಸಿದರೆ ಚೀನಾದಲ್ಲಿ ಚಿನ್ನದ ಒಡವೆಗಳು (22 ಕ್ಯಾರಟ್ ಗೋಲ್ಡ್) ಈ ಅವಧಿಯಲ್ಲಿ 198 ಟನ್​ನಷ್ಟು ಮಾರಾಟ ಕಂಡಿವೆಯಂತೆ. ಜಾಗತಿಕ ಆಭರಣ ಮಾರುಕಟ್ಟೆಯಲ್ಲಿ ಚೀನಾದ ಪಾಲು ಶೇ. 41ರಷ್ಟಿದೆ. 2015ರಿಂದೀಚೆ ಚೀನಾ ಕಂಡ ಅತಿಹೆಚ್ಚು ಚಿನ್ನಾಭರಣ ಮಾರಾಟ ಇದು ಎನಿಸಿದೆ.

2023 ಜನವರಿಯಿಂದ ಮಾರ್ಚ್​ವರೆಗೆ ಭಾರತೀಯರು ಚಿನ್ನಾಭರಣ ಖರೀದಿ ಕಡಿಮೆ ಮಾಡಿದ್ದು ಯಾಕೆ?

2022ರ ಮೊದಲ ಕ್ವಾರ್ಟರ್​ಗೆ ಹೋಲಿಸಿದರೆ ಈ ವರ್ಷದಲ್ಲಿ ಚಿನ್ನಾಭರಣಗಳ ಮಾರಾಟ ಭಾರತದಲ್ಲಿ ಶೇ. 17ರಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ಗಗನಕ್ಕೇರಿದ ಪರಿಣಾಮ ಇದು ಎಂದು ಹೇಳಲಾಗುತ್ತಿದೆ. 3 ತಿಂಗಳಲ್ಲಿ ಒಡವೆಗಳ ಮಾರಾಟವಾಗಿದ್ದು ಕೇವಲ 78 ಟನ್ ಮಾತ್ರ. ಕಳೆದ 12 ವರ್ಷದಲ್ಲಿ ಕೇವಲ ನಾಲ್ಕು ಬಾರಿ ಮಾತ್ರ 100 ಟನ್​ಗೂ ಕಡಿಮೆ ಚಿನ್ನಾಭರಣ ಭಾರತದಲ್ಲಿ ಮಾರಾಟ ಆಗಿರುವುದು.

ಇದನ್ನೂ ಓದಿ7th Pay Commission: ಸರ್ಕಾರಿ ನೌಕರರಿಗೆ ಸಿಹಿಕಹಿ ಸುದ್ದಿ; ಈ ಬಾರಿ ಡಿಎ ಹೆಚ್ಚಳ ನಿರೀಕ್ಷೆಗಿಂತ ಕಡಿಮೆಯಾ? ಎಷ್ಟಿರಲಿದೆ ತುಟ್ಟಿಭತ್ಯೆ?

ಚಿನ್ನಾಭರಣ ಮಾತ್ರವಲ್ಲ, ಹೂಡಿಕೆಗೆಂದು ಇರುವ ಚಿನ್ನದ ಗಟ್ಟಿ, ನಾಣ್ಯ ಇತ್ಯಾದಿಯ ಮಾರಾಟವೂ ಶೇ. 17ರಷ್ಟು ಕಡಿಮೆ ಆಗಿದೆ. ಈ ಅಪರಂಜಿ ಚಿನ್ನ 34.4 ಟನ್​ಗಳಷ್ಟು ಮಾರಾಟವಾಗಿದೆ ಎಂದು ವರದಿ ಹೇಳುತ್ತಿದೆ. ಈ ವರ್ಷದ ಇತರ ಅವಧಿಯಲ್ಲೂ ಚಿನ್ನದ ಮಾರಾಟ ಗಣನೀಯವಾಗಿ ಹೆಚ್ಚುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಚೀನಾದಲ್ಲಿ ಯಾಕೆ ಹೆಚ್ಚು ಜನರು ಚಿನ್ನ ಖರೀದಿಸುತ್ತಿದ್ದಾರೆ?

ಚೀನಾದಲ್ಲಿ 2023ರ ಮೊದಲ 3 ತಿಂಗಳು ಚಿನ್ನಾಭರಣಗಳ ಮಾರಾಟದಲ್ಲಿ ಭರ್ಜರಿ ಹೆಚ್ಚಳವಾಗಿದೆ. ಪಂಜರದಿಂದ ಗಿಳಿ ಆಚೆ ಬಂದಂತೆ ಕೋವಿಡ್ ನಿರ್ಬಂಧಗಳಿಂದ ತೆರವುಗೊಂಡು ಚೀನಾದ ಆರ್ಥಿಕತೆ ಗರಿಗೆದರಿದರ ಫಲ ಇದು. ಕೋವಿಡ್ ಲಾಕ್ ಡೌನ್ ಇತ್ಯಾದಿಯಿಂದ ರೋಸಿ ಹೋಗಿ ಕೊನೆಗೆ ಬಿಡುಗಡೆ ಆಗಿ ನಿರಾಳರಾಗಿರುವ ಚೀನಾದ ಜನತೆ ಚಿನ್ನಾಭರಣ ಕೊಂಡು ತೃಪ್ತರಾಗುತ್ತಿದ್ದಾರಂತೆ. ಆರ್ಥಿಕತೆ ಸುಧಾರಿಸುತ್ತಿರುವುದರಿಂದ ಜನರ ಕೈಯಲ್ಲೂ ಸಂಪಾದನೆ ಹೆಚ್ಚಾಗುತ್ತಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿRs 1 Crore: ಎಸ್​ಐಪಿ ಸ್ಕೀಮ್​ನಲ್ಲಿ 1 ಕೋಟಿ ಗಳಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಪಟ್ಟಿ

ಭಾರತದಂತೆ ಚೀನಾದಲ್ಲೂ ಸಾಂಪ್ರದಾಯಿಕವಾಗಿ ಚಿನ್ನಾಭರಣಕ್ಕೆ ಪ್ರಾಶಸ್ತ್ಯ ಇದೆ. ಅಲ್ಲಿಯ ಮದುವೆ ಸಮಾರಂಭಗಳಲ್ಲಿ ಮಹಿಳೆಯರಿಗೆ ಚಿನ್ನಾಭರಣ ಧರಿಸುವುದು ಪ್ರತಿಷ್ಠೆಯ ವಿಷಯ. ಹೀಗಾಗಿ, ಭಾರತೀಯರ ರೀತಿಯಲ್ಲೇ ಚೀನಾದಲ್ಲೂ ಜನರು ಸಾಮಾಜಿಕ ಘನತೆ ಮತ್ತು ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಾರೆ. 2023ರ ಮೊದಲ ಕ್ವಾರ್ಟರ್​ನಲ್ಲಿ ಚೀನಾದ ಆರ್ಥಿಕತೆ ಬೆಳೆದಿರುವ ಹಿನ್ನೆಲೆಯಲ್ಲಿ ಅಲ್ಲಿ ಜನರು ಚಿನ್ನ ಖರೀದಿಗೆ ಉತ್ಸುಕತೆ ತೋರುತ್ತಿರುವುದು ಮೇಲ್ನೋಟಕ್ಕೆ ತೋರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ