EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ

|

Updated on: May 07, 2023 | 1:46 PM

What Happens If EPF Account Not Transferred?: ಉದ್ಯೋಗಿ ನಿವೃತ್ತಿ ಬಳಿಕ ಬಡ್ಡಿ ಎಲ್ಲಾ ಸೇರಿ ಅಷ್ಟೂ ಪಿಎಫ್ ಹಣ ಒಟ್ಟಾಗಿ ಸಿಗುತ್ತದೆ. ಇದು ಸುಲಲಿತವಾಗಿ ಆಗಬೇಕೆಂದರೆ ಉದ್ಯೋಗಿ ತಾನು ಕೆಲಸ ಮಾಡಿದ ಹಿಂದಿನ ಎಲ್ಲಾ ಕಂಪನಿಗಳ ಪಿಎಫ್ ಖಾತೆಗಳನ್ನು ಸಕಾಲಕ್ಕೆ ವಿಲೀನಗೊಳಿಸಿರಬೇಕು.

EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ
ಇಪಿಎಫ್
Follow us on

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ (EPF- Employee Provident Fund) ಸರ್ಕಾರ ರೂಪಿಸಿರುವ ಒಂದು ಪ್ರಮುಖ ಪಿಂಚಣಿ ಯೋಜನೆಯಾಗಿದೆ. ಉದ್ಯೋಗಿಗಳ ನಿವೃತ್ತಿ ನಂತರ ಜೀವನಭದ್ರತೆಗಾಗಿ ಈ ಯೋಜನೆ ಇದೆ. ಮೊದಲಿಗೆ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಭವಿಷ್ಯ ಭದ್ರತೆಗಾಗಿ ಆರಂಭಿಸಲಾದ ಈ ಸ್ಕೀಮ್ ಅನ್ನು ಇದೀಗ ಖಾಸಗಿ ವಲಯವೂ ಸೇರಿ ಬಹುತೇಕ ಎಲ್ಲಾ ಸಂಘಟಿತ ವಲಯದ ಸಂಸ್ಥೆಗಳ ಉದ್ಯೋಗಿಗಳಿಗೂ ವಿಸ್ತರಿಸಲಾಗಿದೆ. 20ಕ್ಕೂ ಹೆಚ್ಚು ನಿಯಮಿತ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಇಪಿಎಫ್ ಯೋಜನೆಯನ್ನು ಅಳವಡಿಸುವುದು ಕಡ್ಡಾಯ. ಕಡಿಮೆ ಉದ್ಯೋಗಿಗಳಿರುವ ಕಂಪನಿಗಳೂ ಇಪಿಎಫ್ ಅಳವಡಿಸಿಕೊಳ್ಳಲು ಅಡ್ಡಿ ಇಲ್ಲ. ಉದ್ಯೋಗಿಯ ಹೆಸರಲ್ಲಿ ಪಿಎಫ್ ಖಾತೆ ಸೃಷ್ಟಿಯಾಗಿ, ಆತ ನಿವೃತ್ತಿ ಆಗುವವರೆಗೂ ಈ ಖಾತೆಗೆ ಹಣ ಜಮೆ ಆಗುತ್ತಿರುತ್ತದೆ. ನಿವೃತ್ತಿ ನಂತರ ಈ ಹಣವನ್ನು ಉದ್ಯೋಗಿಗೆ ಪಿಂಚಣಿಯಾಗಿಯೋ ಅಥವಾ ಒಟ್ಟಿಗೆ ಲಂಪ್ಸಮ್ ಆಗಿಯೋ ಹಣ ನೀಡಲಾಗುತ್ತದೆ.

ಉದ್ಯೋಗಿಯ ಮೂಲವೇತನದ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಅದನ್ನು ಪಿಎಫ್ ಖಾತೆಗೆ ಪ್ರತೀ ತಿಂಗಳು ಹಾಕಲಾಗುತ್ತದೆ. ಕಂಪನಿ (Employer) ಕೂಡ ಇಷ್ಟೇ ಮೊತ್ತದ ಹಣವನ್ನು ಎಪಿಎಫ್ ಖಾತೆಗೆ ಮತ್ತು ಇಪಿಎಸ್ ಖಾತೆಗೆ ಹಂಚುತ್ತದೆ. ಉದ್ಯೋಗಿಯ ಇಪಿಎಸ್ ಖಾತೆಗೆ ಸರ್ಕಾರ ಕೂಡ ಹಣ ಸೇರಿಸುತ್ತದೆ. ಇಪಿಎಫ್ ಮತ್ತು ಇಪಿಎಸ್ ಖಾತೆಗಳಲ್ಲಿರುವ ಹಣಕ್ಕೆ ಸರ್ಕಾರ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ಸೇರಿಸುತ್ತದೆ. ಈ ಬಡ್ಡಿ ಹಣಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಈ ಬಡ್ಡಿ ಹಣವನ್ನು ಯಾವುದೇ ದಂಡ ಇಲ್ಲದೇ ಹಿಂಪಡೆಯಬಹುದು.

ಇದನ್ನೂ ಓದಿEPFO: ನಿವೃತ್ತಿಯ ನಂತರ ಮಾಸಿಕ ಪಿಂಚಣಿಯಾಗಿ 15,670 ರೂ. ಪಡೆಯುವುದು ಹೇಗೆ?

ಪಿಎಫ್ ಖಾತೆಗಳನ್ನು ಟ್ರಾನ್ಸ್​ಫರ್ ಮಾಡಿರಬೇಕು

ಉದ್ಯೋಗಿ ನಿವೃತ್ತಿ ಬಳಿಕ ಬಡ್ಡಿ ಎಲ್ಲಾ ಸೇರಿ ಅಷ್ಟೂ ಪಿಎಫ್ ಹಣ ಒಟ್ಟಾಗಿ ಸಿಗುತ್ತದೆ. ಇದು ಸುಲಲಿತವಾಗಿ ಆಗಬೇಕೆಂದರೆ ಉದ್ಯೋಗಿ ತಾನು ಕೆಲಸ ಮಾಡಿದ ಹಿಂದಿನ ಎಲ್ಲಾ ಕಂಪನಿಗಳ ಪಿಎಫ್ ಖಾತೆಗಳನ್ನು ಸಕಾಲಕ್ಕೆ ವಿಲೀನಗೊಳಿಸಿರಬೇಕು. ಉದಾಹರಣೆಗೆ, ನೀವು ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ಹಿಂದಿನ ಕಂಪನಿಯಲ್ಲಿದ್ದ ಪಿಎಫ್ ಖಾತೆಯನ್ನು ಹೊಸ ಕಂಪನಿಯ ಪಿಎಫ್ ಖಾತೆಗೆ ಟ್ರಾನ್ಸ್​ಫರ್ ಮಾಡಬೇಕು. ಹೀಗಾದಲ್ಲಿ ಇಪಿಎಫ್​ನ ಅಷ್ಟೂ ಹಣ ಒಂದೇ ಖಾತೆಗೆ ಸೇರುತ್ತದೆ.

ಇಪಿಎಫ್ ಖಾತೆಗಳ ವರ್ಗಾವಣೆ ಆಗದಿದ್ದರೆ ಏನಾಗುತ್ತದೆ?

ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸರ್ಕಾರ ಬಡ್ಡಿ ಸೇರಿಸುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಆದರೆ, ನೀವು ಹೊಸ ಕಂಪನಿ ಬದಲಿಸಿದಾಗ ಹಳೆಯ ಕಂಪನಿಯ ಇಪಿಎಫ್ ಖಾತೆಯನ್ನು ಟ್ರಾನ್ಸ್​ಫರ್ ಮಾಡದೇ ಹೋದರೆ ಹಳೆಯ ಖಾತೆಗೆ ಹಾಕಲಾಗುವ ಬಡ್ಡಿ ಹಣಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿPMEGP; ಸ್ವಂತ ಉದ್ಯೋಗದ ಕನಸು ಸಾಕಾರಗೊಳಿಸಲು 50 ಲಕ್ಷ ರೂವರೆಗೂ ಸಹಾಯಧನ; ಪಿಎಂಇಜಿಪಿ ಸಬ್ಸಿಡಿ, ಬಡ್ಡಿ ದರ ಇತ್ಯಾದಿ ವಿವರ ತಿಳಿದಿರಿ

ಕೆಲಸ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸುವುದು ಹೇಗೆ?

  1. ಇಪಿಎಫ್​ನ ಅಧಿಕೃತ ಪೋರ್ಟಲ್ unifiedportal-mem.epfindia.gov.in/memberinterface/ ಇಲ್ಲಿಗೆ ಹೋಗಿ ನಿಮ್ಮ ಯುಎಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ.
  2. ‘ಆನ್​ಲೈನ್ ಸರ್ವಿಸಸ್’ ಸೆಕ್ಷನ್ ಅಡಿಯಲ್ಲಿ ‘ಒನ್ ಮೆಂಬರ್ ಒನ್ ಇಪಿಎಫ್ ಅಕೌಂಟ್’ ಮೇಲೆ ಕ್ಲಿಕ್ ಮಾಡಿ.
  3. ಇಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಪಿಎಫ್ ಖಾತೆ ವಿವರವನ್ನು ಪರಿಶೀಲಿಸಿ
  4. ಹಿಂದಿನ ಉದ್ಯೋಗದ ಪಿಎಫ್ ಖಾತೆಯ ವಿವರ ನೋಡಲು ‘ಗೆಟ್ ಡೀಟೇಲ್ಸ್’ ಕ್ಲಿಕ್ ಮಾಡಿ.
  5. ಕ್ಲೈಮ್ ಫಾರ್ಮ್ ಅಟೆಸ್ಟ್ ಮಾಡಲು ಹಿಂದಿನ ಕಂಪನಿ ಅಥವಾ ಈಗಿನ ಕಂಪನಿಯನ್ನು ಆಯ್ದುಕೊಳ್ಳಿ. ನಿಮ್ಮ ಮೆಂಬರ್ ಐಡಿ ಅಥವಾ ಯುಎಎನ್ ನಂಬರ್ ವಿವರ ತುಂಬಿರಿ.
  6. ಮೊಬೈಲ್ ನಂಬರ್​ಗೆ ಓಟಿಪಿ ಪಡೆದು ತುಂಬಿಸಿ. ಬಳಿಕ ಸಬ್ಮಿಟ್ ಕೊಟ್ಟು ನಿಮ್ಮ ಗುರುತನ್ನು ದೃಢೀಕರಿಸಿ.

ಈಗ ಪಿಎಫ್ ಟ್ರಾನ್ಸ್​ಫರ್​ಗೆ ಮನವಿ ಮಾಡುವ ಆನ್​ಲೈನ್ ಅರ್ಜಿ ತಯಾರಾಗಿರುತ್ತದೆ. ಅದನ್ನು ಸೆಲ್ಫ್ ಅಟೆಸ್ಟ್ ಮಾಡಿ ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ನಿಮ್ಮ ಆಯ್ದ ಕಂಪನಿಗೆ ಸಲ್ಲಿಸಬೇಕು. ಇಪಿಎಫ್ ಟ್ರಾನ್ಸ್​ಫರ್​ಗೆ ನೀವು ಮಾಡಿರುವ ಮನವಿಯ ನೋಟಿಫಿಕೇಶನ್ ಆನ್​ಲೈನ್ ಮೂಲಕ ಕಂಪನಿಗೆ ಅಲರ್ಟ್ ಹೋಗುತ್ತದೆ.

ಈ ಪಿಎಫ್ ಟ್ರಾನ್ಸ್​ಫರ್ ಮನವಿಗೆ ಕಂಪನಿ ಅನುಮೋದನೆ ಕೊಟ್ಟರೆ ಹಳೆಯ ಪಿಎಫ್ ಖಾತೆಯ ಹಣವು ಈಗ ಕೆಲಸ ಮಾಡು ಕಂಪನಿಯಲ್ಲಿನ ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗುತ್ತದೆ.

ಇಲ್ಲಿ ಕೆಲ ಸಂದರ್ಭದಲ್ಲಿ ಆನ್​ಲೈನ್​ನಲ್ಲಿ ಟ್ರಾನ್ಸ್​ಫರ್ ಸಾಧ್ಯವಾಗದೇ ಹೋದಲ್ಲಿ, ಪಿಎಫ್ ಟ್ರಾನ್ಸ್​ಫರ್ ಕ್ಲೈಮ್ ಫಾರ್ಮ್ (ಅರ್ಜಿ 13) ಅನ್ನು ಡೌನ್​ಲೋಡ್ ಮಾಡಿ ಅದನ್ನು ತುಂಬಿಸಿ ಕಂಪನಿಗೆ ಸಲ್ಲಿಸಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ