ಯುದ್ಧ ನಿಲ್ಲಿಸಲು ಇರಾನ್ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ
Effects on Indian economy by Iran war: ಯುದ್ಧ ನಿಲ್ಲಿಸಲು ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಇರಾನ್ ಮೂರು ಷರತ್ತುಗಳನ್ನು ಹಾಕಿದೆ. ತತ್ಕ್ಷಣವೇ ಯುದ್ಧ ನಿಲ್ಲಿಸಬೇಕು. ಭವಿಷ್ಯದಲ್ಲಿ ಮತ್ತೆಂದೂ ಯುದ್ಧ ಮಾಡಬಾರದೆಂದು ಖಾತ್ರಿ ಕೊಡಬೇಕು. ಈಗ ಆಗಿರುವ ನಷ್ಟ ಭರಿಸಿಕೊಡಬೇಕು ಎಂಬುದು ಆ ಷರತ್ತುಗಳು. ಇದೇ ವೇಳೆ, ಯುದ್ಧ ನಿಂತರೆ, ಅಥವಾ ಮುಂದುವರಿದರೆ ಭಾರತದ ಆರ್ಥಿಕತೆ ಮೇಲೇನು ಪರಿಣಾಮವಾಗಬಹುದು? ಇಲ್ಲಿದೆ ಸಾಧ್ಯಾಸಾಧ್ಯತೆ...

ನವದೆಹಲಿ, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ (West Asia crisis) ನಡೆಯುತ್ತಿರುವ ಯುದ್ಧ ನಿರೀಕ್ಷೆಮೀರಿ ಮುಂದುವರಿಯುತ್ತಿದೆ. ಇಸ್ರೇಲ್, ಅಮೆರಿಕದ ಜಂಟಿ ದಾಳಿಗಳಿಗೆ ಇರಾನ್ ಪ್ರತಿರೋಧ ಮುಂದುವರಿದಿದೆ. ಪ್ರತಿರೋಧ ಮಾತ್ರವಲ್ಲ, ಇರಾನ್ನಿಂದ ಮಾರಕವಾದ ಪ್ರತಿದಾಳಿಗಳೂ ಆಗುತ್ತಿವೆ. ಜಾಗತಿಕ ತೈಲ ಮಾರುಕಟ್ಟೆ ಭಾರೀ ವ್ಯತ್ಯಯ ಕಾಣುತ್ತಿದೆ. ಇಡೀ ಜಗತ್ತಿಗೆ ಮಾರಕವಾದ ಈ ಯುದ್ಧವನ್ನು ಆರಂಭಿಸಿದಷ್ಟು ಸುಲಭವಾಗಿ ನಿಲ್ಲಿಸಲು ಆಗುತ್ತಿಲ್ಲ. ಇರಾನ್ ಈ ಯುದ್ಧ ನಿಲ್ಲಿಸುವ ಅವಕಾಶಕ್ಕೆ ಸಿದ್ಧ ಇದೆ. ಆದರೆ, ಮೂರು ಷರತ್ತುಗಳನ್ನು ಹಾಕಿದೆ. ಈ ಷರತ್ತುಗಳು ಹೀಗಿವೆ:
- ಅಮೆರಿಕ ಮತ್ತು ಇಸ್ರೇಲ್ನಿಂದ ತತ್ಕ್ಷಣವೇ ಎಲ್ಲಾ ಮಿಲಿಟರಿ ದಾಳಿಗಳು ನಿಲ್ಲಬೇಕು. ಪೂರ್ಣ ನಿಂತ ಬಳಿಕವಷ್ಟೇ ಸಂಧಾನ ಅಥವಾ ಮಾತುಕತೆ ಸಾಧ್ಯ ಎಂದಿದೆ ಇರಾನ್.
- ಕದನ ವಿರಾಮ ತಾತ್ಕಾಲಿಕ ಆಗಿರಕೂಡದು. ಭವಿಷ್ಯದಲ್ಲಿ ಇಂಥ ದಾಳಿಗಳನ್ನು ಮಾಡುವುದಿಲ್ಲ ಎಂದು ಗ್ಯಾರಂಟಿ ಕೊಡಬೇಕು ಎಂದು ಇರಾನ್ ಹಾಕಿರುವ ಮತ್ತೊಂದು ಷರತ್ತು.
- ತನ್ನ ಸಾರ್ವಭೌಮ ಹಕ್ಕುಗಳನ್ನು ಮಾನ್ಯ ಮಾಡಬೇಕು. ಈ ಸಂಘರ್ಷದಲ್ಲಿ ತನಗೆ ಆಗಿರುವ ಹಾನಿಗಳಿಗೆ ಪರಿಹಾರ ಕೊಡಬೇಕು ಎಂದು ಇರಾನ್ ಒತ್ತಾಯಿಸಿದೆ.
ಇದನ್ನೂ ಓದಿ: ಎಲ್‌ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ
ಮಧ್ಯಪ್ರಾಚ್ಯ ಯುದ್ಧದಿಂದ ಭಾರತದ ಮೇಲೇನು ಪರಿಣಾಮ?
ಅತಿಹೆಚ್ಚು ತೈಲ ಮತ್ತು ಅನಿಲ ಬಳಸುವ ದೇಶಗಳಲ್ಲಿ ಭಾರತವೂ ಒಂದು. ಹೆಚ್ಚಿನವನ್ನು ಭಾರತ ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ತೈಲ ಬಿಕ್ಕಟ್ಟು ಶುರುವಾದರೆ ಭಾರತದ ಆರ್ಥಿಕತೆಯ ಮೇಲೆ ನಾನಾ ಪರಿಣಾಮಗಳಾಗುತ್ತವೆ. ಕೆಲ ಸಂಭಾವ್ಯ ಪರಿಣಾಮಗಳಿವು…
ಯುದ್ಧ ಬೇಗ ಮುಗಿದರೆ ಭಾರತಕ್ಕೆ ಅನುಕೂಲ
ಅಕಸ್ಮಾತ್ ಯುದ್ಧ ಬಹಳ ಬೇಗ ಮುಗಿದುಹೋದಲ್ಲಿ ತೈಲ ಬೆಲೆ ಬ್ಯಾರಲ್ಗೆ 100 ಡಾಲರ್ಗೂ ಹೆಚ್ಚು ಇದ್ದದ್ದು 70 ಡಾಲರ್ನೊಳಗೆ ಬರಬಹುದು. ಭಾರತದ ಆರ್ಥಿಕತೆ ಮೇಲಿನ ನಕಾರಾತ್ಮಕ ಪರಿಣಾಮ ಬಹಳ ಕಡಿಮೆ ಇರುತ್ತದೆ. ತಾತ್ಕಾಲಿಕ ಹಿನ್ನಡೆ ನಂತರ ಆರ್ಥಿಕತೆಯ ವೇಗ ಯಥಾಸ್ಥಿತಿಗೆ ಮರಳಬಹುದು.
ಯುದ್ಧ ದೀರ್ಘಕಾಲ ಮುಂದುವರಿದಿದರೆ?
ಯುದ್ಧ ದೀರ್ಘಕಾಲ ಮುಂದುವರಿದರೆ ತೈಲ ಬೆಲೆ ಅಧಿಕ ಮಟ್ಟದಲ್ಲೇ ಇರುತ್ತದೆ. ಪೆಟ್ರೋಲ್, ಡೀಸಲ್, ಎಲ್‌ಪಿಜಿ ಇತ್ಯಾದಿ ಬೆಲೆಗಳೆಲ್ಲವೂ ಹೆಚ್ಚಳವಾಗುತ್ತಲೇ ಹೋಗುತ್ತದೆ. ಇದರಿಂದ ಬಹುತೇಕ ಎಲ್ಲಾ ಸರಕುಗಳ ಬೆಲೆ ಸಹಜವಾಗಿ ಏರಿಕೆ ಆಗುತ್ತದೆ. ತೈಲ ಬೆಲೆಯ ಪ್ರತೀ ಶೇ. 10 ಏರಿಕೆಯಿಂದ ಜಿಡಿಪಿ ಬೆಳವಣಿಗೆಯ ವೇಗ ಶೇ. 0.25ರಷ್ಟು ಕುಂಠಿತಗೊಳ್ಳಬಹುದು ಎನ್ನುತ್ತಾರೆ ಅರ್ಥತಜ್ಞರು.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ
ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಟ್ಟರೆ?
ಯುದ್ಧ ಮುಂದುವರಿಯುವುದರ ಜೊತೆಗೆ ಹಾರ್ಮುಜ್ ಜಲಸಂಧಿ ಪೂರ್ಣ ಬಂದ್ ಆಗಿಬಿಡುವ ಸಾಧ್ಯತೆ ಇಲ್ಲದಿಲ್ಲ. ವಿಶ್ವದ ಹೆಚ್ಚಿನ ತೈಲ ಮತ್ತು ಅನಿಲ ಸರಬರಾಜು ಈ ಮಾರ್ಗದಲ್ಲೇ ಸಾಗುವುದು. ಭಾರತ ಸೇರಿ ಹಲವು ರಾಷ್ಟ್ರಗಳಿಂದ ವಿವಿಧ ಸರಕುಗಳು ಗಲ್ಫ್ ದೇಶಗಳಿಗೆ ರಫ್ತಾಗಲು ಈ ಮಾರ್ಗ ಮುಖ್ಯ. ಈ ಜಲಸಂಧಿ ಬಂದ್ ಆಗಿ ಹೋದರೆ ಹಲವಾರು ರಾಷ್ಟ್ರಗಳಿಗೆ ಬಹಳ ಹಿನ್ನಡೆಯಾಗಬಹುದು. ಭಾರತದ ಮೇಲೆ ಬಹಳ ದೊಡ್ಡ ಪರಿನಾಮ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
