Anil Ambani vs EPFO: ಇಪಿಎಫ್‌ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು
CBI books case against Anil Ambani for allegedly causing loss to EPFO: ಇಪಿಎಫ್‌ಒ ಸಂಸ್ಥೆಗೆ 1,816 ಕೋಟಿ ರೂ ನಷ್ಟ ತಂದ ಆರೋಪ ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆ ಮೇಲಿದೆ. ಇಪಿಎಫ್‌ಒ ನೀಡಿದ ದೂರಿನ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ರಿಲಯನ್ಸ್ ಕ್ಯಾಪಿಟಲ್ ಹೊರಡಿಸಿದ ಡಿಬಂಚರ್ಗಳ (ಎನ್ಸಿಡಿ) ಮೇಲೆ ಇಪಿಎಫ್‌ಒ ಹೂಡಿಕೆ ಮಾಡಿ ಈ ನಷ್ಟ ಕಂಡಿದ್ದು ತಿಳಿದುಬಂದಿದೆ.

ನವದೆಹಲಿ, ಆಗಸ್ಟ್ 2: ಕೇಂದ್ರ ತನಿಖಾ ದಳವಾದ ಸಿಬಿಐ (CBI) ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (RCL) ಮತ್ತು ಅದರ ಮಾಜಿ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) ₹1,816.22 ಕೋಟಿ ನಷ್ಟ ಉಂಟುಮಾಡಿದ ಆರೋಪದ ಮೇರೆಗೆ ಎಫ್‌ಐಆರ್ (FIR) ದಾಖಲಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅನುಮೋದನೆಯೊಂದಿಗೆ ಇಪಿಎಫ್‌ಒ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸಿಬಿಐ ಈ ಕ್ರಮ ಕೈಗೊಂಡಿದೆ. ವಂಚನೆ, ಅಪರಾಧ ಸಂಚು ಹಾಗೂ ಇಪಿಎಫ್‌ಒಗೆ ನಷ್ಟ (wrongful loss) ಉಂಟುಮಾಡಿದ ಆರೋಪಗಳನ್ನು ಹೊರಿಸಲಾಗಿದೆ.
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅನಿಲ್ ಅಂಬಾನಿ ತಳ್ಳಿಹಾಕಿದ್ದಾರೆ. “ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್‌ನ ಬೋರ್ಡ್‌ನ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ನಾನು 2005ರಿಂದ ನವೆಂಬರ್ 2021ರವರೆಗೆ ಮಾತ್ರ ಕಾರ್ಯನಿರ್ವಹಿಸಿದ್ದೇನೆ. ಆ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಂಪನಿಯ ನಿರ್ದೇಶಕರ ಮಂಡಳಿಯನ್ನು ವಹಿಸಿಕೊಂಡು ನಿರ್ವಾಹಕರನ್ನು ನೇಮಿಸಿತು. ಅನಿಲ್ ಅಂಬಾನಿ ಯಾವುದೇ ತಪ್ಪು ಮಾಡಿಲ್ಲ ಮತ್ತು ಕಾನೂನುಬದ್ಧವಾಗಿ ಲಭ್ಯವಿರುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದ್ದಾರೆ” ಎಂದು ಅವರ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: EPFO rules: 2-3 ವರ್ಷ ಕೆಲಸ ಇಲ್ಲದಿದ್ದಾಗ ಹಳೆಯ ಇಪಿಎಫ್ ಖಾತೆ ಏನಾಗುತ್ತದೆ?
ಅನಿಲ್ ಅಂಬಾನಿಯಿಂದ ಇಪಿಎಫ್‌ಒಗೆ ವಂಚನೆಯಾಗಿದ್ದು ಹೇಗೆ?
ರಿಲಯನ್ಸ್ ಕ್ಯಾಪಿಟಲ್ನ ಸಾಲಪತ್ರಗಳ ಮೇಲೆ ಮಾಡಿದ ಹೂಡಿಕೆಯಿಂದ ಇಪಿಎಫ್‌ಒಗೆ ಸಾಕಷ್ಟು ನಷ್ಟವಾಗಿತ್ತು. 2013 ಮತ್ತು 2014ರ ಅವಧಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಸುರಕ್ಷಿತ ನಾನ್-ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು (NCDs) ಹೊರಡಿಸಿತ್ತು. ಇದರಡಿ ಇಪಿಎಫ್‌ಒ ಪರವಾಗಿ ಪೋರ್ಟ್‌ಫೋಲಿಯೋ ನಿರ್ವಾಹಕರು ಒಟ್ಟು ₹2,500 ಕೋಟಿ ಹೂಡಿಕೆ ಮಾಡಿದ್ದರು. ಈ ಡಿಬೆಂಚರ್‌ಗಳು 2023 ಮತ್ತು 2024ರಲ್ಲಿ ಮೆಚ್ಯೂರಿಟಿ (Maturity) ಹೊಂದಬೇಕಿದ್ದವು.
ಜಾರಿ ನಿರ್ದೇಶನಾಲಯ (ED) ಮತ್ತು ಆಡಿಟ್ ವರದಿ: ಜಾರಿ ನಿರ್ದೇಶನಾಲಯವು (ED) ಈ ಹೂಡಿಕೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷ್ಯಗಳನ್ನು ಪತ್ತೆಹಚ್ಚಿ ಕಾರ್ಮಿಕ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. BDO India LLP ನಡೆಸಿದ ವಹಿವಾಟಿನ ಆಡಿಟ್ ವರದಿಯ ಪ್ರಕಾರ, ಡಿಸೆಂಬರ್ 7, 2019 ರಿಂದ ಡಿಸೆಂಬರ್ 6, 2021ರ ಅವಧಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ ಹಲವು ಶಂಕಿತ ಹಾಗೂ ವಂಚನೆಯ ವಹಿವಾಟುಗಳನ್ನು ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಇದನ್ನೂ ಓದಿ: ಭಾರತ-ಟಿಬೆಟ್ ಪುರಾತನ ರೇಷ್ಮೆ ಮಾರ್ಗಕ್ಕೆ ಮರುಜೀವ; ಇಲ್ಲಿ ವ್ಯಾಪಾರಕ್ಕೆ ಹಣ ಅಲ್ಲ, ಬಾರ್ಟರ್ ಸಿಸ್ಟಂ
ಹಣ ತಿರುಚುವಿಕೆ (Diversion of Funds): ರಿಲಯನ್ಸ್ ಕ್ಯಾಪಿಟಲ್ ಲಿ ಕಂಪನಿಯು ಸಾಲದ ಹಣವನ್ನು ಅಕ್ರಮವಾಗಿ ಬೇರೆಡೆಗೆ ತಿರುಗಿಸುವುದು (Diversion of funds) ಮುಂತಾದ ಕಾರಣಗಳಿಂದ ಆರ್ಥಿಕ ಸ್ಥಿತಿ ಹದಗೆಟ್ಟಿತು. ಇದರಿಂದಾಗಿ ಡಿಬೆಂಚರ್ ಹೊಂದಿರುವವರಿಗೆ ಹಣ ಮರಳಿಸಲು ವಿಫಲವಾಯಿತು ಮತ್ತು ಇಪಿಎಫ್‌ಒಗೆ ₹1,816.22 ಕೋಟಿ ಭಾರಿ ನಷ್ಟ ಉಂಟಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




