PMEGP; ಸ್ವಂತ ಉದ್ಯೋಗದ ಕನಸು ಸಾಕಾರಗೊಳಿಸಲು 50 ಲಕ್ಷ ರೂವರೆಗೂ ಸಹಾಯಧನ; ಪಿಎಂಇಜಿಪಿ ಸಬ್ಸಿಡಿ, ಬಡ್ಡಿ ದರ ಇತ್ಯಾದಿ ವಿವರ ತಿಳಿದಿರಿ

Government's Bid To Encourage MSME Sector: ಎಂಎಸ್​ಎಂಇ ವಲಯಕ್ಕೆ ಪುಷ್ಟಿ ಕೊಡಲು ಸರ್ಕಾರ ರೂಪಿಸಿರುವ ಪಿಎಂಇಜಿಪಿ ಯೋಜನೆಯಲ್ಲಿ 50 ಲಕ್ಷ ರೂವರೆಗೂ ಸಹಾಯಧನ ಸಿಗುತ್ತದೆ. ಗ್ರಾಮೀಣ ಮಹಿಳಾ ಉದ್ದಿಮೆದಾರರಿಗೆ ಶೇ. 35ರವರೆಗೂ ಸಬ್ಸಿಡಿ ಇರುತ್ತದೆ. ಬಡ್ಡಿ ದರ, ಸಬ್ಸಿಡಿ, ಅರ್ಹತೆ ಇತ್ಯಾದಿ ಯೋಜನೆ ಸಂಬಂಧ ವಿವಿಧ ಮಾಹಿತಿ ಇಲ್ಲಿದೆ...

PMEGP; ಸ್ವಂತ ಉದ್ಯೋಗದ ಕನಸು ಸಾಕಾರಗೊಳಿಸಲು 50 ಲಕ್ಷ ರೂವರೆಗೂ ಸಹಾಯಧನ; ಪಿಎಂಇಜಿಪಿ ಸಬ್ಸಿಡಿ, ಬಡ್ಡಿ ದರ ಇತ್ಯಾದಿ ವಿವರ ತಿಳಿದಿರಿ
ಪಿಎಂಇಜಿಪಿ ಯೋಜನೆ
Follow us
|

Updated on: May 07, 2023 | 12:29 PM

ನವದೆಹಲಿ: ಸ್ವಂತ ಉದ್ಯೋಗ, ಸ್ವಂತ ಬ್ಯುಸಿನೆಸ್, ಸ್ವಂತ ಉದ್ದಿಮೆ ಹೊಂದುವ ಆಕಾಂಕ್ಷೆಯೇ? ಜನರ ಈ ಕನಸು ಸಾಕಾರಗೊಳಿಸಲು ಹಲವು ಮಾರ್ಗಗಳಿರುತ್ತವೆ. ಸರ್ಕಾರದಿಂದಲೂ ಕೆಲವಾರು ಪ್ರಮುಖ ಯೋಜನೆಗಳಿವೆ. ಸರ್ಕಾರದ ಆರ್ಥಿಕ ಅಭಿವೃದ್ಧಿಯ ಗುರಿ ಈಡೇರಿಕೆಗೆ ಸಣ್ಣ ಉದ್ದಿಮೆಗಳು ಅಥವಾ ಎಂಎಸ್​ಎಂಇ ವಲಯ ಪ್ರಬಲವಾಗಿರುವುದು ಬಹಳ ಮುಖ್ಯ. ಹೀಗಾಗಿ, ದೇಶದಲ್ಲಿ ಸಣ್ಣ ಉದ್ದಿಮೆಗಳಿಗೆ ಉತ್ತೇಜನ ಕೊಡಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP- Pradhan Mantri Employment Generation Programme) ಪ್ರಮುಖವಾದುದು. ಸ್ವಂತ ಉದ್ಯೋಗ ಮಾಡಲು ಆಸಕ್ತರಾಗಿರುವ ಜನರಿಗೆ ಈ ಸ್ಕೀಮ್ ವರದಾನ ಆಗಬಹುದು. ಉದ್ದಿಮೆ ಸ್ಥಾಪಿಸಲು ಸರ್ಕಾರ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಸಬ್ಸಿಡಿಯನ್ನೂ ನೀಡುತ್ತದೆ. 2025-26ರ ಹಣಕಾಸು ವರ್ಷದವರೆಗೂ ಈ ಯೋಜನೆ ಚಾಲ್ತಿಯಲ್ಲಿರುತ್ತದೆ.

ಕೇಂದ್ರ ಸರ್ಕಾರದ ಎಂಎಸ್​ಎಂಇ ಸಚಿವಾಲಯದ ಈ ಯೋಜನೆಗೆ ಖಾದಿ ಗ್ರಾಮೋದ್ಯೋಗ ಆಯೋಗ (KVIC- Khadi Village Industries Commission) ನೋಡಲ್ ಏಜೆನ್ಸ್ ಆಗಿದೆ. ರಾಜ್ಯ ಮಟ್ಟದಲ್ಲಿ ಕೆವಿಐಸಿಯ ರಾಜ್ಯ ವಿಭಾಗಗಳು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (ಕೆವಿಐಬಿ), ಜಿಲ್ಲಾ ಕೈಗಾರಿಕಾ ಕೇಂದ್ರ (DIC- District Industries Center) ಮತ್ತು ನಿಯೋಜಿತ ಬ್ಯಾಂಕುಗಳು (Designated Banks) ಈ ಯೋಜನೆಯನ್ನು ಜಾರಿಗೊಳಿಸುವ ಮಾಧ್ಯಮಗಳಾಗಿವೆ.

ಕೃಷಿ ಹೊರತುಪಡಿಸಿ ಬೇರೆ ಸ್ವಂತ ಉದ್ದಿಮೆ (Non-Agriculture Industries) ಮಾಡಬಯಸುವ ಅರ್ಹ ಜನರು ನಿಯೋಜಿತ ಬ್ಯಾಂಕುಗಳಲ್ಲಿ ಈ ಯೋಜನೆಯ ಮೂಲಕ ಸಾಲ ಪಡೆಯಬಹುದು. ಸರ್ಕಾರ ಈ ಬ್ಯಾಂಕುಗಳ ಮೂಲಕ ಸಬ್ಸಿಡಿ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿForex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ 37,000 ಕೋಟಿ ರೂನಷ್ಟು ಏರಿಕೆ; ಈಗೆಷ್ಟಿದೆ ಮೀಸಲು ನಿಧಿ?

ಪಿಎಂಇಜಿಪಿ ಯೋಜನೆ ಅಡಿ ಎಷ್ಟು ಸಾಲ ಮತ್ತು ಸಬ್ಸಿಡಿ?

ಪಿಎಂ ಉದ್ಯೋಗ ಸೃಷ್ಟಿ ಯೋಜನೆ ಅಡಿ ನೀಡುವ ಸಾಲವನ್ನು ಎರಡು ಭಾಗವಾಗಿ ಮಾಡಲಾಗಿದೆ. ತಯಾರಿಕಾ ವಲಯ (ಮ್ಯಾನುಫ್ಯಾಕ್ಚರಿಂಗ್) ಮತ್ತು ಸೇವಾ ವಲಯ (ಸರ್ವಿಸ್ ಸೆಕ್ಟರ್) ಎಂದು ವರ್ಗೀಕರಿಸಲಾಗಿದೆ. ಇದೀಗ ಸರ್ಕಾರ ತಯಾರಿಕಾ ವಲಯಕ್ಕೆ ನೀಡುವ ಸಾಲದ ಪ್ರಮಾಣವನ್ನು 25 ಲಕ್ಷ ರೂನಿಂದ 50ಲಕ್ಷ ರೂಪಾಯಿಗೆ ಏರಿಸಿದೆ. ಅಂದರೆ 50 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಇನ್ನು ಸರ್ವಿಸ್ ಸೆಕ್ಟರ್​ನಲ್ಲಿ ಇದ್ದ10 ಲಕ್ಷ ರೂ ಗರಿಷ್ಠ ಸಾಲವನ್ನು 20 ಲಕ್ಷ ರೂಗೆ ಏರಿಸಲಾಗಿದೆ.

ಪಿಎಂ ಎಂಪ್ಲಾಯ್ಮೆಂಟ್ ಜನರೇಶನ್ ಪ್ರೋಗ್ರಾಂ ಅಡಿಯಲ್ಲಿ ಸಿಗುವ ಸಾಲಕ್ಕೆ ವಾರ್ಷಿಕವಾಗಿ ಶೇ. 11ರಿಂದ 12ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ.

ಪಿಎಂಇಜಿಪಿ ಯೋಜನೆ ಅಡಿ ಎಷ್ಟು ಸಬ್ಸಿಡಿ ಸಿಗುತ್ತದೆ?

ಯೋಜನೆಯ ಅಂದಾಜು ವೆಚ್ಚದಲ್ಲಿ ಶೇ. 15ರಿಂದ ಶೇ. 35ರವರೆಗೂ ಸರ್ಕಾರ ಸಬ್ಸಿಡಿ ಒದಗಿಸುತ್ತದೆ. ಯಾರಿಗೆಲ್ಲಾ ಎಷ್ಟೆಷ್ಟು ಸಬ್ಸಿಡಿ ಸಿಗುತ್ತದೆ ಎಂಬ ವಿವರ ಇಲ್ಲಿದೆ:

  • ಜನರಲ್ ಕೆಟಗರಿ (ನಗರ ಪ್ರದೇಶ): ಶೇ. 15
  • ಜನರಲ್ ಕೆಟಗರಿ (ಗ್ರಾಮೀಣ ಪ್ರದೇಶ): ಶೇ. 25
  • ವಿಶೇಷ ವರ್ಗ (ನಗರ): ಶೇ. 25
  • ವಿಶೇಷ ವರ್ಗ (ಗ್ರಾಮೀಣ): ಶೇ. 35

ಇಲ್ಲಿ ವಿಶೇಷ ವರ್ಗ ಎಂದರೆ ಎಸ್​ಸಿ, ಎಸ್​ಟಿ, ಒಬಿಸಿ, ಅಲ್ಪಸಂಖ್ಯಾತ, ಮಹಿಳೆ, ನಿವೃತ್ತ ಯೋಧರು, ವಿಶೇಷ ಚೇತನರು, ಗುಡ್ಡಗಾಡು ಪ್ರದೇಶದವರು, ಗಡಿಭಾಗದವರು ಇತ್ಯಾದಿ.

ಇದನ್ನೂ ಓದಿRs 1 Crore: ಎಸ್​ಐಪಿ ಸ್ಕೀಮ್​ನಲ್ಲಿ 1 ಕೋಟಿ ಗಳಿಸಲು ಎಷ್ಟು ವರ್ಷ ಬೇಕು, ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಪಟ್ಟಿ

ಪಿಎಂಇಜಿಪಿ ಯೋಜನೆಯಲ್ಲಿ ಸಾಲ ಪಡೆಯಲು ಮಾನದಂಡಗಳೇನು?

  • ಪಿಎಂ ಎಂಪ್ಲಾಯ್ಮೆಂಟ್ ಜನರೇಶನ್ ಪ್ರೋಗ್ರಾಮ್ ಅಡಿಯಲ್ಲಿ ಕೃಷಿಯೇತರ ಸಣ್ಣ ಉದ್ದಿಮೆಗಳಿಗೆ ಸಹಾಯಧನ ಒದಗಿಸಲಾಗುತ್ತದೆ.
  • ಹೊಸದಾಗಿ ಸ್ಥಾಪನೆಯಾಗುವ ಉದ್ದಿಮೆ
  • ಹೊಸ ಉದ್ದಿಮೆ ಸ್ಥಾಪಿಸುವ ವ್ಯಕ್ತಿ ಕನಿಷ್ಠ 18 ವರ್ಷವಿರಬೇಕು. 7ನೇ ತರಗತಿ ತೇರ್ಗಡೆ ಆಗಿರಬೇಕು.
  • ಈ ಯೋಜನೆಯಲ್ಲಿ ಹಿಂದೆ ಸಾಲ ತೆಗೆದುಕೊಂಡಿರುವಂತಿಲ್ಲ.
  • ಸ್ವಸಹಾಯ ಗುಂಪು (ಎಸ್​ಎಚ್​ಜಿ).

ಈ ಯೋಜನೆಯಲ್ಲಿ ಅರ್ಹರಿಗೆ ಸಾಲ ಒದಗಿಸಲು 27 ಬ್ಯಾಂಕುಗಳನ್ನು ನಿಯೋಜಿಸಲಾಗಿದೆ. ಯೋಜನೆ ಆಕಾಂಕ್ಷಿಗಳು ಕೇಂದ್ರೀಯ ಗ್ರಾಮೋದ್ಯೋಗ ಮಂಡಳಿಯ ವೆಬ್​ಸೈಟ್​ನ ಈ ಲಿಂಕ್ www.kviconline.gov.in/pmegpeportal/jsp/pmegponline.jsp ಮೂಲಕ ಅರ್ಜಿ ಸಲ್ಲಿಸಬಹುದು. ಹೊಸ ಉದ್ದಿಮೆ ಬಗ್ಗೆ ಪ್ರಾಜೆಕ್ಟ್ ರಿಪೋರ್ಟ್ ಅಥವಾ ಪ್ರಾಜೆಕ್ಟ್ ಪ್ರಸ್ತಾವವನ್ನೂ ತಯಾರಿಸಬೇಕು. ಅದರ ಮಾದರಿ ಪ್ರಾಜೆಕ್ಟ್ ರಿಪೋರ್ಟ್​ಗಳನ್ನು ಈ ಲಿಂಕ್​ನಲ್ಲಿ www.kviconline.gov.in/pmegp/pmegpweb/docs/jsp/newprojectReports.jsp ಕಾಣಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ