ಎಂಎಸ್ಸಿಐ ಐಎಂಐ ಸೂಚ್ಯಂಕದಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ; ವಿಶ್ವದ ಆರು ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತ
Morgan Stanley Capital International All-country world index: ಜಾಗತಿಕ ಹೂಡಿಕೆದಾರರಿಗೆ ಬೆಂಚ್ಮಾರ್ಕ್ ಆಗಿರುವ ಎಂಎಸ್ಸಿಐನ ಎಸಿಡಬ್ಲ್ಯು ಐಎಂಐ ಇಂಡೆಕ್ಸ್ನಲ್ಲಿ ಭಾರತದ ವೈಟೇಜ್ ಗಮನಾರ್ಹವಾಗಿ ಹೆಚ್ಚಳವಾಗಿದೆ. ಅಮೆರಿಕದ ದಟ್ಟ ಪ್ರಾಬಲ್ಯ ಇರುವ ಈ ಇಂಡೆಕ್ಸ್ನಲ್ಲಿ ಚೀನಾವನ್ನು ಮೀರಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಒಟ್ಟಾರೆ ವೈಟೇಜ್ನಲ್ಲಿ ಭಾರತ 6ನೇ ಸ್ಥಾನಕ್ಕೆ ಏರಿದೆ. ಚೀನಾ ಏಳನೇ ಸ್ಥಾನಕ್ಕೆ ಇಳಿದಿದೆ.
ನವದೆಹಲಿ, ಸೆಪ್ಟೆಂಬರ್ 19: ವಿಶ್ವದ ಅತಿದೊಡ್ಡ ಸ್ಟಾಕ್ ಮಾರ್ಕೆಟ್ ಬೆಂಚ್ಮಾರ್ಕ್ಗಳಲ್ಲಿ ಒಂದೆನಿಸಿದ ಎಂಎಸ್ಸಿಐನ ಆಲ್ ಕಂಟ್ರಿ ವರ್ಲ್ಡ್ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್ನಲ್ಲಿ ಭಾರತದ ಷೇರು ಮಾರುಕಟ್ಟೆ ಚೀನಾವನ್ನು ಹಿಂದಿಕ್ಕಿದೆ. ಈ ಇಂಡೆಕ್ಸ್ ಪೈಪೋಟಿಯಲ್ಲಿ ಚೀನಾವನ್ನು ಭಾರತ ಮೀರಿಸಿದ್ದು ಇದೇ ಮೊದಲು. ಮಾರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್ನ್ಯಾಷನಲ್ನ ಈ ಇನ್ವೆಸ್ಟಬಲ್ ಮಾರ್ಕೆಟ್ ಇಂಡೆಕ್ಸ್ನಲ್ಲಿ (ಎಂಎಸ್ಸಿಐ ಎಸಿಡಬ್ಲ್ಯುಐ ಐಎಂಐ) ಭಾರತೀಯ ಷೇರುಗಳ ವೈಟೇಜ್ ಅಥವಾ ತೂಕ ಶೇ. 2.35ಕ್ಕೆ ಏರಿದೆ. ಇದೇ ವೇಳೆ ಬುಧವಾರ ದಿನಾಂತ್ಯದಲ್ಲಿ ಚೀನೀ ಸ್ಟಾಕ್ಗಳ ವೈಟೇಜ್ ಶೇ. 2.24ಕ್ಕೆ ಇಳಿದಿದೆ. ಈ ಮೂಲಕ ಚೀನಾವನ್ನು ಭಾರತ ಹಿಂದಿಕ್ಕಿದೆ.
ಇಂಡೆಕ್ಸ್ನ ಈ ವೈಟೇಜ್ನಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಇದರಲ್ಲಿ ಅಮೆರಿಕದ ಪ್ರಾಬಲ್ಯ ಮುಂದುವರಿದಿದೆ. ಯುಎಸ್ಎನ ವೈಟೇಜ್ ಶೇ. 63ರಷ್ಟಿದೆ. ಜಪಾನ್ ಶೇ. 5.73, ಯುಕೆ ಶೇ. 3.51, ಕೆನಡಾ ಶೇ. 2.83 ಮತ್ತು ಫ್ರಾನ್ಸ್ ಶೇ. 2.38 ವೈಟೇಜ್ ಹೊಂದಿದೆ. ಫ್ರಾನ್ಸ್ಗಿಂತ ಭಾರತದ ವೈಟೇಜ್ 3 ಮೂಲಾಂಕಗಳಷ್ಟು ಮಾತ್ರ ಕಡಿಮೆ ಆಗಿದೆ. ಅತಿ ಶೀಘ್ರದಲ್ಲಿ ಭಾರತ ಈ ಇಂಡೆಕ್ಸ್ ವೈಟೇಜ್ನಲ್ಲಿ ಐದನೇ ಸ್ಥಾನಕ್ಕೆ ಹೋಗುವ ಸಂಭಾವ್ಯತೆ ಇದೆ.
ಇದನ್ನೂ ಓದಿ: ಅಮೆರಿಕದಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ; ಬಾಕಿ ಇದೆ ಇನ್ನಷ್ಟು ಕಡಿತ; ಮಿಂಚುತ್ತಿರುವ ಭಾರತೀಯ ಮಾರುಕಟ್ಟೆ
ಮಾರ್ಗನ್ ಸ್ಟಾನ್ಲೀ ಕ್ಯಾಪಿಟಲ್ ಇಂಟರ್ನ್ಯಾಷನಲ್ನ ಹೂಡಿಕೆಗೆ ಅರ್ಹವಾಗಿರುವ ಸ್ಟಾಕ್ ಮಾರ್ಕೆಟ್ಗಳ ಇಂಡೆಕ್ಸ್ನಲ್ಲಿ 23 ಮುಂದುವರಿದ ಮಾರುಕಟ್ಟೆ (ಡಿಎಂ) ಮತ್ತು 24 ಉದಯೋನ್ಮುಖ ಮಾರುಕಟ್ಟೆಯ (ಇಎಂ) ದೇಶಗಳಿವೆ. ಜಾಗತಿಕವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಅವಕಾಶ ಇರುವ ಮಾರುಕಟ್ಟೆಗಳನ್ನು ಟ್ರ್ಯಾಕ್ ಮಾಡುವ ಈ ಇಂಡೆಕ್ಸ್ನಲ್ಲಿ 8,815 ಸ್ಟಾಕ್ಗಳಿವೆ.
ಎಂಎಸ್ಸಿಐನಲ್ಲಿ ಭಾರತದ ಸಾಧನೆ ಹೆಚ್ಚಳ
ಎಂಎಸ್ಸಿಐನ ಇಂಡಿಯಾ ಇಂಡೆಕ್ಸ್ ಈ ವರ್ಷ ಶೇ. 23ರಷ್ಟು ಬೆಳೆದಿದೆ. ಇದೇ ವೇಳೆ, ಎಂಎಸ್ಸಿಐ ಚೀನಾ ಇಂಡೆಕ್ಸ್ ಪ್ರಗತಿ ಕಂಡಿದ್ದು ಶೇ. 0.3ರಷ್ಟು ಮಾತ್ರ. ಇನ್ನು, ಈ ವರ್ಷ ಎಂಎಸ್ಸಿಐನ ಉದಯೋನ್ಮುಖ ಮಾರುಕಟ್ಟೆ ಅಥವಾ ಇಎಂ ಇಂಡೆಕ್ಸ್ ಶೇ. 6.52ರಷ್ಟು ಹೆಚ್ಚಳವಾಗಿದೆ. ಇವಕ್ಕೆ ಹೋಲಿಸಿದರೆ ಇಂಡಿಯಾ ಇಂಡೆಕ್ಸ್ ಬೆಳವಣಿಗೆ ಅಗಾಧವಾಗಿದೆ.
ಇದನ್ನೂ ಓದಿ: ದಶಕಗಳಲ್ಲಿ ಆದ ಬದಲಾವಣೆ… ಹಿಂದುಳಿದಿದ್ದ ಕರ್ನಾಟಕ ಈಗ ಹೇಗಿದೆ? ಸಿರಿತನವಿದ್ದ ಬಂಗಾಳ ಈಗ ಏನಾಗಿದೆ?; ಇದು ಭಾರತದ ರಾಜ್ಯಗಳ ಕಥೆ
ಆದರೆ, ಎಂಎಸ್ಸಿಐ ಇಂಡಿಯಾ ಇಂಡೆಕ್ಸ್ ಭರ್ಜರಿ ಹೆಚ್ಚಳ ಕಂಡರೂ ಎಮರ್ಜಿಂಗ್ ಮಾರ್ಕೆಟ್ ಇಂಡೆಕ್ಸ್ನಲ್ಲಿ ಸ್ಟಾಕುಗಳ ವೈಟೇಜ್ನಲ್ಲಿ ಚೀನಾಗಿಂತ ಭಾರತ ತುಸು ಹಿಂದಿದೆ. ಚೀನಾ ಶೇ. 23.74ರಷ್ಟು ವೈಟೇಜ್ ಹೊಂದಿದ್ದರೆ, ಭಾರತದ್ದು ಶೇ. 20.7ರಷ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ