ಅಮೆರಿಕದಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ; ಬಾಕಿ ಇದೆ ಇನ್ನಷ್ಟು ಕಡಿತ; ಮಿಂಚುತ್ತಿರುವ ಭಾರತೀಯ ಮಾರುಕಟ್ಟೆ

US interest rates reduced to 4.75-5.00 pc: ಯುಎಸ್ ಫೆಡರಲ್ ರಿಸರ್ವ್ ಸಂಸ್ಥೆ ನಿರೀಕ್ಷೆಯಂತೆ ಬಡ್ಡಿದರ ಕಡಿತಗೊಳಿಸಿದೆ. 50 ಮೂಲಾಂಕಗಳಷ್ಟು ಕಡಿಮೆಯಾಗಿದ್ದು ಬಡ್ಡಿದರ ಶೇ. 4.75-5ರಲ್ಲಿ ತಲುಪಿದೆ. ಎರಡು ದಿನಗಳ ಎಫ್​ಒಎಂಸಿ ಸಭೆ ಬಳಿಕ ಫೆಡರಲ್ ರಿಸರ್ವ್ ಮುಖ್ಯಸ್ಥ ಜಿರೋಮ್ ಪೋವೆಲ್ ಅವರು ಬಡ್ಡಿದರ ಇಳಿಕೆ ಮಾಡಲಾಗಿರುವುದನ್ನು ತಿಳಿಸಿದರು. ಭಾರತದ ಷೇರು ಮಾರುಕಟ್ಟೆ ಈ ಬೆಳವಣಿಗೆಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಚಿನಿವಾರ ಪೇಟೆಯಲ್ಲಿ ಬೆಲೆಗಳು ಇಳಿಕೆ ಆಗಿವೆ.

ಅಮೆರಿಕದಲ್ಲಿ 50 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ; ಬಾಕಿ ಇದೆ ಇನ್ನಷ್ಟು ಕಡಿತ; ಮಿಂಚುತ್ತಿರುವ ಭಾರತೀಯ ಮಾರುಕಟ್ಟೆ
ಅಮೆರಿಕ
Follow us
|

Updated on:Sep 19, 2024 | 10:32 AM

ನವದೆಹಲಿ, ಸೆಪ್ಟೆಂಬರ್ 19: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ 50 ಮೂಲಾಂಕಗಳಷ್ಟು ಬಡ್ಡಿದರ ಕಡಿತ ಮಾಡಿದೆ. ಇದರೊಂದಿಗೆ ಅಲ್ಲಿ ಬಡ್ಡಿದರ ಶೇ. 4.75ರಿಂದ ಶೇ. 5ರ ಶ್ರೇಣಿಗೆ ಇಳಿದಿದೆ. ಎರಡು ದಿನಗಳ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್​ಒಎಂಸಿ) ಸಭೆ ಮುಕ್ತಾಯದ ಬಳಿಕ ಫೆಡ್ ರಿಸರ್ವ್ ಛೇರ್ಮನ್ ಜಿರೋಮ್ ಪೋವೆಲ್ ನಿನ್ನೆ ರಾತ್ರಿ (ಭಾರತೀಯ ಕಾಲಮಾನ) ಬಡ್ಡಿದರ ಇಳಿಕೆ ಮಾಡಲಾಗಿರುವ ಸಂಗತಿಯನ್ನು ಘೋಷಿಸಿದರು. ಅವರ ಪ್ರಕಾರ, ಅಮೆರಿಕದ ಆರ್ಥಿಕತೆ ಪ್ರಬಲವಾಗಿದೆ. ಕಾರ್ಮಿಕ ಮಾರುಕಟ್ಟೆ ಸುಸ್ಥಿತಿಗೆ ಮರಳಿದೆ. ಹಣದುಬ್ಬರ ಸಾಕಷ್ಟು ಇಳಿಕೆ ಆಗಿದೆ.

2020ರಿಂದ ಈಚೆಗೆ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿದರ ಇಳಿಕೆ ಮಾಡಿರುವುದು ಇದೇ ಮೊದಲು. ಶೇ. 7ರಷ್ಟಿದ್ದ ಈಗ ಶೇ. 3ರ ಒಳಗೆ ಬಂದಿದೆ. ಆಗಸ್ಟ್​​ನಲ್ಲಿ ಶೇ. 2.2ರಷ್ಟು ಮಾತ್ರವೇ ಹಣದುಬ್ಬರ ಇದೆ ಎನ್ನಲಾಗಿದೆ. ಫೆಡ್ ರಿಸರ್ವ್​ನ ಗುರಿಯಾದ ಶೇ. 2ರ ಸಮೀಪಕ್ಕೆ ಹಣದುಬ್ಬರ ಬಂದಿದೆ. ಈ ಕಾರಣಕ್ಕೆ ಬಡ್ಡಿದರ ಇಳಿಕೆ ಮಾಡಲಾಗುವುದನ್ನು ತಿಂಗಳುಗಳ ಹಿಂದೆಯೇ ನಿರೀಕ್ಷಿಸಲಾಗಿತ್ತು. ಈ ಬಾರಿ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಕೆ ಆಗಬಹುದು ಎಂದು ಹೆಚ್ಚಿನವರು ನಿರೀಕ್ಷಿಸಿದ್ದರು. ಕೆಲವರು 50 ಮೂಲಾಂಕಗಳಷ್ಟು ಕಡಿಮೆ ಮಾಡುವ ಸಂಭವ ಇದೆ ಎಂದಿದ್ದರು. ಅಂತಿಮವಾಗಿ 50 ಮೂಲಾಂಕಗಳಷ್ಟು ಬಡ್ಡಿಯನ್ನು ಇಳಿಸಲಾಗಿದೆ.

ಇದನ್ನೂ ಓದಿ: ದಶಕಗಳಲ್ಲಿ ಆದ ಬದಲಾವಣೆ… ಹಿಂದುಳಿದಿದ್ದ ಕರ್ನಾಟಕ ಈಗ ಹೇಗಿದೆ? ಸಿರಿತನವಿದ್ದ ಬಂಗಾಳ ಈಗ ಏನಾಗಿದೆ?; ಇದು ಭಾರತದ ರಾಜ್ಯಗಳ ಕಥೆ

ಎಫ್​ಒಎಂಸಿ ಸಮಿತಿಯಲ್ಲಿದ್ದ 12 ಸದಸ್ಯರ ಪೈಕಿ ಎಲ್ಲರೂ ಬಡ್ಡಿದರ ಇಳಿಕೆಗೆ ಒಮ್ಮತದ ನಿರ್ಧಾರ ಮಾಡಿದ್ದಾರೆ. ಆದರೆ, 11 ಸದಸ್ಯರು 50 ಮೂಲಾಂಕ ಇಳಿಕೆಯ ಪರವಾಗಿದ್ದರೆ, ಒಬ್ಬರು ಮಾತ್ರ 25 ಮೂಲಾಂಕದಷ್ಟು ದರ ಇಳಿಕೆ ಸಾಕು ಎಂದಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಇಳಿಕೆ ಮಾಡುವ ಮನಸ್ಸಿನಲ್ಲಿ ಫೆಡ್ ರಿಸರ್ವ್ ಇದೆ. 2026ರವರೆಗೂ ಹಂತಹಂತವಾಗಿ ಬಡ್ಡಿದರ ಇಳಿಕೆ ಆಗಬಹುದು ಎನ್ನುವ ಸುಳಿವು ಸಿಕ್ಕಿದೆ.

ಗರಿಗೆದರಿದ ಭಾರತದ ಮಾರುಕಟ್ಟೆ

ಅಮೆರಿಕದಲ್ಲಿ ಬಡ್ಡಿದರ ಕಡಿತಗೊಂಡ ದಿನ ಭಾರತೀಯ ಷೇರು ಮಾರುಕಟ್ಟೆ ಋಣಾತ್ಮಕವಾಗಿ ಸ್ಪಂದಿಸುತ್ತದೆ. ಮರುದಿನ ಹೊಸ ಉತ್ಸಾಹ ಪಡೆದು ಚೇತರಿಸಿಕೊಳ್ಳುತ್ತದೆ. ಈ ಬಾರಿ ವಿಭಿನ್ನ ಟ್ರೆಂಡ್ ಇದೆ. ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿಕೆ ಆಗಿವೆ. ಅದರಲ್ಲೂ ಲಾರ್ಜ್ ಕ್ಯಾಪ್ ಸ್ಟಾಕ್​ಗಳು ಬೇಡಿಕೆ ಪಡೆದಿವೆ.

ಇದನ್ನೂ ಓದಿ: ಇಪಿಎಫ್ ಬದಲಾವಣೆ ಗಮನಿಸಿ; ಪಿಎಫ್ ವಿತ್​ಡ್ರಾಯಲ್ ಮಿತಿ ಹೆಚ್ಚಳ; ಒಮ್ಮೆಗೆ 1 ಲಕ್ಷ ರೂವರೆಗೆ ಹಣ ಹಿಂಪಡೆಯಲು ಅವಕಾಶ

ಚಿನ್ನದ ಬೆಲೆ ಇಳಿಕೆ

ಅಮೆರಿಕದ ಬಡ್ಡಿದರ ಈ ಬಾರಿ ಭಾರತದಲ್ಲಿ ಆದ ಮತ್ತೊಂದು ವಿಭಿನ್ನ ಪರಿಣಾಮ ಎಂದರೆ ಅದು ಚಿನ್ನದ ಮೇಲೆ. ಬಡ್ಡಿದರ ಕಡಿಮೆ ಆದರೆ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಆದರೆ, ಇವತ್ತು ಗುರುವಾರ ಚಿನಿವಾರ ಪೇಟೆ ಕಳೆಗುಂದಿದೆ. ಚಿನ್ನದ ಬೆಲೆ ಕಡಿಮೆ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:26 am, Thu, 19 September 24