ಇಪಿಎಫ್ ಬದಲಾವಣೆ ಗಮನಿಸಿ; ಪಿಎಫ್ ವಿತ್ಡ್ರಾಯಲ್ ಮಿತಿ ಹೆಚ್ಚಳ; ಒಮ್ಮೆಗೆ 1 ಲಕ್ಷ ರೂವರೆಗೆ ಹಣ ಹಿಂಪಡೆಯಲು ಅವಕಾಶ
EPF withdrawal limit raised: ಕಾರ್ಮಿಕ ಸಚಿವಾಲಯವು ಇಪಿಎಫ್ಒ ಕಾರ್ಯನಿರ್ವಹಣೆಯಲ್ಲಿ ಹಲವು ಮಹತ್ವದ ಬದಲಾವಣೆ ಮಾಡಿದೆ. ಹೊಸ ಡಿಜಿಟಲ್ ಫ್ರೇಮ್ವರ್ಕ್, ಹೊಸ ಮಾರ್ಗಸೂಚಿಗಳು ಜಾರಿಗೆ ಬಂದಿವೆ. ಒಮ್ಮೆ ವಿತ್ಡ್ರಾ ಮಾಡಬಹುದಾದ ಹಣದ ಮಿತಿಯನ್ನು 50,000 ರೂನಿಂದ 1,00,000 ರೂಗೆ ಏರಿಸಲಾಗಿದೆ.
ನವದೆಹಲಿ, ಸೆಪ್ಟೆಂಬರ್ 18: ಇಪಿಎಫ್ ವಿಚಾರದಲ್ಲಿ ಸರ್ಕಾರವು ನಿಯಮಗಳನ್ನು ಸಾಧ್ಯವಾದಷ್ಟೂ ಸರಳಗೊಳಿಸುತ್ತಿದೆ. ಇಪಿಎಫ್ನ ವಿವಿಧ ಕಾರ್ಯಗಳನ್ನು ಈಗ ಆನ್ಲೈನ್ನಲ್ಲಿ ಸುಲಭವಾಗಿ ಮಾಡಬಹುದು. ಇಪಿಎಫ್ ಅಕೌಂಟ್ನಲ್ಲಿ ಬ್ಯಾಲನ್ಸ್ ಎಷ್ಟಿದೆ ಎಂದು ಪರಿಶೀಲಿಸುವುದರಿಂದ ಹಿಡಿದು, ತುರ್ತು ಸಂದರ್ಭದಲ್ಲಿ ಹಣ ಹಿಂಪಡೆಯುವವರೆಗೂ ವಿವಿಧ ಕಾರ್ಯಗಳನ್ನು ಮಾಡುವುದು ಸುಲಭವಾಗಿದೆ. ಇದೀಗ ಇಪಿಎಫ್ ಖಾತೆಯಿಂದ ವೈಯಕ್ತಿಕ ಅಗತ್ಯಗಳಿಗೆಂದು ಹಿಂಪಡೆಯಬಹುದಾದ ಹಣದ ಮಿತಿಯನ್ನು 50,000 ರೂನಿಂದ ಒಂದು ಲಕ್ಷ ರೂಗೆ ಹೆಚ್ಚಿಸಲಾಗಿದೆ. ಈ ವಿಷಯವನ್ನು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ತಿಳಿಸಿದ್ದಾರೆ.
‘ಮದುವೆ, ವೈದ್ಯಕೀಯ ಚಿಕಿತ್ಸೆ ಇತ್ಯಾದಿಗೆ ಜನರು ಇಪಿಎಫ್ ಖಾತೆಯತ್ತ ನೋಡುವುದುಂಟು. ಆದ್ದರಿಂದ ಒಮ್ಮೆಗೆ ವಿತ್ಡ್ರಾ ಮಾಡಬಹುದಾದ ಇಪಿಎಫ್ ಹಣದ ಮಿತಿಯನ್ನು ಒಂದು ಲಕ್ಷ ರೂಗೆ ಏರಿಸಿದ್ದೇವೆ,’ ಎಂದು ಸಚಿವರು ಹೇಳಿದ್ದಾರೆ. ಈ ಹಿಂದೆ ಇದ್ದ 50,000 ರೂ ಮಿತಿಯು ಈಗಿನ ಖರ್ಚುವೆಚ್ಚಗಳಿಗೆ ಸಾಕಾಗುವುದಿಲ್ಲವಾದ್ದರಿಂದ ಮಿತಿ ಏರಿಕೆ ಮಾಡಲಾಗಿದೆಯಂತೆ.
ಇದನ್ನೂ ಓದಿ: 30,000 ರೂ ಸಂಬಳ ಪಡೆಯುತ್ತಿರುವವರು ಇಪಿಎಫ್ನಲ್ಲಿ 1 ಕೋಟಿ ಕೂಡಿಡಲು ಎಷ್ಟು ವರ್ಷ ಬೇಕು?
ಇಪಿಎಫ್ ಖಾತೆಗಳನ್ನು ನಿಭಾಯಿಸುವ ಇಪಿಎಫ್ಒ ಸಂಸ್ಥೆ ಕಾರ್ಮಿಕ ಸಚಿವಾಲಯದ ಅಡಿಗೆ ಬರುತ್ತದೆ. ವಿತ್ಡ್ರಾಯಲ್ ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಿದ್ದೂ ಒಳಗೊಂಡಂತೆ ಇನ್ನೂ ಹಲವು ಬದಲಾವಣೆಗಳನ್ನು ಸಚಿವಾಲಯವು ಜಾರಿಗೆ ತಂದಿದೆ. ಇಪಿಎಫ್ ಖಾತೆ ನಿರ್ವಹಣೆ ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯಾಗಿಸಲು ಸಹಕಾರಿಯಾಗುವ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ಹೊಸ ಡಿಜಿಟಲ್ ಫ್ರೇಮ್ವರ್ಕ್ ರಚಿಸಿದೆ.
ಉದ್ಯೋಗಿ ಆರು ತಿಂಗಳು ಸರ್ವಿಸ್ ಮಾಡಿರಲೇಬೇಕಿಲ್ಲ…
ಇಪಿಎಫ್ ಅಕೌಂಟ್ನಿಂದ ಹಣ ಹಿಂಪಡೆಬೇಕಾದರೆ ಉದ್ಯೋಗಿಯು ಹಾಲಿ ಕೆಲಸದಲ್ಲಿ ಕನಿಷ್ಠ 6 ತಿಂಗಳಾದರೂ ಸರ್ವಿಸ್ ಮಾಡಿರಬೇಕು ಎಂಬ ಷರತ್ತು ಇದೆ. ಸರ್ಕಾರ ಈಗ ಈ ನಿರ್ಬಂಧವನ್ನು ತೆಗೆದುಹಾಕಿದೆ. ಕೆಲಸಕ್ಕೆ ಸೇರಿ ಒಂದೆರಡು ತಿಂಗಳಲ್ಲೇ ಅಗತ್ಯಬಿದ್ದರೆ ಹಣ ಹಿಂಪಡೆಯಬಹುದು.
ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳ ಇಪಿಎಫ್ ಖಾತೆ
ಇಪಿಎಫ್ ಎಂಬುದು ಉದ್ಯೋಗಿಗಳ ರಿಟೈರ್ಮೆಂಟ್ಗೆ ಸಹಾಯವಾಗಲೆಂದು ಸರ್ಕಾರ ರೂಪಿಸಿರುವ ಯೋಜನೆ. ಸಂಘಟಿತ ವಲಯದಲ್ಲಿರುವ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಇಪಿಎಫ್ ಖಾತೆ ಹೊಂದಿದ್ದಾರೆ. ಉದ್ಯೋಗಿಯ ಸಂಬಳದಿಂದ ಶೇ. 12 ಮತ್ತು ಕಂಪನಿ ವತಿಯಿಂದ ಶೇ. 12ರಷ್ಟು ಹಣವು ಇಪಿಎಫ್ ಖಾತೆಗೆ ಜಮೆ ಆಗುತ್ತದೆ. ಸರ್ಕಾರವು ಪ್ರತೀ ವರ್ಷ ನಿರ್ದಿಷ್ಟ ಬಡ್ಡಿ ಹಣವನ್ನು ಈ ಖಾತೆಗೆ ತುಂಬಿಸುತ್ತದೆ. 2023-24ರ ಹಣಕಾಸು ವರ್ಷದಲ್ಲಿ ಸರ್ಕಾರ ಶೇ. 8.25ರಷ್ಟು ಬಡ್ಡಿ ನೀಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ