ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್

ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್

ಝಾಹಿರ್ ಯೂಸುಫ್
|

Updated on: Sep 19, 2024 | 1:09 PM

Caribbean Premier League 2024: ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್​) ನಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ದಾಖಲೆ ಟ್ರಿನ್​​ಬಾಗೊ ನೈಟ್ ರೈಡರ್ಸ್ ತಂಡದ ಆಟಗಾರ ಶಕ್ಕೆರೆ ಪ್ಯಾರಿಸ್ ಹೆಸರಿಗೆ ಸೇರ್ಪಡೆಯಾಗಿದೆ. ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ 124 ಮೀಟರ್ ಸಿಕ್ಸ್ ಸಿಡಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 19ನೇ ಪಂದ್ಯದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಶಕ್ಕೆರೆ ಪ್ಯಾರಿಸ್ ಎಲ್ಲರ ಗಮನ ಸೆಳೆದಿದ್ದಾರೆ. ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಮತ್ತು ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟಿಕೆಆರ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ರೊಮಾರಿಯೊ ಶೆಫರ್ಡ್ 24 ಎಸೆತಗಳಲ್ಲಿ 4 ಸಿಕ್ಸ್​ಗಳೊಂದಿಗೆ 51 ರನ್​ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 148 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಟ್ರಿನ್​ಬಾಗೊ ನೈಟ್ ರೈಡರ್ಸ್ ಶಕ್ಕೆರೆ ಪ್ಯಾರಿಸ್ ಉತ್ತಮ ಆರಂಭ ಒದಗಿಸಿದ್ದರು. ಅದರಲ್ಲೂ ಗುಡಾಕೇಶ್ ಮೋಟಿ ಎಸೆದ ಮೂರನೇ ಓವರ್​ನ ಐದನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ್ದರು. 124 ಮೀಟರ್​ಗಳ ಈ ಸಿಕ್ಸ್​ನೊಂದಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಅತೀ ದೂರದ ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಶಕ್ಕೆರೆ ಪ್ಯಾರಿಸ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ 149 ರನ್​ಗಳನ್ನು ಬೆನ್ನತ್ತಿದ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು 19.2 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.