IND vs BAN: ಟೀಮ್ ಇಂಡಿಯಾಗೆ ಆರಂಭಿಕ ಆಘಾತ ನೀಡಿದ ಬಾಂಗ್ಲಾದೇಶ್
India vs Bangladesh, 1st Test: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುತ್ತಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಯುವ ವೇಗಿ ಹಸನ್ ಮಹಮೂದ್ 6ನೇ ಓವರ್ನಲ್ಲೇ ಮೊದಲ ಆಘಾತ ನೀಡಿದರು.
ಮೊದಲು ರೋಹಿತ್ ಶರ್ಮಾ (6) ವಿಕೆಟ್ ಪಡೆದ ಮಹಮೂದ್, ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (0) ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 6 ರನ್ಗಳಿಸಿ ಹಸನ್ ಮಹಮೂದ್ ಎಸೆತದಲ್ಲಿ ಕ್ಯಾಚ್ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು ಮೊದಲ 10 ಓವರ್ಗಳಲ್ಲಿ ಕೇವಲ 34 ರನ್ ನೀಡಿ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಯಿತು.
ಯಶಸ್ವಿ ಜೊತೆಯಾಟ:
ಈ ಹಂತದಲ್ಲಿ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ರನ್ ಗಳಿಕೆಯ ವೇಗವನ್ನು ಹೆಚ್ಚಿಸುವ ಮೂಲಕ ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡುವ ಕಾಯಕಕ್ಕೆ ಕೈ ಹಾಕಿದರು.
ಅದರಂತೆ ಮೊದಲ ಸೆಷನ್ ಮುಕ್ತಾಯದ ವೇಳೆಗೆ ರಿಷಭ್ ಪಂತ್ ಕೇವಲ 44 ಎಸೆತಗಳಲ್ಲಿ 33 ರನ್ ಕಲೆಹಾಕಿದರೆ, ಯಶಸ್ವಿ ಜೈಸ್ವಾಲ್ 67 ಎಸೆತಗಳಲ್ಲಿ 37 ರನ್ ಬಾರಿಸಿದ್ದಾರೆ. ಈ ಮೂಲಕ ಭೋಜನಾ ವಿರಾಮದ ವೇಳೆಗೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು 88 ರನ್ ಕಲೆಹಾಕಿದೆ. ಸದ್ಯ 54 ರನ್ಗಳ ಜೊತೆಯಾಟದೊಂದಿಗೆ ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಕಾಯ್ದುಕೊಂಢಿದ್ದಾರೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್ , ರಿಷಭ್ ಪಂತ್ (ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್ , ಜಸ್ಪ್ರೀತ್ ಬುಮ್ರಾ , ಆಕಾಶ್ ದೀಪ್ , ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಮೊಹಮ್ಮದ್ ನಬಿ
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮನ್ ಇಸ್ಲಾಂ , ಝಾಕಿರ್ ಹಸನ್ , ನಜ್ಮುಲ್ ಹೊಸೈನ್ ಶಾಂತೊ (ನಾಯಕ) , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಶಾಕಿಬ್ ಅಲ್ ಹಸನ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಮೆಹಿದಿ ಹಸನ್ ಮಿರಾಝ್, ತಸ್ಕಿನ್ ಅಹ್ಮದ್ , ಹಸನ್ ಮಹಮೂದ್ , ನಹಿದ್ ರಾಣಾ.
Published On - 11:33 am, Thu, 19 September 24