ನವದೆಹಲಿ: ದಿವಾಳಿ ಅಂಚಿಗೆ ಹೋಗಿ ಬೀಸೋ ದೊಣ್ಣೆಯಿಂದ ಸದ್ಯ ಪಾರಾಗಿರುವ ಗೋ ಫಸ್ಟ್ ಏರ್ಲೈನ್ ಸಂಸ್ಥೆ (Go First Airline) ಈಗ ತನ್ನ ಪುನಶ್ಚೇತನ ಯಾವ ರೀತಿ ಆಗಬೇಕು ಎಂಬ ಯೋಜನೆಯನ್ನು ತ್ವರಿತವಾಗಿ ರೂಪಿಸಬೇಕಿದೆ. 30 ದಿನದೊಳಗೆ ಗೋ ಫಸ್ಟ್ ತನ್ನ ಪ್ಲಾನ್ ಸಲ್ಲಿಸಬೇಕು ಎಂದು ವಿಮಾನಯಾನ ಮಹಾನಿರ್ದೇಶನಾಲಯ (DGCA) ತಿಳಿಸಿದೆ. ಇದರ ಬೆನ್ನಲ್ಲೇ ಗೋ ಫಸ್ಟ್ ಏರ್ಲೈನ್ ಸಂಸ್ಥೆ ಮೇ 28ರವರೆಗೂ ತನ್ನ ಎಲ್ಲಾ ವಿಮಾನ ಹಾರಾಟ ಸೇವೆಯನ್ನು ನಿಲ್ಲಿಸಿದೆ. ಈ ಮೊದಲು ಮೇ 26ರವರೆಗೆ ಫ್ಲೈಟ್ ಹಾರಾಟ ಇರುವುದಿಲ್ಲ ಎಂದು ಹೇಳಿತ್ತು. ಈಗ ಇನ್ನೂ ಎರಡು ದಿನ ಅದನ್ನು ವಿಸ್ತರಿಸಿದೆ. ಕಾರ್ಯಾಚರಣೆ ಸಮಸ್ಯೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮೇ 28ರವರೆಗಿನ ದಿನಗಳಲ್ಲಿ ಗೋ ಫಸ್ಟ್ ಫ್ಲೈಟ್ ಬುಕ್ ಮಾಡಿದ ಎಲ್ಲಾ ಗ್ರಾಹಕರಿಗೂ ಅವರ ಹಣ ಮರಳಿಸಲಾಗುವುದು ಎಂದು ವಿಮಾನ ಸಂಸ್ಥೆ ತಿಳಿಸಿದೆ. ಅಲ್ಲದೇ, ವಿಮಾನ ಟಿಕೆಟ್ ಬುಕ್ ಮಾಡಿದವರಿಗೆ ಅವರ ಪ್ರಯಾಣ ಯೋಜನೆಗಳಲ್ಲಿ ವ್ಯತ್ಯಯವಾಗುವುದು ತಮಗೆ ಅರಿವಿದೆ. ಸಾಧ್ಯವಾಗಿರುವ ಎಲ್ಲಾ ನೆರವನ್ನೂ ಒದಗಿಸಲು ಬದ್ಧರಾಗಿದ್ದೇವೆ ಎಂದು ಹೇಳಿರುವ ಸಂಸ್ಥೆ, ತಾನು ಆರ್ಥಿಕ ಪುನಶ್ಚೇತನಕ್ಕೆ ಇನ್ಸಾಲ್ವೆನ್ಸಿ ಅರ್ಜಿ ಹಾಕಿದ್ದು, ಸಾಧ್ಯವಾದಷ್ಟು ಬೇಗ ಬುಕಿಂಗ್ ಸ್ವೀಕರಿಸಲು ಸಾಧ್ಯವಾಗಬಹುದು ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: US Indians: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ಎಷ್ಟು? 2 ತಿಂಗಳೊಳಗೆ ಬೇರೆ ಕೆಲಸ ಗಿಟ್ಟಿಸಿಕೊಳ್ಳದಿದ್ದರೆ ಗತಿ ಏನು?
ಇನ್ಸಾಲ್ವೆನ್ಸಿ ಪ್ರಕ್ರಿಯೆ ಸಂಬಂಧ ಗೋ ಫಸ್ಟ್ ಸಂಸ್ಥೆಗೆ ಸಹಾಯ ಮಾಡಲು ವಿಮಾನಯಾನ ಮಹಾನಿರ್ದೇಶನಾಲಯ ಮುಂದಾಗಿದೆ. ವಿಮಾನಗಳು, ಪೈಲಟ್, ಮೈಂಟೆನೆನ್ಸ್ ಸೇರಿದಂತೆ ವಿಮಾನ ಸಂಸ್ಥೆ ಮತ್ತೆ ಚೇತರಿಸಿಕೊಳ್ಳಲು ಏನೇನು ಮಾಡಬಹುದು ಎಂಬುದರ ಪ್ಲಾನ್ ಅನ್ನು 30 ದಿನದೊಳಗೆ ತನಗೆ ಸಲ್ಲಿಸುವಂತೆ ಡಿಜಿಸಿಎ ಸೂಚಿಸಿದೆ.
ಮೇ 3ರಂದು ಗೋ ಫಸ್ಟ್ ಏರ್ಲೈನ್ ಸಂಸ್ಥೆ ದಿಢೀರ್ ಆಗಿ ತನ್ನ ಫ್ಲೈಟ್ ಬುಕಿಂಗ್ ನಿಲ್ಲಿಸಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತು. ಅರ್ಧದಷ್ಟು ವಿಮಾನಗಳು ಎಂಜಿನ್ ವೈಫಲ್ಯದಿಂದ ಕೆಟ್ಟು ನಿಂತಿವೆ. ಇದರಿಂದ ತಮಗೆ ಭಾರೀ ನಷ್ಟವಾಗಿದೆ. ತನಗೆ ವಿಮಾನಗಳನ್ನು ಗುತ್ತಿಗೆ ಕೊಟ್ಟಿರುವ ಸಂಸ್ಥೆಗಳು ಸಹಾಯ ಮಾಡುತ್ತಿಲ್ಲ. ಕಂಪನಿ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದೆ. ಈ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡಿ ಎಂದು ಗೋ ಫಸ್ಟ್ ತನ್ನ ಇನ್ಸಾಲ್ವೆನ್ಸಿ ಅರ್ಜಿಯಲ್ಲಿ ಮನವಿ ಮಾಡಿತ್ತು.