ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ

Govt considers proposal to increase allocation of LPG to 70pc: ಕೇಂದ್ರ ಸರ್ಕಾರ ಎಲ್​ಪಿಜಿ ಹಂಚಿಕೆಯನ್ನು ಮತ್ತಷ್ಟು ಹೆಚ್ಚಿಸಲು ಯೋಜಿಸಿದೆ. ಹೆಚ್ಚುವರಿ ಶೇ. 20ರಷ್ಟು ಎಲ್​ಪಿಜಿ ಹಂಚಿಕೆ ಮಾಡಲಿದೆ. ಎಲ್​ಪಿಜಿ ಬಿಕ್ಕಟ್ಟು ಮುಂದುವರಿಯುತ್ತಿರುವಂತೆಯೇ ಗ್ಯಾಸ್ ಬಳಕೆ ಅಗತ್ಯ ಇರುವ ಉದ್ದಿಮೆಗಳಿಗೆ ರಿಲೀಫ್ ಸಿಕ್ಕಂತಾಗಿದೆ. ಪಿಎನ್​ಜಿ ಬಳಕೆ ಸಾಧ್ಯವಿಲ್ಲದ, ಎಲ್​ಪಿಜಿ ಬಳಕೆ ಅಗತ್ಯ ಇರುವ ಉದ್ಯಮಗಳಿಗೆ ಇವುಗಳನ್ನು ಪೂರೈಸಲಾಗುತ್ತದೆ.

ಗೃಹೇತರ ಬಳಕೆಯ ಎಲ್​ಪಿಜಿ, ಹೆಚ್ಚುವರಿ ಶೇ. 20 ಹಂಚಿಕೆ; ಒಟ್ಟು ಪೂರೈಕೆ ಶೇ. 70ಕ್ಕೆ ಏರಿಕೆ
ಕೈಗಾರಿಕಾ ಎಲ್​ಪಿಜಿ
Image Credit source: A One Gas

Updated on: Mar 27, 2026 | 1:16 PM

ನವದೆಹಲಿ, ಮಾರ್ಚ್ 27: ಹಾರ್ಮುಜ್ ಜಲಸಂಧಿಯಿಂದ ಎಲ್​ಪಿಜಿ ಹೊತ್ತು ಒಂದೊಂದೇ ಭಾರತೀಯ ಎಲ್​ಪಿಜಿ ಟ್ಯಾಂಕರ್​ಗಳು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅನಿಲ ಕೊರತೆಯ ಸಮಸ್ಯೆ ಸ್ವಲ್ಪ ಕಡಿಮೆ ಆಗಿದೆ. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತಿತರ ಗೃಹೇತರ ಕ್ಷೇತ್ರಗಳಿಗೆ ಎಲ್​ಪಿಜಿ ಪೂರೈಕೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದೆ. ಪೆಟ್ರೋಲಿಯಂ ಸಚಿವಾಲಯ ಇವತ್ತು ಹೊರಡಿಸಿದ ಪ್ರಕಟಣೆಯಲ್ಲಿ ಗೃಹೇತರ ಎಲ್​ಪಿಜಿ ಹಂಚಿಕೆಯನ್ನು ಶೇ. 20ರಷ್ಟು ಹೆಚ್ಚಿಸುವ ಪ್ರಸ್ತಾವ ಇರುವುದಾಗಿ ತಿಳಿಸಿದೆ. ಈ ಹೆಚ್ಚುವರಿ ಶೇ. 20 ಅನ್ನು ನಿರ್ದಿಷ್ಟ ಕ್ಷೇತ್ರಗಳಿಗೆ ಉದ್ದೇಶಿಸಿ ಹಂಚಿಕೆ ಮಾಡಲಾಗುತ್ತಿದೆ.

ಇದರೊಂದಿಗೆ, ಸರ್ಕಾರವು ಗೃಹೇತರ ಎಲ್​ಪಿಜಿ ಹಂಚಿಕೆಯ ಮಟ್ಟ ಶೇ. 70ಕ್ಕೆ ಏರಿದೆ. ಅಂದರೆ, ಬಿಕ್ಕಟ್ಟು ಶುರುವಾಗುವ ಮುನ್ನ ಮಾಡಲಾಗುತ್ತಿದ್ದ ಹಂಚಿಕೆಗೆ ಹೋಲಿಸಿದರೆ, ಅದರ ಶೇ. 70ರ ಪೂರೈಕೆ ಮಟ್ಟ ಮುಟ್ಟಲಾಗಿದೆ. ಬಿಕ್ಕಟ್ಟು ಉದ್ಭವವಾದಾಗ ಸರ್ಕಾರವು ಹಂಚಿಕೆಯನ್ನು ಶೇ. 40ಕ್ಕೆ ಮೊಟಕುಗೊಳಿಸಿತ್ತು. ನಂತರ, ಪಿಎನ್​ಜಿ ಸೌಕರ್ಯ ಅಭಿವೃದ್ಧಿಗೆ ಮುಂದಾಗುವ ರಾಜ್ಯಗಳಿಗೆ ಹಂಚಿಕೆಯನ್ನು ಶೇ. 10ರಷ್ಟು ಹೆಚ್ಚಿಸಿತು. ಇದೀಗ ಹೆಚ್ಚುವರಿ ಶೇ. 20 ಅನ್ನು ಹಂಚಿಕೆ ಮಾಡಿದೆ.

ಹೆಚ್ಚುವರಿ ಶೇ. 20 ಎಲ್​ಪಿಜಿ ಈ ಕ್ಷೇತ್ರಗಳಿಗೆ ಸಲ್ಲಿಕೆ

ನೈಸರ್ಗಿಕ ಅನಿಲ ಬಳಕೆ ಸಾಧ್ಯವಿಲ್ಲದ, ಮತ್ತು ಎಲ್​ಪಿಜಿ ಬಳಕೆ ಅನಿವಾರ್ಯವಾಗಿರುವ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಎಲ್​ಪಿಜಿ ಹಂಚಿಕೆ ಮಾಡಲಾಗಿದೆ. ಕಾರ್ಮಿಕರು ಹೆಚ್ಚು ಇರುವ ಮತ್ತು ಇತರ ಉದ್ದಿಮೆಗಳಿಗೆ ಪೂರಕವಾಗಿರುವಂತಹ ಉಕ್ಕು, ಆಟೊಮೊಬೈಲ್, ಟೆಕ್ಸ್​ಟೈಲ್ ಡೈ, ಕೆಮಿಕಲ್, ಪ್ಲಾಸ್ಟಿಕ್ ಉದ್ಯಮಗಳಿಗೆ ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಎಲ್​ಪಿಜಿ ಅತ್ಯಗತ್ಯವಾಗಿರುವ ಕೈಗಾರಿಕೆಗಳಿಗೆ ಮೊದಲ ಪ್ರಾಶಸ್ತ್ಯ ಇರುತ್ತದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿಮೆಗೊಂಡರೂ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಆಗಲ್ಲ ಇಳಿಕೆ; ಏನು ಕಾರಣ?

ಎಲ್​ಪಿಜಿಗೂ ಪೈಪ್ಡ್ ಗ್ಯಾಸ್​ಗೂ ಏನು ವ್ಯತ್ಯಾಸ?

ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಮತ್ತು ಎಲ್​ಎನ್​ಜಿ ನೈಸರ್ಗಿಕ ಅನಿಲಗಳಾಗಿವೆ. ಇವುಗಳ ಅರ್ಧಕ್ಕಿಂತ ಹೆಚ್ಚು ಉತ್ಪಾದನೆ ಸ್ಥಳೀಯವಾಗಿ ಆಗುತ್ತದೆ. ಆಮದು ಮೇಲಿನ ಅವಲಂಬನೆ ಕಡಿಮೆ. ಅತ್ತ, ಎಲ್​ಪಿಜಿ ಪೆಟ್ರೋಲಿಯಂ ಅನಿಲವಾಗಿದೆ. ಇದರ ಅಗತ್ಯದಲ್ಲಿ ಹೆಚ್ಚಿನದನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಅದರಲ್ಲೂ ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಹೆಚ್ಚು. ಈಗ ಗಲ್ಫ್​ನಲ್ಲೇ ಬಿಕ್ಕಟ್ಟು ಉದ್ಭವವಾಗಿರುವುದರಿಂದ ಭಾರತಕ್ಕೆ ಎಲ್​ಪಿಜಿ ಸಂಕಟ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us