
ನವದೆಹಲಿ, ಏಪ್ರಿಲ್ 10: ಹೆದ್ದಾರಿಗಳಲ್ಲಿರುವ ಟೋಲ್ ಬೂತ್ಗಳಲ್ಲಿ ನೂರಕ್ಕೆ ನೂರು ಫಾಸ್ಟ್ಯಾಗ್ (FASTag) ಕಡ್ಡಾಯ ಮಾಡಲಾಗಿದೆ. ಇವತ್ತಿನಿಂದಲೇ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ (Digital toll collection system) ಜಾರಿಯಾಗಿದೆ. ದೇಶಾದ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಇರುವ ಟೋಲ್ ಬೂತ್ಗಳಲ್ಲಿ ಫಾಸ್ಟ್ಯಾಗ್ ಮೂಲಕವೇ ವಾಹನಗಳು ಟೋಲ್ ಪಾವತಿಸಬೇಕು. ಫಾಸ್ಟ್ಯಾಗ್ ಇಲ್ಲದವರು ಟೂಲ್ ಬೂತ್ಗಳಲ್ಲಿ ಕ್ಯಾಷ್ ನೀಡಿ ಪಾವತಿಸುವ ಅವಕಾಶ ನಿನ್ನೆಯೇ ಮುಕ್ತಾಯಗೊಂಡಿದೆ.
ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಬೂತ್ಗಳಲ್ಲಿ ವಾಹನದಟ್ಟನೆ ಹೆಚ್ಚುತ್ತಿರುವುದು ಗಮನಕ್ಕೆ ಬಂದಿತ್ತು. ಟೋಲ್ ಬೂತ್ಗಳಲ್ಲಿ ಈ ವಾಹನದಟ್ಟನೆ ಕಡಿಮೆ ಮಾಡಲು, ಕಾಯುವಿಕೆ ಅವಧಿ ಕಡಿಮೆ ಮಾಡಲು ಮತ್ತು ವಾಹನ ಸಂಚಾರವನ್ನು ಸುಗಮಗೊಳಿಸಲು ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪೂರ್ಣ ಮಟ್ಟದಲ್ಲಿ ಡಿಜಿಟಲ್ ಟೋಲ್ ಕಲೆಕ್ಷನ್ ಸಿಸ್ಟಂ ಅನ್ನು ಅನುಷ್ಠಾನಕ್ಕೆ ತಂದಿದೆ.
ಇದನ್ನೂ ಓದಿ: AMFI data: ಮಾರ್ಚ್ನಲ್ಲಿ ಈಕ್ವಿಟಿ ಫಂಡ್ಗಳಿಗೆ ಹೂಡಿಕೆ ಸುಗ್ಗಿ; ಶೇ. 55ರಷ್ಟು ಹೆಚ್ಚಿದ ಒಳಹರಿವು
ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಅಳವಡಿಸಿಕೊಳ್ಳಬೇಕಾಗುತ್ತದೆ. ಫಾಸ್ಟ್ಯಾಗ್ ಅಳವಡಿಕೆ ಆಗಿದ್ದೂ ಅದು ಸಕ್ರಿಯವಾಗಿಲ್ಲದಿದ್ದರೆ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ವಾಹನ ಸವಾರರು ಕ್ಯಾಷ್ ಮೂಲಕ ಟೋಲ್ ಪೇಮೆಂಟ್ ಮಾಡುತ್ತಿದ್ದರು? ಈಗ ಕ್ಯಾಷ್ ಪೇಮೆಂಟ್ಗೆ ಅವಕಾಶ ಇಲ್ಲದಿರುವಾಗ ಏನು ಮಾಡಬೇಕು? ಆಗ ಕ್ಯಾಷ್ ಬದಲು ಯುಪಿಐ ಅಥವಾ ಇತರ ಡಿಜಿಟಲ್ ವಿಧಾನಗಳಿಂದ ಟೋಲ್ ಪೇಮೆಂಟ್ ಮಾಡಬಹುದು. ಇದಕ್ಕೆ ಹೆಚ್ಚಿನ ಟೋಲ್ ವಿಧಿಸಲಾಗುತ್ತದೆ. ಶೇ. 125ರಷ್ಟು ಟೋಲ್ ಕಟ್ಟಬೇಕಾಗುತ್ತದೆ. ಅಂದರೆ, 100 ರೂ ಇರುವ ಟೋಲ್ಗೆ 125 ರೂ ಪಾವತಿಸಬೇಕಾಗುತ್ತದೆ.
ಟೋಲ್ ಬೂತ್ಗಳಲ್ಲಿ ವಿವಿಧ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರು ಹೇಳಿಕೊಂಡು ಬಹಳ ಜನರು ಟೋಲ್ ಕಟ್ಟುವುದಿಲ್ಲ. ಸಾಕಷ್ಟು ಕಡೆ ಮಾರಾಮಾರಿಯೇ ಆಗಿ ಹೋಗಿ ಸಾವುನೋವುಗಳು ಸಂಭವಿಸಿರುವುದಿದೆ. ಇದನ್ನು ತಪ್ಪಿಸಲು ಈಗ ಸರ್ಕಾರ ಬಿಗಿ ನಿಯಮ ತಂದಿದೆ. ಯಾವುದೇ ವ್ಯಕ್ತಿಗಳಿಗೆ ಟೋಲ್ ಎಕ್ಸೆಂಪ್ಷನ್ ಸಿಗುವುದಿಲ್ಲ. ನಿರ್ದಿಷ್ಟಪಡಿಸಿದ ವಾಹನಗಳಿಗೆ ಮಾತ್ರವೇ ಈ ವಿನಾಯಿತಿ ಕೊಡಲಾಗುತ್ತದೆ.
ಇದನ್ನೂ ಓದಿ: ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು
ಹೆದ್ದಾರಿಗಳನ್ನು ಸಾಕಷ್ಟು ಬಳಸುವವರಿಗೆ, ಅಂದರೆ ನಿಯಮಿತವಾಗಿ ಹೆದ್ದಾರಿ ಬಳಸುವವರಿಗೆ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನುಕೂಲವಾಗಲಿದೆ. ಖಾಸಗಿ ಕಾರುಗಳಿಗೆ ಈ ವಾರ್ಷಿಕ ಪಾಸ್ ನೀಡಲಾಗುತ್ತದೆ. ವರ್ಷದಲ್ಲಿ 200 ಟೋಲ್ ಕ್ರಾಸಿಂಗ್ ಮಾಡಬಹುದು. ಈ ಪಾಸ್ ಬೆಲೆ 3,000 ರೂ ಇದ್ದದ್ದು 3,075ಕ್ಕೆ ಏರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ