ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯು ಡಿಸೆಂಬರ್ನಲ್ಲಿ ವರ್ಚುವಲ್ ಆಗಿ ಸಭೆ ಸೇರಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮಂಡಳಿಯ 48ನೇ ಸಭೆ ಡಿಸೆಂಬರ್ 17ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಜಿಎಸ್ಟಿ ಮಂಡಳಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಶುಕ್ರವಾರವಷ್ಟೇ ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಮುಂದಿನ ಸಭೆಯ ಬಗ್ಗೆ ಮಂಡಳಿ ಮಾಹಿತಿ ನೀಡಿದೆ.
ಕ್ಯಾಸಿನೋಗಳು, ಆನ್ಲೈನ್ ಗೇಮಿಂಗ್ ಹಾಗೂ ಕುದುರೆ ರೇಸಿಂಗ್ಗಳ ಮೇಲೆ ಜಿಎಸ್ಟಿ ಪ್ರಮಾಣ ಹೆಚ್ಚಿಸುವಂತೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ವರದಿ ಸಿದ್ಧಪಡಿಸಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಈ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ. ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪಿಸುವ ಕುರಿತೂ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಜಿಎಸ್ಟಿ ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತಿರುವ ಕೆಲವು ನಿಯಮಗಳನ್ನು ಸಡಿಲಿಸುವ ಬಗ್ಗೆ ಅಧಿಕಾರಿಗಳು ಸಲ್ಲಿಸಿರುವ ವರದಿಯ ಪರಾಮರ್ಶೆಯೂ ನಡೆಯಬಹುದು ಎನ್ನಲಾಗಿದೆ.
The 48th Meeting of the GST Council will be held on 17th December, 2022 by Video Conference .
— GST Council (@GST_Council) November 25, 2022
ಕರ್ನಾಟಕಕ್ಕೆ ಬಂತು 1,915 ಕೋಟಿ ರೂ. ಪರಿಹಾರ
ರಾಜ್ಯಗಳಿಗೆ ನೀಡಬೇಕಿದ್ದ ಜಿಎಸ್ಟಿ ಬಾಕಿ ಪರಿಹಾರದ ಹಣವನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿತ್ತು. ಕರ್ನಾಟಕಕ್ಕೆ 1,915 ಕೋಟಿ ರೂ. ಬಿಡುಗಡೆಯಾಗಿತ್ತು. ಕೇಂದ್ರ ಸರ್ಕಾರ 2022-23ರ ಸಾಲಿನಲ್ಲಿ ಈವರೆಗೆ 1,15,662 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಲ್ಲಿ ಈ ಬಾರಿಯ ಜಿಎಸ್ಟಿ ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರಕ್ಕೆ 2081 ಕೋಟಿ ರೂ, ಸಿಕ್ಕಿದ್ದರೆ, ನಂತರ ಸ್ಥಾನದಲ್ಲಿರುವ ರ್ನಾಟಕಕ್ಕೆ 1,915 ಕೋಟಿ ರೂ. ದೊರೆತಿದೆ.
ಚರ್ಚೆಯಾಗಲಿದೆಯೇ ಪೆಟ್ರೋಲ್, ಡೀಸೆಲ್ ತೆರಿಗೆ ವಿಚಾರ?
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಯಡಿ ತರಲು ಸರ್ಕಾರ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರಗಳು ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದರು. ಈ ವಿಚಾರವಾಗಿ ಜಿಎಸ್ಟಿ ಮಂಡಳಿಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆಯೇ ಎಂಬ ಕುತೂಹಲ ಇದೀಗ ಮೂಡಿದೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಬಹಳ ಕಡಿಮೆ ಎಂದಿವೆ ಮೂಲಗಳು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Sat, 26 November 22