ತೆರಿಗೆ ಅಧಿಕಾರಿಗಳ ಕಾಟ, ಕಾನೂನು ಭಯ ನಿವಾರಣೆ, ತ್ವರಿತ ರೀಫಂಡ್ ಇತ್ಯಾದಿ; ಜಿಎಸ್​ಟಿ ಕೌನ್ಸಿಲ್​ನಿಂದ ಸುಧಾರಣಾ ಕ್ರಮಗಳಿಗೆ ಅನುಮೋದನೆ

ವ್ಯಾಪಾರ ಮತ್ತು ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಜಿಎಸ್‌ಟಿ ಮಂಡಳಿ (GST Council) ಹಲವು ಪ್ರಮುಖ ಸುಧಾರಣೆಗಳಿಗೆ ಅಂಕಿತ ಹಾಕಿದೆ. ಅಧಿಕಾರಿಗಳ ಬಂಧನ ಅಧಿಕಾರಕ್ಕೆ ಕಡಿವಾಣ ಹಾಕುವುದು, ಪ್ರಾಸಿಕ್ಯೂಷನ್ ಮಿತಿಯನ್ನು ₹5 ಕೋಟಿಗೆ ಹೆಚ್ಚಿಸುವುದು ಇತ್ಯಾದಿಗೆ ಸಮ್ಮತಿಸಲಾಗಿದೆ. ಜಿಎಸ್​ಟಿ ನೊಂದಣಿ ಪ್ರಕ್ರಿಯೆ ಮತ್ತಷ್ಟು ಆಟೊಮೇಟೆಡ್ ಆಗಲಿರುವುದು, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಿಸ್ತರಿಸಲಿರುವುದು ಮುಂತಾದ ಕ್ರಮಗಳು ಜಾರಿಗೆ ಬರಲಿವೆ.

ತೆರಿಗೆ ಅಧಿಕಾರಿಗಳ ಕಾಟ, ಕಾನೂನು ಭಯ ನಿವಾರಣೆ, ತ್ವರಿತ ರೀಫಂಡ್ ಇತ್ಯಾದಿ; ಜಿಎಸ್​ಟಿ ಕೌನ್ಸಿಲ್​ನಿಂದ ಸುಧಾರಣಾ ಕ್ರಮಗಳಿಗೆ ಅನುಮೋದನೆ
ಜಿಎಸ್​ಟಿ ಕೌನ್ಸಿಲ್ ಸಭೆ
Image Credit source: PTI

Updated on: Oct 08, 2026 | 6:40 PM

ನವದೆಹಲಿ, ಅಕ್ಟೋಬರ್ 8: ಎಲ್ಲಾ ಮಟ್ಟದ ಉದ್ಯಮಗಳಿಗೆ ರಿಲೀಫ್ ಕೊಡುವಂತಹ ಹಲವು ಸುಧಾರಣಾ ಕ್ರಮಗಳಿಗೆ ಜಿಎಸ್​ಟಿ ಮಂಡಳಿ (GST Council) ಅಸ್ತು ಎಂದಿದೆ. 57ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಬಹಳ ಅಗತ್ಯ ಇರುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ತಪಾಸಣೆ ಮತ್ತು ಜಾರಿ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಅನಗತ್ಯ ಕ್ರಿಮಿನಲ್ ಕ್ರಮಗಳನ್ನು ತಡೆಯಲು ಹಾಗೂ ‘ವ್ಯಾಪಾರ ಸುಲಭಗೊಳಿಸುವಿಕೆ’ ವ್ಯವಸ್ಥೆ (Ease of Doing Business) ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಅಧಿಕಾರಿಗಳ ಬಂಧನ ಅಧಿಕಾರಕ್ಕೆ ಕಡಿವಾಣ

ಸಾಮಾನ್ಯ ಜಿಎಸ್‌ಟಿ ಕಾಯ್ದೆ ಉಲ್ಲಂಘನೆ ಅಥವಾ ತೆರಿಗೆ ಸಲ್ಲಿಕೆಯಲ್ಲಿನ ಸಣ್ಣಪುಟ್ಟ ಲೋಪದೋಷಗಳಿಗೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಕೈಗೊಳ್ಳುತ್ತಿದ್ದ ಹಠಾತ್ ‘ಬಂಧನ’ದ (Arrest Power) ಅಧಿಕಾರವನ್ನು ತೀವ್ರವಾಗಿ ಸೀಮಿತಗೊಳಿಸಲಾಗಿದೆ. ಕೇವಲ ನಕಲಿ ಇನ್‌ವಾಯ್ಸ್ (Fake Invoicing) ಮತ್ತು ಕ್ರಿಮಿನಲ್ ಸ್ವರೂಪದ ಭಾರಿ ತೆರಿಗೆ ವಂಚನೆ ಪ್ರಕರಣಗಳಲ್ಲಿ ಮಾತ್ರ ಬಂಧನ ಕ್ರಮಕ್ಕೆ ಅವಕಾಶವಿರಲಿದೆ.

ಪ್ರಾಸಿಕ್ಯೂಷನ್ ಮಿತಿ ₹5 ಕೋಟಿಗೆ ಏರಿಕೆ

ಜಿಎಸ್‌ಟಿ ಉಲ್ಲಂಘನೆಗಳ ಮೇಲೆ ಕ್ರಿಮಿನಲ್ ಪ್ರಾಸಿಕ್ಯೂಷನ್ (ಕೋರ್ಟ್ ಶಿಸ್ತುಕ್ರಮ/ಮೊಕದ್ದಮೆ) ಜರುಗಿಸಲು ಇದ್ದ ಪ್ರಸ್ತುತ ಹಣಕಾಸು ಮಿತಿಯನ್ನು (Prosecution Threshold) ಹೆಚ್ಚಿಸಲಾಗಿದೆ. ಪ್ರಾಸಿಕ್ಯೂಷನ್ ಆರಂಭಿಸಲು ಇದ್ದ ಮಿತಿಯನ್ನು ₹5 ಕೋಟಿಗೆ ಏರಿಸಲಾಗಿದ್ದು, ಇದರಿಂದ ಸಣ್ಣ ಉದ್ಯಮಿಗಳಿಗೆ ಅನಗತ್ಯ ಕೋರ್ಟ್ ಅಲೆದಾಟ ತಪ್ಪಲಿದೆ (ನಕಲಿ ಇನ್‌ವಾಯ್ಸ್ ಪ್ರಕರಣ ಹೊರತುಪಡಿಸಿ).

ಇದನ್ನೂ ಓದಿ: ಅಮೆಜಾನ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್; ಭಾರತವೂ ಸೇರಿ ಜಾಗತಿಕವಾಗಿ ಸಾವಿರ ನೌಕರರಿಗೆ ಹೋಯ್ತು ಕೆಲಸ

ತ್ವರಿತ ರಫ್ತು ಹಾಗೂ ತೆರಿಗೆ ರೀಫಂಡ್

ಉದ್ಯಮಿಗಳ ದುಡಿಮೆ ಬಂಡವಾಳ (Working Capital) ಆಟಕ್ಕುಂಟಾಗದಂತೆ ತಡೆಯಲು, ರಫ್ತುದಾರರು ಹಾಗೂ ಇನ್ವರ್ಟೆಡ್ ಡ್ಯೂಟಿ ಸ್ಟ್ರಕ್ಚರ್ ಹೊಂದಿರುವ ಕಂಪನಿಗಳಿಗೆ ಜಿಎಸ್‌ಟಿ ರೀಫಂಡ್ (Tax Refund) ಹಣವನ್ನು ಅತ್ಯಂತ ವೇಗವಾಗಿ ಮತ್ತು ತಂತ್ರಜ್ಞಾನ ಆಧಾರಿತವಾಗಿ ನೇರ ಖಾತೆಗೆ ಜಮಾ ಮಾಡುವ ವ್ಯವಸ್ಥೆಗೆ ಒಪ್ಪಿಗೆ ನೀಡಲಾಗಿದೆ.

ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳ ಪ್ರತ್ಯೇಕತೆ

ತೆರಿಗೆ ವಂಚನೆ ಮತ್ತು ಸಾಮಾನ್ಯ ಆಡಳಿತಾತ್ಮಕ ತಪ್ಪುಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಕಾಯ್ದುಕೊಳ್ಳಲು ಜಿಎಸ್‌ಟಿ ಕಾಯ್ದೆಯ ಹಲವು ಕಠಿಣ ಪ್ರಾಸಿಕ್ಯೂಷನ್ ಕಾಯ್ದೆಗಳನ್ನು ಅಪರಾಧ ಮುಕ್ತಗೊಳಿಸಲು (Decriminalise) ಜಿಎಸ್‌ಟಿ ಮಂಡಳಿ ಒಪ್ಪಿಗೆ ಸೂಚಿಸಿದೆ.

ಜಿಎಸ್​ಟಿ ನೊಂದಣಿ ಪ್ರಕ್ರಿಯೆ ಮತ್ತಷ್ಟು ಆಟೊಮೇಟ್

ಜಿಎಸ್​ಟಿ ನೊಂದಣಿ ಮತ್ತು ತಿದ್ದುಪಡಿ ವ್ಯವಸ್ಥೆಯನ್ನು ಮತ್ತಷ್ಟು ಆಟೊಮೇಟ್ ಮಾಡುವ ಪ್ರಸ್ತಾಪವನ್ನು ಜಿಎಸ್​ಟಿ ಮಂಡಳಿ ಮಾಡಿದೆ. ಸದ್ಯದ ವ್ಯವಸ್ಥೆಯಲ್ಲೂ ಕೂಡ ಕಡಿಮೆ ರಿಸ್ಕ್ ಇರುವ ಅರ್ಜಿದಾರರು ಅಧಿಕಾರಿಗಳ ಮಧ್ಯಪ್ರವೇಶದ ಅಗತ್ಯ ಇಲ್ಲದೆಯೇ ಕೇವಲ ಮೂರು ಕಾರ್ಯದಿನಗಳಲ್ಲಿ ಜಿಎಸ್​ಟಿ ರಿಜಿಸ್ಟ್ರೇಶನ್ ಪಡೆಯಬಹುದು. ಶೇ. 61ರಷ್ಟು ನೊಂದಣಿಗಳು ಈ ರೀತಿಯಲ್ಲೇ ಆಗುತ್ತಿವೆ. ಈಗ ಇನ್ನಷ್ಟು ಆಟೊಮೇಶನ್ ಮಾಡಲಾಗುತ್ತಿರುವುದು ವ್ಯವಸ್ಥೆ ಮತ್ತಷ್ಟು ಸುಲಭಗೊಳ್ಳಲಿದೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ವಿಸ್ತರಣೆ

ಎರಡೆರಡು ಬಾರಿ ಟ್ಯಾಕ್ಸ್ ಕಟ್ಟುವ ಸಂದರ್ಭದಲ್ಲಿ ಉದ್ಯಮಗಳಿಗೆ ನೀಡಲಾಗುತ್ತಿರುವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅಥವಾ ಐಟಿಸಿ ಸೌಲಭ್ಯವನ್ನು ಇನ್ನೂ ಹೆಚ್ಚಿನ ಕ್ಷೇತ್ರಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಉಚಿತ ಸ್ಯಾಂಪಲ್​ಗಳು ಹಾಗೂ ಅವಧಿಮೀರಿ ಹಾಳಾದ ಸರಕುಗಳಿಗೂ ಐಟಿಸಿ ಸೌಲಭ್ಯ ಹೊಂದಲು ಅವಕಾಶ ಕೊಡಲಾಗುತ್ತದೆ. ಇದು ಅನೇಕ ಉದ್ಯಮಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಇಲಾನ್ ಮಸ್ಕ್ ‘ಒಲಿಗಾರ್ಕ್’ ಆರೋಪಕ್ಕೆ ಭಾರತ ತಿರುಗೇಟು; ಸ್ಟಾರ್​ಲಿಂಕ್ ವಿಳಂಬಕ್ಕೆ ನಿಯಮಗಳೇ ಕಾರಣವಲ್ಲ ಎಂದ ಸರ್ಕಾರ

ಸಣ್ಣ ತೆರಿಗೆದಾರರಿಗೆ ವಾರ್ಷಿಕ ರಿಟರ್ನ್ ಸಲ್ಲಿಸುವ ಅವಕಾಶ

ಕೇವಲ ಗ್ರಾಹಕರಿಗೆ ಮಾತ್ರ ತಮ್ಮ ಸರಕುಗಳನ್ನು ಸರಬರಾಜು ಮಾಡುವ ಮತ್ತು ವರ್ಷಕ್ಕೆ 5 ಕೋಟಿ ರೂ ವರೆಗೂ ಟರ್ನೋವರ್ ಇರುವ ತೆರಿಗೆ ಪಾವತಿದಾರರಿಗೆ ವಾರ್ಷಿಕವಾಗಿ ರಿಟರ್ನ್ ಸಲ್ಲಿಸುವ ಅವಕಾಶ ಕೊಡಲು ಒಪ್ಪಲಾಗಿದೆ. ಇಂಥ ತೆರಿಗೆದಾರರು ತ್ರೈಮಾಸಿಕವಾಗಿ ತೆರಿಗೆ ಪಾವತಿಸಬೇಕಾದರೂ, ವರ್ಷಕ್ಕೆ ಒಮ್ಮೆ ಮಾತ್ರ ರಿಟರ್ನ್ ಫೈಲ್ ಮಾಡಿದರೆ ಸಾಕು. ಶೇ. 16ಕ್ಕೂ ಹೆಚ್ಚು ತೆರಿಗೆ ಪಾವತಿದಾರರು ಈ ವರ್ಗಕ್ಕೆ ಸೇರುತ್ತಾರೆ.

ಮತ್ತಷ್ಟು ಜಿಎಸ್​ಟಿ ಸುಧಾರಣೆಗಳಿವು ಗಮನಿಸಿ…

  • 10,000 ರೂಗಿಂತ ಕಡಿಮೆ ಟ್ಯಾಕ್ಸ್ ಇದ್ದರೆ ಡಿಮ್ಯಾಂಡ್ ನೋಟೀಸ್ ಬರೊಲ್ಲ.
  • ಸಾಮಾನ್ಯ ದಂಡ ಅಥವಾ ಪೆನಾಲ್ಟಿ ಹಣವನ್ನು 25,000 ರೂನಿಂದ 10,000 ರೂಗೆ ಇಳಿಸಲಾಗುತ್ತದೆ.
  • ಬಾಧ್ಯತೆ ಇರುವ ಟ್ಯಾಕ್ಸ್ ಅನ್ನು ಸ್ವಯಂ ಆಗಿ ಪಾವತಿ ಮಾಡಿದಲ್ಲಿ ಅದನ್ನು ಪೆನಾಲ್ಟಿ ಬದಲು ಶುಲ್ಕವೆಂದು ಪರಿಗಣಿಸಲಾಗುತ್ತದೆ.
  • ಜಿಎಸ್​ಟಿ ರೀಫಂಡ್ ಅಪ್ಲಿಕೇಶನ್​ಗಳ ಸ್ವೀಕೃತಿಯನ್ನು ಆಟೊ-ಜನರೇಟ್ ಮಾಡಲಾಗುತ್ತದೆ.
  • ಎಲೆಕ್ಟ್ರಾನಿಕ್ ಕ್ಯಾಷ್ ಲೆಡ್ಜರ್​ನಲ್ಲಿರುವ ಹೆಚ್ಚುವರಿ ಹಣವನ್ನು ಆಟೊಮ್ಯಾಟಿಕ್ ಆಗಿ ರೀಫಂಡ್ ಮಾಡಲಾಗುತ್ತದೆ.

ಈ ಹೊಸ ಸುಧಾರಣೆಗಳು ದೇಶೀಯ ಉದ್ಯಮಗಳಿಗೆ ಕಾನೂನು ಸುರಕ್ಷತೆಯನ್ನು ಒದಗಿಸಲಿದ್ದು, ಜಿಎಸ್‌ಟಿ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ನೆರವಾಗಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us