ಬೆಂಗಳೂರು: ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್ ಸೇರಿದಂತೆ ಜಾಗತಿಕ ಟೆಕ್ ದೈತ್ಯ ಕಂಪನಿಗಳೆಲ್ಲ ಉದ್ಯೋಗಿಗಳನ್ನು (Layoff) ವಜಾಗೊಳಿಸುತ್ತಿವೆ. ತಂತ್ರಜ್ಞಾನ ಕ್ಷೇತ್ರದ (Tech Companies) ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಸಂದರ್ಭದಲ್ಲೇ ಗುಜರಾತ್ನ ಟೆಕ್ ಕಂಪನಿಯೊಂದರ ಸಿಇಒ, ಆರಂಭದಿಂದಲೂ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಟೊಯೊಟಾ ಪ್ರೀಮಿಯಂ ಕಾರು ಉಡುಗೊರೆ ನೀಡಿ ಗಮನ ಸೆಳೆದಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ (Ahmedabad) ಪ್ರಧಾನ ಕಚೇರಿ ಹೊಂದಿರುವ ತ್ರಿದ್ಯಾ ಇನ್ಫೋಟೆಕ್ (Tridhya Infotech) ಕಂಪನಿಯ ಸಿಇಒ ರಮೇಶ್ ಮರಂದ್ (Ramesh Marand) ಕಂಪನಿಯಲ್ಲಿ ಆರಂಭದಿಂದಲೂ ಇರುವ 13 ಮಂದಿ ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದ್ದಾರೆ. ಉಳಿದ ಎಲ್ಲ ಉದ್ಯೋಗಿಗಳಿಗೂ ಉಡುಗೊರೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆರೋಗ್ಯ, ವಿಮೆ, ಚಿಲ್ಲರೆ ಮಾರಾಟ ಮತ್ತು ಇಂಧನ ಕ್ಷೇತ್ರಗಳಿಗೆ ಸಾಫ್ಟ್ವೇರ್ ಅಭಿವೃದ್ಧಿಪಡಿಸಿಕೊಡುವ ತ್ರಿದ್ಯಾ ಟೆಕ್ ಕಂಪನಿಯು ಏಷ್ಯಾ, ಯುರೋಪ್ ಹಾಗೂ ಆಸ್ಟ್ರೇಲಿಯಾದಲ್ಲಿ ಗ್ರಾಹಕರನ್ನು ಹೊಂದಿದೆ. ಉದ್ದಿಮೆಗಳಿಗೆ ತಂತ್ರಜ್ಞಾನದ ನೆರವನ್ನೂ ಕಂಪನಿ ಒದಗಿಸಿಕೊಡುತ್ತಿದೆ.
ಇದನ್ನೂ ಓದಿ: Pinterest Layoff: ಪಿಂಟ್ರೆಸ್ಟ್ನಿಂದಲೂ ಉದ್ಯೋಗ ಕಡಿತ; 150 ಮಂದಿ ವಜಾ
ಕಾರು ಉಡುಗೊರೆ ಪಡೆದ ಉದ್ಯೋಗಿಗಳು ಕಂಪನಿಯ ಆರಂಭದಿಂದಲೂ ನಮ್ಮ ಜತೆಗಿದ್ದಾರೆ. ಸ್ಥಿರವಾದ ಉದ್ಯೋಗವನ್ನು ಬಿಟ್ಟು ನಮ್ಮ ಸ್ಟಾರ್ಟಪ್ ಸೇರಿದ ಇವರೆಲ್ಲ ಕಂಪನಿಯ ಯಶಸ್ಸಿಗಾಗಿ ಕಠಿಣ ಪರಿಶ್ರಮ ವಹಿಸಿದ್ದಾರೆ ಮತ್ತು ಕಂಪನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಮೇಶ್ ಮರಂದ್ ತಿಳಿಸಿರುವುದಾಗಿ ‘ಆಜ್ತಕ್’ ವರದಿ ಮಾಡಿದೆ.
ರಮೇಶ್ ಮರಂದ್ ಅವರು ತ್ರಿದ್ಯಾ ಇನ್ಫೋಟೆಕ್ ಸಿಇಒ. ಉದ್ಯಮ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ 12 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ. ಬ್ರಿಟನ್ ಮೂಲದ ಸಾಫ್ಟ್ವೇರ್ ಉತ್ಪನ್ನ ಅಭಿವೃದ್ಧಿ ಕಂಪನಿ ಶಾಲಿಗ್ರಾಮ್ ಇನ್ಫೋಟೆಕ್ನ ಸಹಭಾಗಿತ್ವವನ್ನೂ ಹೊಂದಿದ್ದಾರೆ. ಲಿಂಕ್ಡ್ಇನ್ನಲ್ಲಿ 30,000 ಫಾಲೋವರ್ಗಳನ್ನು ಹೊಂದಿದ್ದಾರೆ. ‘ನನ್ನ ಕನಸನ್ನು ನನಸು ಮಾಡುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಈ ವಿಚಾರದಲ್ಲಿ ನಾನು ಸ್ವಾರ್ಥಿಯೂ ಹೌದು. ಆದರೆ, ನಾನು ಪ್ರಾಮಾಣಿಕ. ಗ್ರಾಹಕರಿಗೆ, ಸ್ನೇಹಿತರಿಗೆ ಬದ್ಧನಾಗಿರುವ ಮೊದಲು ನನಗಾಗಿ ಬದ್ಧತೆಯಿಂದಿರುತ್ತೇನೆ’ ಎಂದು ತಮ್ಮ ಬಗ್ಗೆ ಬರೆದುಕೊಂಡಿದ್ದಾರೆ.
ಉದ್ಯೋಗಿಗಳಿಗೆ ಕಂಪನಿಗಳು ಭಾರೀ ಉಡುಗೊರೆ ನೀಡಿರುವ ಬಗ್ಗೆ ಈ ಹಿಂದೆಯೂ ವರದಿಯಾಗಿವೆ. 2022ರ ಏಪ್ರಿಲ್ನಲ್ಲಿ ಚೆನ್ನೈ ಮೂಲದ ಐಟಿ ಕಂಪನಿ ‘ಐಡಿಯಾಸ್2ಐಟಿ’ ಉದ್ಯೋಗಿಗಳಿಗೆ 100 ಕಾರುಗಳನ್ನು ಉಡುಗೊರೆ ನೀಡಿತ್ತು. 10 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ ಉದ್ಯೋಗಿಗಳಿಗೆ ಉಡುಗೊರೆ ನೀಡಲಾಗಿತ್ತು.
Published On - 1:03 pm, Fri, 3 February 23