ಅಮೆರಿಕ ಇತಿಹಾಸದ ಅತಿದೊಡ್ಡ ರೀಫಂಡ್: ಟ್ರಂಪ್ ಸುಂಕದ ಹಣ ಇಂದಿನಿಂದ ವಾಪಸ್

US Begins Largest Tariff Refund in History: ಅಮೆರಿಕದ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತದ ತೆರಿಗೆ ಮರುಪಾವತಿ ಪ್ರಕ್ರಿಯೆ ಇಂದಿನಿಂದ (ಏಪ್ರಿಲ್ 20) ಆರಂಭವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಆಮದು ಸುಂಕಗಳನ್ನು (Tariffs) ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿಗಳಿಗೆ ಬರೋಬ್ಬರಿ 166 ಬಿಲಿಯನ್ ಡಾಲರ್ (ಸುಮಾರು 13.8 ಲಕ್ಷ ಕೋಟಿ ರೂ) ಹಣವನ್ನು ಮರಳಿ ನೀಡಲಾಗುತ್ತಿದೆ.

ಅಮೆರಿಕ ಇತಿಹಾಸದ ಅತಿದೊಡ್ಡ ರೀಫಂಡ್: ಟ್ರಂಪ್ ಸುಂಕದ ಹಣ ಇಂದಿನಿಂದ ವಾಪಸ್
ಡೊನಾಲ್ಡ್ ಟ್ರಂಪ್
Image Credit source: AP

Updated on: Apr 20, 2026 | 1:13 PM

ವಾಷಿಂಗ್ಟನ್, ಏಪ್ರಿಲ್ 20: ಅಮೆರಿಕದ ಸಾವಿರಾರು ಆಮದುದಾರರಿಗೆ (US importers) ಇಂದು ‘ಬಿಗ್ ಮಂಡೇ’. ಟ್ರಂಪ್ ಸರ್ಕಾರವು ವಿದೇಶಿ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಪ್ರಮಾಣದ ಸುಂಕವನ್ನು ಕಾನೂನುಬಾಹಿರ ಎಂದು ನ್ಯಾಯಾಲಯ (US Supreme Court) ತೀರ್ಪು ನೀಡಿದ ನಂತರ, ಇಂದಿನಿಂದ ಆ ಹಣವನ್ನು ಮರಳಿ ಪಡೆಯಲು ಆನ್‌ಲೈನ್ ಪೋರ್ಟಲ್ ಕಾರ್ಯಾರಂಭ ಮಾಡಿದೆ.

ಕಳೆದ ವರ್ಷ ಅಧ್ಯಕ್ಷ ಟ್ರಂಪ್ ಅವರು ಅಮೆರಿಕದ ವ್ಯಾಪಾರ ಕೊರತೆಯನ್ನು (ಟ್ರೇಡ್ ಡೆಫಿಸಿಟ್) ಕಡಿಮೆ ಮಾಡಲು ತುರ್ತು ಪರಿಸ್ಥಿತಿ ಅಧಿಕಾರವನ್ನು ಬಳಸಿ ಚೀನಾ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳ ಮೇಲೆ ಭಾರಿ ಆಮದು ಸುಂಕ ವಿಧಿಸಿದ್ದರು. ಆದರೆ, ಫೆಬ್ರವರಿ 2026 ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, “ತೆರಿಗೆ ವಿಧಿಸುವ ಅಧಿಕಾರ ಸಂಸತ್ತಿಗೆ (Congress) ಇದೆಯೇ ಹೊರತು ಅಧ್ಯಕ್ಷರಿಗಲ್ಲ” ಎಂದು ಹೇಳಿ ಈ ಸುಂಕವನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಗ ವಸೂಲಿ ಮಾಡಲಾಗಿದ್ದ ಸುಂಕವನ್ನು ಸರ್ಕಾರ ಈಗ ವಾಪಸ್ ಮಾಡಬೇಕಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕೆಗಳಿಗೆ ಇರಾನ್​ನ ‘ಸೊಳ್ಳೆ ಪಡೆಗಳ’ ಕಾಟ

ರೀಫಂಡ್ ಪ್ರಕ್ರಿಯೆಯ ಪ್ರಮುಖ ಅಂಶಗಳು

ಸುಮಾರು 166 ಬಿಲಿಯನ್ ಡಾಲರ್ ಹಣವನ್ನು ಸರ್ಕಾರ ಉದ್ಯಮಿಗಳಿಗೆ ಮರಳಿ ನೀಡಬೇಕಿದೆ. ಸುಮಾರು 3,30,000 ಆಮದುದಾರರು ಈ ಹಣ ಪಡೆಯಲು ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸಿದ 60 ರಿಂದ 90 ದಿನಗಳೊಳಗೆ ಕಂಪನಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.

ಇದಕ್ಕಾಗಿ ‘CAPE’ ಎಂಬ ವಿಶೇಷ ಡಿಜಿಟಲ್ ವ್ಯವಸ್ಥೆಯನ್ನು ಅಮೆರಿಕದ ಕಸ್ಟಮ್ಸ್ ಇಲಾಖೆ ಸಿದ್ಧಪಡಿಸಿದೆ.

ಸಾಮಾನ್ಯ ಜನರಿಗೆ ಲಾಭವೇನು?

ಈ ಸುಂಕದಿಂದಾಗಿ ಅಮೆರಿಕದಲ್ಲಿ ಎಲೆಕ್ಟ್ರಾನಿಕ್ಸ್, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಈಗ ಕಂಪನಿಗಳಿಗೆ ಸಾವಿರಾರು ಕೋಟಿ ಹಣ ವಾಪಸ್ ಸಿಗುತ್ತಿರುವುದರಿಂದ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಕಡಿಮೆ ಮಾಡುವ ಸಾಧ್ಯತೆ ಇದೆ. ಫೆಡ್ಎಕ್ಸ್ (FedEx) ನಂತಹ ಕೆಲವು ಕಂಪನಿಗಳು ಈಗಾಗಲೇ ಗ್ರಾಹಕರಿಂದ ವಸೂಲಿ ಮಾಡಿದ್ದ ಸುಂಕದ ಹಣವನ್ನು ಮರಳಿ ನೀಡುವುದಾಗಿ ಘೋಷಿಸಿವೆ.

ಇದನ್ನೂ ಓದಿ: ‘ನಮ್ಮ ಪರಮಾಣು ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ’: ಇರಾನ್ ಅಧ್ಯಕ್ಷರ ಗುಡುಗು

ಮಾರುಕಟ್ಟೆಗೆ ಇಷ್ಟು ದೊಡ್ಡ ಮೊತ್ತದ ಹಣ ಹರಿಯುತ್ತಿರುವುದರಿಂದ ಅಮೆರಿಕದ ಆರ್ಥಿಕತೆಗೆ ದೊಡ್ಡ ಬೂಸ್ಟ್ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಬೆಳವಣಿಗೆಯು ಸಣ್ಣ ಉದ್ದಿಮೆಗಳಿಗೆ ದೊಡ್ಡ ಗೆಲುವು ಕೊಟ್ಟಿದೆ ಎಂದೂ ಹೇಳಲಾಗುತ್ತಿದೆ. ಅಕ್ರಮವಾಗಿ ವಸೂಲಿ ಮಾಡಿದ್ದ ಪ್ರತಿ ಪೈಸೆ ಈಗ ಜನರಿಗೆ ವಾಪಸ್ ಸಿಗುತ್ತಿದೆ ಎಂದು ಅಮೆರಿಕದ ಸಣ್ಣ ಉದ್ಯಮಿಗಳ ಒಕ್ಕೂಟ ಸಂತಸ ವ್ಯಕ್ತಪಡಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us