ಪ್ರಧಾನ ಮಂತ್ರಿ ಆವಾಸ್ ಯೋಜನೆಯು (PMAY) ಭಾರತ ಸರ್ಕಾರವು ಪ್ರಾರಂಭಿಸಿದ ವಸತಿ ಯೋಜನೆಯಾಗಿದೆ. ಇದನ್ನು 25ನೇ ಜೂನ್ 2015ರಂದು ಪ್ರಾರಂಭಿಸಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (UTs) ಮತ್ತು ಕೇಂದ್ರೀಯ ನೋಡಲ್ ಏಜೆನ್ಸಿಗಳ (CNAs) ಮೂಲಕ ಎಲ್ಲ ಅರ್ಹ ಕುಟುಂಬಗಳು/ಫಲಾನುಭವಿಗಳಿಗೆ ಸುಮಾರು 1.12 ಕೋಟಿ ಮನೆಗಳ ವ್ಯಾಲಿಡೇಟ್ ಬೇಡಿಕೆ ವಿರುದ್ಧ ಮನೆಗಳನ್ನು ಒದಗಿಸಲು ಮಿಷನ್ ಅನುಷ್ಠಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ಸಹಾಯವನ್ನು ಒದಗಿಸುತ್ತದೆ. ಆರ್ಥಿಕವಾಗಿ ದುರ್ಬಲ ವರ್ಗಗಳು, ನಗರ ಪ್ರದೇಶದ ಕಡಿಮೆ-ಆದಾಯದ ಗುಂಪುಗಳು ಮತ್ತು ಗ್ರಾಮೀಣ ಬಡವರ ಅನುಕೂಲಕ್ಕಾಗಿ ಈ ಯೋಜನೆಯಿದೆ. ಈ ಹಿಂದಿನ ಯೋಜನೆಗಳಿಗಿಂತ ಭಿನ್ನ ಎಂಬಂತೆ ಆರ್ಥಿಕ ದುರ್ಬಲ ವರ್ಗದವರು (EWS) ಮತ್ತು ಕಡಿಮೆ ಆದಾಯದ ಗುಂಪಿನಿಂದ (LIG) ಮಹಿಳೆಯರ ಸಬಲೀಕರಣದ ಕಡೆಗೆ ಸರ್ಕಾರದ ಪ್ರಯತ್ನಗಳ ಮುಂದುವರಿಕೆಯಾಗಿ, PMAY (U) ಈ ಮಿಷನ್ ಅಡಿಯಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರು ಮನೆಯ ಮಾಲೀಕರು ಅಥವಾ ಸಹ-ಮಾಲೀಕರಾಗಿರಬೇಕು ಎಂಬ ಕಡ್ಡಾಯವಾದ ನಿಬಂಧನೆ ಮಾಡಿದೆ.
ಇದು ಆರ್ಥಿಕವಾಗಿ ದುರ್ಬಲ, ಕಡಿಮೆ-ಆದಾಯದ ಮತ್ತು ಮಧ್ಯಮ-ಆದಾಯದ ಗುಂಪುಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಗೆ ವಸತಿ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿಗಳನ್ನು ಸಹ ನೀಡುತ್ತದೆ. ಅಂದಹಾಗೆ ಈ ಕಾರ್ಯಕ್ರಮವನ್ನು ಕ್ರಮವಾಗಿ ನಗರ ಮತ್ತು ಗ್ರಾಮೀಣ ಜನರಿಗೆ ಅನುಕೂಲವಾಗುವ ಪಿಎಂಎವೈ ನಗರ (PMAY – U) ಮತ್ತು ಪಿಎಂಎವೈ ಗ್ರಾಮೀಣ (PMAY – G) ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಹೀಗಿವೆ:
ಗುರುತಿನ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ)
ವಿಳಾಸದ ಪುರಾವೆ
ಆದಾಯದ ಪುರಾವೆ (ಫಾರ್ಮ್ 16, ಬ್ಯಾಂಕ್ ಖಾತೆ ಹೇಳಿಕೆ, ಇತ್ತೀಚಿನ ಐಟಿ ರಿಟರ್ನ್ಸ್)
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಮುಖ ವಿಭಾಗಗಳು:
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಾಲ್ಕು ವಿಭಾಗಗಳಿವೆ.
ಆರ್ಥಿಕವಾಗಿ ದುರ್ಬಲ ವಿಭಾಗ (EWS): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಹೆಚ್ಚಿರಬಾರದು.
ಕಡಿಮೆ ಆದಾಯದ ಗುಂಪು (LIG): ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷದಿಂದ ರೂ. 6 ಲಕ್ಷ.
ಮಧ್ಯಮ ಆದಾಯ ಗುಂಪು (MIGs): ಕುಟುಂಬದ ವಾರ್ಷಿಕ ಆದಾಯ ರೂ. 6 ಲಕ್ಷದಿಂದ ರೂ. 18 ಲಕ್ಷ.
ಕೊಳೆಗೇರಿ ನಿವಾಸಿಗಳು: ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಜನರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?:
ಹಂತ 1: ನೀವು PMAYಗೆ ಅರ್ಹತೆ ಪಡೆದ ವರ್ಗವನ್ನು ಗುರುತಿಸಿ.
ಹಂತ 2: ಆ ನಂತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://pmaymis.gov.in.
ಹಂತ 3: ಮುಖ್ಯ ಮೆನುವಿನಲ್ಲಿ ‘Citizen Assessment’ ಕ್ಲಿಕ್ ಮಾಡಿ ಮತ್ತು ಅರ್ಜಿದಾರರ ವರ್ಗವನ್ನು ಆಯ್ಕೆ ಮಾಡಿ.
ಹಂತ 4: ನಿಮ್ಮನ್ನು ಬೇರೆ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ, ಅಲ್ಲಿ ನಿಮ್ಮ ಆಧಾರ್ ವಿವರಗಳನ್ನು ನಮೂದಿಸಬೇಕು.
ಹಂತ 5: ನಿಮ್ಮ ವೈಯಕ್ತಿಕ, ಆದಾಯ, ಬ್ಯಾಂಕ್ ಖಾತೆ ವಿವರಗಳು ಮತ್ತು ಪ್ರಸ್ತುತ ವಸತಿ ವಿಳಾಸದೊಂದಿಗೆ ಆನ್‌ಲೈನ್ PMAY ಅರ್ಜಿಯನ್ನು ಭರ್ತಿ ಮಾಡಿ.
ಹಂತ 6: ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, ನಿಖರತೆಗಾಗಿ ವಿವರಗಳನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.
ಪ್ರಧಾನ ಮಂತ್ರಿ ಆವಾಸ್ ಯೋಜನಾ ಆಫ್‌ಲೈನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?:
ರಾಜ್ಯ ಸರ್ಕಾರಗಳು ನಿರ್ವಹಿಸುವ ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿದೆ. ಆಫ್‌ಲೈನ್ ಫಾರ್ಮ್‌ಗಳನ್ನು ರೂ. 25 ಜತೆಗೆ ಜಿಎಸ್ಟಿ ಜತೆ ಭರ್ತಿ ಮಾಡಬಹುದು.
ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಕಂಪನಿಗಳು ಹಣವನ್ನು ಸಂಗ್ರಹಿಸಲು ಅನುಮತಿಸುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ನೀವು ಯಾವುದೇ ಬ್ಯಾಂಕ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿ ಅಥವಾ ಹೌಸಿಂಗ್ ಫೈನಾನ್ಸ್ ಕಂಪೆನಿಗೆ ಭೇಟಿ ನೀಡಬಹುದು ಮತ್ತು ಯೋಜನೆಯ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ನೀವು ಫಾರ್ಮ್‌ನಲ್ಲಿ ಉಲ್ಲೇಖಿಸಲಾದ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಅರ್ಹತೆಯನ್ನು ಪರಿಶೀಲಿಸಬೇಕು.
ಕೊಳೆಗೇರಿ ನಿವಾಸಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?:
– ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ pmaymis.gov.inನಲ್ಲಿ ಲಾಗ್ ಇನ್ ಮಾಡಿ
– ‘ಸಿಟಿಜನ್ ಅಸೆಸ್‌ಮೆಂಟ್’ ಡ್ರಾಪ್‌ಡೌನ್‌ನಲ್ಲಿ ‘ಸ್ಲಂ ನಿವಾಸಿಗಳಿಗಾಗಿ’ ಆಯ್ಕೆಯನ್ನು ಆರಿಸಿ.
– ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು submit ಕ್ಲಿಕ್ ಮಾಡಿ. (ಒದಗಿಸಿದ ಆಧಾರ್ ವಿವರಗಳು ಸರಿಯಾಗಿವೆಯೇ ಎಂದು ಸೈಟ್ ಪರಿಶೀಲಿಸುತ್ತದೆ).
– ಒದಗಿಸಿದ ಮಾಹಿತಿಯು ಸರಿಯಾಗಿದ್ದರೆ, ಮುಂದಿನ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ನಿಮ್ಮ ಹೆಸರು, ಆದಾಯ, ಸಂಖ್ಯೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಮಾಹಿತಿಯನ್ನು ನೀವು ಒದಗಿಸಬೇಕಾಗುತ್ತದೆ. ಕುಟುಂಬದ ಸದಸ್ಯರ, ವಸತಿ ವಿಳಾಸ, ಸಂಪರ್ಕ ಸಂಖ್ಯೆ, ಕುಟುಂಬದ ಮುಖ್ಯಸ್ಥನ ವಯಸ್ಸು, ಧರ್ಮ, ಜಾತಿ ಮತ್ತು ಮುಂತಾದವು ಸಹ ನೀಡಬೇಕು.
– ಎಲ್ಲ ಮಾಹಿತಿಯನ್ನು ಒದಗಿಸಿದ ನಂತರ ಕೆಳಗೆ ಸ್ಕ್ರಾಲ್ ಮಾಡಿ, ಬಾಕ್ಸ್‌ನಲ್ಲಿ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ ಮತ್ತು submit ಕ್ಲಿಕ್ ಮಾಡಿ.
ಸೂಚನೆ:
‘citizen assessment’ ಅಡಿಯಲ್ಲಿ ‘ಟ್ರ್ಯಾಕ್ ಯುವರ್ ಅಸೆಸ್‌ಮೆಂಟ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ನಂತರ ಅಪ್ಲಿಕೇಷನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ: ವಿತ್ತ ಸಚಿವೆ
Published On - 2:40 pm, Thu, 7 April 22