
ನವದೆಹಲಿ, ಅಕ್ಟೋಬರ್ 22: ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ಬಿಕ್ಕಟ್ಟು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ತೀವ್ರ ಆರ್ಥಿಕ ಕುಸಿತದ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ. ತೈಲ ಉತ್ಪಾದಿಸುವ ಮಧ್ಯಪ್ರಾಚ್ಯ ದೇಶಗಳಲ್ಲಿ 2026ರಲ್ಲಿ ಆರ್ಥಿಕ ಬೆಳವಣಿಗೆ ಮೈನಸ್ 1.3 ಪ್ರತಿಶತದಷ್ಟು ದಾಖಲಾಗಬಹುದು ಎಂದು ಐಎಂಎಫ್ನ ವರದಿಯೊಂದು ಹೇಳಿದೆ. ಮೆನಾ ಗುಂಪಿನ ದೇಶಗಳಿಗೆ 2026ರ ವರ್ಷವು ಹರ್ಷದಾಯಕವಾಗಿರುವುದಿಲ್ಲ ಎನ್ನುತ್ತಿದೆ ಐಎಂಎಫ್.
ಉತ್ತರ ಆಫ್ರಿಕನ್ ದೇಶಗಳು ಹಾಗೂ ಪಾಕಿಸ್ತಾನದ ಆರ್ಥಿಕತೆಗಳು 2026ರಲ್ಲಿ ತೀವ್ರ ಹಿನ್ನಡೆ ಸಾಧಿಸುತ್ತವೆ. ಮಧ್ಯಪ್ರಾಚ್ಯದ ಆರ್ಥಿಕತೆ ಮೈನಸ್ ದಾಖಲಿಸಿದರೂ 2027ರಲ್ಲಿ ಶೇ. 6.6 ರ ದರಕ್ಕೆ ಪುಟಿದೇಳಬಹುದು ಎಂದು ಐಎಂಎಫ್ ಅಂದಾಜಿಸಿದೆ. ಆದರೆ, ಈ ಪುಟಿದೇಳುವಿಕೆಯು ತೈಲ ಬಿಕ್ಕಟ್ಟು ಎಷ್ಟು ವೇಗ ಶಮನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ
2027ರ ಆರಂಭದಲ್ಲೇ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಕೊನೆಗೊಳ್ಳಬಹುದು ಎಂಬ ಅಂದಾಜಿನಲ್ಲಿ ಐಎಂಎಫ್ ಈ ಲೆಕ್ಕಾಚಾರ ಹಾಕಿದೆ. ಒಂದು ವೇಳೆ ಮುಂದಿನ ವರ್ಷವೂ ಬಿಕ್ಕಟ್ಟು ಮುಂದುವರಿದಲ್ಲಿ ಈ ಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಆಘಾತವಾಗಲಿದೆ.
ಇದೇ ವೇಳೆ, ಮಧ್ಯ ಏಷ್ಯ (Central Asia) ಮತ್ತು ಕಾಕಸಸ್ (Caucasus) ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಶೇ. 5ರ ಆಸುಪಾಸಿನ ದರದಲ್ಲಿ ಸಾಗಲಿದೆ ಎಂದು ಐಎಂಎಫ್ ಅಂದಾಜು ಹಾಕಿದೆ. ಕಜಕಸ್ತಾನ, ಉಜ್ಬೆಕಿಸ್ತಾನ, ಟುರ್ಕ್ಮೆನಿಸ್ತಾನ, ಕಿರ್ಗಿಸ್ತಾನ ಇತ್ಯಾದಿ ದೇಶಗಳು ಮಧ್ಯ ಏಷ್ಯಾ ಭಾಗಕ್ಕೆ ಸೇರುತ್ತವೆ. ಆರ್ಮೇನಿಯಾ, ಅಜರ್ಬೈಜನ್, ಜಾರ್ಜಿಯಾ, ದಕ್ಷಿಣ ರಷ್ಯನ್ ದೇಶಗಳು ಕಾಕಸಸ್ ಪ್ರದೇಶದ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ: 2027ರಲ್ಲಿ ಭಾರತದ್ದು 4.52 ಟ್ರಿಲಿಯನ್ ಡಾಲರ್ ಜಿಡಿಪಿ; ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ: ಐಎಂಎಫ್ ವರದಿ
ಕಳೆದ ವಾರ ಬಿಡುಗಡೆಯಾದ ಮತ್ತೊಂದು ಐಎಂಎಫ್ ವರದಿ ಪ್ರಕಾರ, ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದ ಬೆಳವಣಿಗೆ ಸಾಧಿಸಲಿದೆ. 2026 ಮತ್ತು 2027ರಲ್ಲಿ ಭಾರತ ಶೇ 7ರ ದರದಲ್ಲಿ ಅಭಿವೃದ್ಧಿ ಹೊಂದಬಹುದು ಎನ್ನುವುದು ಐಎಂಎಫ್ ಎಣಿಕೆ. ಉದಯೋನ್ಮುಖ ಆರ್ಥಿಕತೆಗಳ ದೇಶಗಳೂ ಕೂಡ ತಕ್ಕಮಟ್ಟಿಗೆ ಬೆಳವಣಿಗೆ ಹೊಂದುತ್ತವೆ. ಶ್ರೀಮಂತ ದೇಶಗಳು ತೀರ ಮಂದಗತಿಯಲ್ಲಿ ಬೆಳವಣಿಗೆ ಹೊಂದಲಿವೆ ಎನ್ನುತ್ತದೆ ಐಎಂಎಫ್ ವರದಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ